ಕರದಂಟು ನಾಡಿಗೆ ಜಲಕಂಟಕ

| Published : Jul 27 2024, 12:58 AM IST

ಸಾರಾಂಶ

ಮಹಾಮಳೆಯಿಂದ ಗೋಕಾಕ ತಾಲೂಕಿನಲ್ಲಿ ಪ್ರವಾಹ ಎದುರಾಗಿದ್ದು, ಜನವಸತಿ ಪ್ರದೇಶಕ್ಕೆ ನೀರು ನುಗ್ಗುತ್ತಿರುವುದರಿಂದ ತಾಲೂಕಾಡಳಿತ, ಪೊಲೀಸ್ ಇಲಾಖೆ ಅಧಿಕಾರಿಗಳ ತಂಡ ನದಿ ತಟದ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಗೋಕಾಕ

ಮಹಾಮಳೆಯಿಂದ ಗೋಕಾಕ ತಾಲೂಕಿನಲ್ಲಿ ಪ್ರವಾಹ ಎದುರಾಗಿದ್ದು, ಜನವಸತಿ ಪ್ರದೇಶಕ್ಕೆ ನೀರು ನುಗ್ಗುತ್ತಿರುವುದರಿಂದ ತಾಲೂಕಾಡಳಿತ, ಪೊಲೀಸ್ ಇಲಾಖೆ ಅಧಿಕಾರಿಗಳ ತಂಡ ನದಿ ತಟದ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುತ್ತಿದ್ದಾರೆ.

ನಗರದ ದಾಳಂಬ್ರಿ ತೋಟ, ಹಳೇ ದನದ ಪೇಟೆಯ ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದ್ದು, ಬೋಜಗಾರ ಗಲ್ಲಿ, ಕುಂಬಾರ ಗಲ್ಲಿ, ಮಟನ್ ಮಾರ್ಕೆಟ್ ಸೇರಿದಂತೆ ಜನವಸತಿ ಪ್ರದೇಶಗಳ ಜನರನ್ನು ನಗರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸ್ಥಾಪಿಸಲಾದ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ತಾಲೂಕಿನ ಕುಂದರಗಿ, ಪಾಶ್ಚಾಪುರ ಗ್ರಾಮಗಳಲ್ಲಿ ಮಾರ್ಕಂಡೇಯ ನದಿ ಹಾಗೂ ಬಳ್ಳಾರಿ ನಾಲಾ ಹಾಗೂ ಅಡಿಬಟ್ಟಿ, ಚಿಗಡೊಳ್ಳಿ, ಉದಗಟ್ಟಿ, ತಳಕಟ್ನಾಳ ಗ್ರಾಮಗಳಲ್ಲಿ ಘಟಪ್ರಭಾ ನದಿಯ ಹರಿದು ಬಂದಿರುವುದರಿಂದ ಜನರನ್ನು ನೆಂಟರ, ಸಂಬಂಧಿಕರ ಮನೆಗೆ ಮತ್ತು ಕಾಳಜಿ ಕೇಂದ್ರಕ್ಕೆ ಜನರು ಸಾಗುತ್ತಿದ್ದಾರೆ. ಹಿಡಕಲ್ ಜಲಾಶಯದಿಂದ ಇನ್ನೂ ಹೆಚ್ಚಿನ ನೀರು ಹರಿಬಿಟ್ಟಲ್ಲಿ ಮೆಳವಂಕಿ, ಹಡಗಿನಾಳ, ಕಲಾರಕೊಪ್ಪ ಗ್ರಾಮಸ್ಥರಿಗೂ ಸಹ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಸ್ಥಳೀಯ ಗ್ರಾಪಂಗಳಿಂದ ಡಂಗೂರ ಸಾರಲಾಗುತ್ತಿದೆ.

ಗೋಕಾಕ ತಾಲೂಕಿನಲ್ಲಿ ಈಗಾಗಲೇ ಹಲವು ಸೇತುವೆಗಳು ಮುಳುಗಡೆಯಾಗಿದ್ದು, ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿ, ಸಂಕೇಶ್ವರ-ಗೋಕಾಕ ಸಂಪರ್ಕ ಕಲ್ಪಿಸುವ ಲೋಳಸೂರ ಸೇತುವೆ ಮೇಲೆ ಘಟಪ್ರಭಾ ನದಿಯ ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಸ್ಥಗಿತಗೊಳಿಸಿರುವ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರ ನಿರ್ಬಂಧಿಸಿದ್ದಾರೆ. ಮಳೆಯ ಪ್ರಮಾಣ ಹೆಚ್ಚಾದಲ್ಲಿ ಗೋಕಾಕ-ಕೊಣ್ಣೂರ ಸಂಪರ್ಕ ಕಲ್ಪಿಸುವ ಚಿಕ್ಕಹೊಳಿ ಸೇತುವೆ ಸಹ ಮುಳುಗಡೆಯಾಗುವ ಅಪಾಯ ಎದುರಾಗಿದೆ.

ಈಗಾಗಲೇ ಹಿಡಕಲ್ ಜಲಾಶಯದಿಂದ 40 ಸಾವಿರ, ಹಿರಣ್ಯಕೇಶಿ ನದಿಯಿಂದ 23 ಸಾವಿರ, ಮಾರ್ಕಂಡೇಯ ನದಿ ಮತ್ತು ಬಳ್ಳಾರಿ ನಾಲಾ ಸೇರಿ 10 ಸಾವಿರ ಕ್ಯುಸೆಕ್‌ ಸೇರಿ ಒಟ್ಟು 73 ಸಾವಿರ ಕ್ಯುಸೆಕ್‌ ನೀರು ಘಟಪ್ರಭಾ ನದಿಗೆ ಹರಿದು ಬರುತ್ತಿದ್ದು, ನದಿ ಪಾತ್ರದ ಜನರು ಪ್ರವಾಹ ಭೀತಿ ಎದುರಿಸುವಂತಾಗಿದೆ.

ಸ್ಥಳೀಯ ಸಂಘ ಸಂಸ್ಥೆಗಳಿಂದ ಜಾಗೃತಿ: ಘಟಪ್ರಭಾ ನದಿ ತಟದಲ್ಲಿರುವ ಜನವಸತಿ ಪ್ರದೇಶಗಳಲ್ಲಿಯ ಜನರಿಗೆ ಸ್ಥಳೀಯ ಸಂಘ-ಸಂಸ್ಥೆಯವರು ಮನೆಗಳನ್ನು ಖಾಲಿ ಮಾಡಲು ಸಹಾಯ ಮಾಡುತ್ತಿದ್ದು, ಜನರ ಬಟ್ಟೆ ಬರೆ, ಉಪಯುಕ್ತ ಸಾಮಾನುಗಳು ಸೇರಿ ಎಲ್ಲವನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲು ಸಹಕರಿಸುತ್ತಿದ್ದಾರೆ. ಜನರು ಕಾಳಜಿ ಕೇಂದ್ರಗಳಿಗೆ ತೆರಳಲು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.