ಮಂಗಳೂರು: ಜೂನ್ ತಿಂಗಳವರೆಗೆ ಮಂಗಳೂರು ನಗರಕ್ಕೆ ನೀರಿನ ಕೊರತೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ನಗರಕ್ಕೆ ನೀರು ಪೂರೈಕೆಯಾಗುವ ತುಂಬೆ ಕಿಂಡಿ ಅಣೆಕಟ್ಟಿನ ಬಳಿ ಗಂಗಾಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಬಾರಿ ಮಳೆ ವಿಳಂಬವಾಗಿ ಶುರುವಾಗಲಿದ್ದು, ಬೇಸಗೆ ಅವಧಿ ಏರಿಕೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟು ಹಾಗೂ ಅದರ ಮೇಲಿನ ಎಎಂಆರ್ ಡ್ಯಾಂನಲ್ಲಿ ಮಳೆಗಾಲದವರೆಗೆ ನೀರಿನ ಲಭ್ಯತೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.ತುಂಬೆ ಕಿಂಡಿ ಅಣೆಕಟ್ಟಿನ ನೀರಿನ ಗರಿಷ್ಠ ಮಟ್ಟ 6 ಮೀ. ಆಗಿದ್ದು, 10.42 ಎಂಸಿಎಂ ಸಂಗ್ರಹ ಸಾಮರ್ಥ್ಯ ಹೊಂದಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ, ತುಂಬೆ, ಪುದು, ಅಡ್ಯಾರ್ ಗ್ರಾಮ ಪಂಚಾಯ್ತಿಗಳು, ಮೂಲ್ಕಿ ಹಾಗೂ ಉಳ್ಳಾಲ ಪ್ರದೇಶಗಳಿಗೆ ಪ್ರತಿದಿನ ಸುಮಾರು 0.26 ಎಂಸಿಎಂ ನೀರನ್ನು ಅಣೆಕಟ್ಟಿನಿಂದ ಎತ್ತಲಾಗುತ್ತಿದೆ. ಅಣೆಕಟ್ಟಿನ ಹಿನ್ನೀರಿನಲ್ಲಿ ಜ್ಯಾಕ್‌ವೆಲ್ ಪಂಪ್ ಹೌಸ್ ಮೂಲಕ ಐದು ಶುದ್ಧೀಕರಣ ಘಟಕಗಳಿಗೆ ನೀರು ಹರಿಸಿ ಶುದ್ಧೀಕರಿಸಿ ಪಂಪುಗಳ ಮೂಲಕ ಓವರ್ ಹೆಡ್ ಮತ್ತು ಜಿಎಲ್‌ಎಸ್‌ಆರ್ ಟ್ಯಾಂಕ್‌ಗಳಿಗೆ ಹರಿಸಿ ಪೂರೈಕೆ ಮಾಡಲಾಗುತ್ತಿದೆ.ಸಮಾರಂಭದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಮಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತ ನರೇಶ್ ಶೆಣೈ, ಪಾಲಿಕೆಯ ಮಾಜಿ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.
ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಸ್ವಾಗತಿಸಿ, ನಿರೂಪಿಸಿದರು.