ನೀರಿನ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ

| Published : Feb 24 2025, 12:31 AM IST

ಸಾರಾಂಶ

ತಾಲೂಕಿನ ನೊಣವಿನಕೆರೆ ಹೋಬಳಿ ನಾಗರಘಟ್ಟ ಗ್ರಾಮದಲ್ಲಿ ಕೃಷಿ ಇಲಾಖೆ, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಅಟಲ್ ಭೂಜಲ್ ಯೋಜನೆ ವತಿಯಿಂದ ರೈತರಿಗೆ ಅಟಲ್ ಭೂಜಲ್ ಯೋಜನೆಯಡಿ ಸಮುದಾಯ ಸಹಭಾಗಿತ್ವದೊಂದಿಗೆ ಅಂತರ್ಜಲ ನಿರ್ವಹಣೆ, ಜಲ ಭದ್ರತಾ ಯೋಜನೆ ಸಿದ್ಧಪಡಿಸುವುದು ಮತ್ತು ನೀರಿನ ಬೇಡಿಕೆ ಕಡಿಮೆ ಮಾಡುವ ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳ ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ತಿಪಟೂರು

ಸಹಾಯಕ ಕೃಷಿ ನಿರ್ದೇಶಕ ಡಾ.ಎಂ.ಪಿ.ಪವನ್ ಮಾತನಾಡಿ, ಭೂಮಿಯ ಮೇಲಿನ ಶೇ.70ರಷ್ಟು ನೀರಿದ್ದು ಅದರಲ್ಲಿ ಬಳಕೆಗೆ ಸಿಗುವುದು ಶೇ.೨ರಷ್ಟು ಮಾತ್ರ. ನೀರಿನ ಮಿತ ಬಳಕೆಗೆ ಒತ್ತು ನೀಡುವುದು ಮುಂದಿನ ಪೀಳಿಗೆಗೆ ಪರಿಸರ ಸಮತೋಲನಕ್ಕೆ, ಪಶು ಪಕ್ಷಿಗಳ ಸಂರಕ್ಷಣೆಗೆ ನೀರನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ. ಅಟಲ್ ಭೂಜಲ್ ಯೋಜನೆಯಡಿ ನೀಡುತ್ತಿರುವ ತುಂತುರು ನೀರಾವರಿ ಅಳವಡಿಕೆಯಿಂದ ಕೃಷಿಯಲ್ಲಿ ಶೇ.೩೦-೪೦ರಷ್ಟು ನೀರು ಉಳಿತಾಯವಾಗಲಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ಮಳೆಯ ನೀರನ್ನು ಕಂದಕ ಬದು, ಕೃಷಿ ಹೊಂಡಗಳು, ನಾಲಾ ಬದು, ಚೆಕ್‌ಡ್ಯಾಮ್ ನಿರ್ಮಿಸಿಕೊಳ್ಳುವ ಮೂಲಕ ನೀರನ್ನು ಭೂಮಿಗೆ ಹಿಂಗಿಸಬೇಕು. ಕೃಷಿ ಇಲಾಖೆಯಲ್ಲಿ ಲಭ್ಯವಿರುವ ಯೋಜನೆಗಳನ್ನು ಬಳಸಿಕೊಂಡು ರೈತರು ಉತ್ತಮ ಫಸಲು ತೆಗೆದು ಆರ್ಥಿಕ ಸದೃಢರಾಗಬೇಕೆಂದರು.

ವೃತ್ತ ಸಹಾಯಕ ಕೃಷಿ ಅಧಿಕಾರಿ ರಾಜಶೇಖರ್ ಮಾತನಾಡಿ, ನೈಸರ್ಗಿಕ ಕೃಷಿ ಅಳವಡಿಕೆಯಿಂದ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡಬಹುದು. ಸಾವಯವ ಹೊದಿಕೆ ಪದ್ಧತಿ ಅಳವಡಿಸಿಕೊಂಡು ನೀರು ಆವಿಯಾಗುವುದನ್ನು ನಿಯಂತ್ರಿಸಬಹುದು. ಈ ಕ್ರಮಗಳನ್ನು ಅಳವಡಿಸಿಕೊಂಡು ಶುದ್ಧ ನೀರು ಮತ್ತು ಆರೋಗ್ಯಕರ ಆಹಾರವನ್ನು ಮುಂದಿನ ಪೀಳಿಗೆಗೆ ನೀಡಲು ಸಹಕಾರಿ ಎಂದು ಎಲ್ಲಾ ರೈತರಿಂದ ಪ್ರತಿಜ್ಞೆ ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ಡಿಎಟಿಸಿ ಸಹಾಯಕ ಕೃಷಿ ನಿರ್ದೇಶಕಿ ವಿಜಯಮೂರ್ತಿ, ಸಹಾಯಕ ಕೃಷಿ ನಿರ್ದೇಶಕಿ ಸುಮ, ಅಟಲ್ ಭೂಜಲ್ ಯೋಜನೆಯ ರಾಜ್ಯ ಕಾರ್ಯಕ್ರಮ ನಿರ್ವಹಣಾ ಘಟಕ ಐ.ಇ.ಸಿ ತಜ್ಞೆ ಹೇಮಪ್ರಸನ್ನ, ಪ್ರಗತಿಪರ ರೈತ ಪ್ರಭುಸ್ವಾಮಿ, ನೊಣವಿನಕೆರೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಿ.ಎಸ್. ದಿವ್ಯ, ಸುಮ, ಡಿಪಿಎಂಯು ಕೃಷಿ ತಜ್ಞ ಗುರುಶಿವ ಮತ್ತಿತರರಿದ್ದರು.