ಪ್ರಕೃತಿ, ಭೂಮಿ ಆರೋಗ್ಯಕರವಾಗಿದ್ದರೆ ಮಾತ್ರ ನಮ್ಮ ಬದುಕು ಹಸನಾಗಿರುತ್ತದೆ. ಪರಿಸರದಲ್ಲಿ ನಾವು ಮಾಡುವ ತಪ್ಪುಗಳಿಂದ ಪ್ರಕೃತಿಯ ವಿಕೋಪಕ್ಕೆ ನಾವು ಒಳಗಾಗುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ದೇಶದ ಪ್ರಕೃತಿ ಸಂಪನ್ಮೂಲ ಅಗಾಧವಾಗಿದೆ. ಆದರೆ ನಾವು ಪೋಲು ಮಾಡುತ್ತಿದ್ದೇವೆ. ಈ ಪೋಲು ನಿಲ್ಲದಿದ್ದರೆ ಮುಂದೊಂದು ದಿನ ನಾವು ನಮ್ಮ ಉಸಿರಾಟಕ್ಕೆ ಬೇಕಾದ ಆಮ್ಲಜನಕ, ನೀರನ್ನು ಕೊಂಡು ಕೊಳ್ಳ ಬೇಕಾದ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಪ್ರತಿ ಸಂಪನ್ಮೂಲ ಪೋಲು ಮಾಡದೆ ಉಳಿಸುವ ಕೆಲಸ ಮಾಡಬೇಕಿದೆ ಎಂದು ಚಿತ್ರನಟ ಕಿಶೋರ್ ಕುಮಾರ್ ತಿಳಿಸಿದರು.

ನಗರದ ಬಿಬಿ ರಸ್ತೆಯ ಕನ್ನಡ ಭವನದಲ್ಲಿ ಶುಕ್ರವಾರ ನಡೆದ ಉಸಿರಿಗಾಗಿ ಹಸಿರು ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರಕೃತಿ, ಭೂಮಿ ಆರೋಗ್ಯಕರವಾಗಿದ್ದರೆ ಮಾತ್ರ ನಮ್ಮ ಬದುಕು ಹಸನಾಗಿರುತ್ತದೆ. ಪರಿಸರದಲ್ಲಿ ನಾವು ಮಾಡುವ ತಪ್ಪುಗಳಿಂದ ಪ್ರಕೃತಿಯ ವಿಕೋಪಕ್ಕೆ ನಾವು ಒಳಗಾಗುತ್ತಿದ್ದೇವೆ. ಪ್ರಕೃತಿಯಲ್ಲಿ ಅನೇಕ ಬದಲಾವಣೆ ಕಾಣುತ್ತಿದ್ದೇವೆ. ಪ್ರಕೃತಿಯಲ್ಲಾಗುವ ಅನಾಹುತಗಳನ್ನು ತಪ್ಪಿಸಬೇಕಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರು ನಗರ ವಿವಿ ಕುಲಪತಿ ಪ್ರೊ.ಬಿ.ರಮೇಶ್ ಮಾತನಾಡಿ, ನಮ್ಮ ತತ್ ತಕ್ಷಣದ ಅಗತ್ಯತೆಗಳ ಪೋರೈಕೆಗಾಗಿ ಪರಿಸರದ ನೀರು, ಗಿಡಮರ, ಜೀವವೈವಿದ್ಯಗಳನ್ನು ಅತಿಯಾಗಿ ಬಳಸಿ ಸಂಕಷ್ಟಕ್ಕೆ ಒಳಗಾಗುತ್ತಿದ್ದೇವೆ ಮತ್ತು ಮುಂದಿನ ಪೀಳಿಗೆಯ ಭವಿಷ್ಯವನ್ನು ಮರೆಯುತ್ತಿದ್ದೇವೆ. ನಮಗೆ ಮತ್ತು ನಮ್ಮ ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸಲು ಪರಿಸರ ಜಾಗೃತಿ ನಿರ್ವಹಿಸುವ ಜವಾಬ್ದಾರಿ ಅರಿಯಬೇಕು ಎಂದು ತಿಳಿಸಿದರು.

ಕುಲಸಚಿವ ಪ್ರೋ.ಡಾ.ಎನ್.ಲೋಕನಾಥ್ ಮಾತನಾಡಿ, ಪರಿಸರ ಉಳಿಸಲು ಪ್ರತಿಯೊಬ್ಬರೂ ಪ್ರತಿ ವರ್ಷ ತಮ್ಮ ಹುಟ್ಟು ಹಬ್ಬದಂದು ಕನಿಷ್ಟ ಮೂರು ಗಿಡಗಳನ್ನಾದರೂ ನೆಟ್ಟು ಪೋಷಿಸ ಬೇಕು ಎಂದು ಸಲಹೆ ನೀಡಿದರು.

ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆರ್.ಆಂಜನೇಯರೆಡ್ಡಿ ಮಾತನಾಡಿ, ಬಯಲು ಸೀಮೆಯ ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದಿದ್ದು , ಅತ್ಯಂತ ಆಳದಲ್ಲಿ ಸಿಗುವ ನೀರು ಕುಡಿಯಲು ಯೋಗ್ಯವಿಲ್ಲ, ಕುಡಿಯುವ ನೀರು ಮತ್ತು ಕೃಷಿ ಬೆಳೆಗಳನ್ನು ವಿಷಪೂರಿತಗೊಳಿಸುವುದರ ಜೊತೆಗೆ ಜನರು ಮತ್ತು ಜಾನುವಾರುಗಳನ್ನು ಮಾರಣಾಂತಿಕ ಖಾಯಿಲೆಗಳು ದೂಡುತ್ತಿದೆ. ಆದ್ದರಿಂದ ಪ್ರತಿಯೊಬ್ಬರಿಗೂ ಪರಿಸರ ಜಾಗೃತಿ ಅವಶ್ಯವಾಗಿ ಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಸಿರಿಗಾಗಿ ಹಸಿರು ಸಂಸ್ಥೆಯ ಹತ್ತು ವರ್ಷಗಳ ಕಾರ್ಯಕ್ರಮಗಳ ಸ್ಮರಣ ಸಂಚಿಕೆ ಹಸಿರ ಹಾದಿ ಯನ್ನು ಗಣ್ಯರು ಬಿಡುಗಡೆ ಮಾಡಿದರು. ಈ ಸಂಧರ್ಭದಲ್ಲಿ ಉಸಿರಿಗಾಗಿ ಹಸಿರು ಸಂಸ್ಥೆಯ ಕಾರ್ಯಕಾರಿ ಟ್ರಸ್ಟಿ ಡಾ.ಎನ್.ಗಂಗಾಧರ ರೆಡ್ಡಿ, ಕಾರ್ಯದರ್ಶಿ ಸಿ.ಎಲ್.ವೆಂಕಟರೆಡ್ಡಿ ಇದ್ದರು.

ಸಿಕೆಬಿ-2 ನಗರದ ಬಿಬಿ ರಸ್ತೆಯ ಕನ್ನಡ ಭವನದಲ್ಲಿ ನಡೆದ ಉಸಿರಿಗಾಗಿ ಹಸಿರು ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ಹತ್ತು ವರ್ಷಗಳ ಕಾರ್ಯಕ್ರಮಗಳ ಸ್ಮರಣ ಸಂಚಿಕೆ ಹಸಿರ ಹಾದಿ ಯನ್ನು ಗಣ್ಯರು ಬಿಡುಗಡೆ ಮಾಡಿದರು