ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು
ಪಟ್ಟಣವೂ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ರಾತ್ರಿ ಸುರಿದ ಜೋರು ಮಳೆಗೆ ತಾಲೂಕಿನ ಕೆಸ್ತೂರು ಹಾಗೂ ಕೆ. ಹೊಸೂರು ಗ್ರಾಮಗಳಲ್ಲಿನ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಈ ಗ್ರಾಮಗಳ ಉಪ್ಪಾರ ಹಾಗೂ ನಾಯಕ ಜನಾಂಗಗಳು ವಾಸಿಸುವ ಬೀದಿಗಳು ತಗ್ಗು ಪ್ರದೇಶದಲ್ಲಿವೆ. ಹಾಗಾಗಿ ಗ್ರಾಮದ ಮನೆಗಳಿಗೆ ಮಳೆಯಿಂದ ಏಕಾಏಕಿ ನೀರು ನುಗ್ಗಿದ್ದರಿಂದ ಇಲ್ಲಿನ ಕೆಲ ನಾಗರಿಕರು ವಿಚಲೀತರಾಗಿದ್ದಾರೆ. ರಾತ್ರಿ ಪೂರ್ತಿ ಜಾಗರಣೆ ಮಾಡಿದ್ದು ಮಲಗಲು ಆಗದೆ ಮಳೆ ತಗ್ಗಿದ ಮೇಲೆ ನೀರನ್ನು ಹೊರ ಹಾಕಲು ಹರಸಾಹಸ ಪಟ್ಟಿದ್ದಾರೆ. ಮನೆಗಳಲ್ಲಿದ್ದ ವಸ್ತುಗಳು, ದಿನಸಿ ಪದಾರ್ಥಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಕೆ. ಹೊಸೂರು ಗ್ರಾಮದ ಪಾರ್ಥಸಾರಥಿ, ಜಯಂತಿ, ಮಹದೇವಶೆಟ್ಟಿ, ಕೆಸ್ತೂರು ಮಳೆಗೆ ಕೆಸ್ತೂರು ಗ್ರಾಮದ ಕೆರೆ ತುಂಬಿ ಕೋಡಿ ಬಿದ್ದಿದೆ. ಅಲ್ಲದೆ ರಾಜಕಾಲುವೆಯಲ್ಲಿ ಹರಿದ ನೀರಿಗೆ, ಈ ಗ್ರಾಮದ ಉಪ್ಪಾರ ಬಡಾವಣೆಯ ನಾಗರಾಜು, ಗೆಜ್ಜಶೆಟ್ಟಿ, ಯಶೋಧಮ್ಮ ರವರ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಮಾಡಿದೆ. ಅಲ್ಲದೆ ಮಣ್ಣಿನ ಗೋಡೆ ಇರುವ ಮನೆಗಳಿಗೂ ಹೆಚ್ಚಿನ ಹಾನಿಯಾಗಿದೆ. ಜಾನುವಾರುಗಳು ಕಟ್ಟುವ ಕೊಟ್ಟಿಗೆಗಳಿಗೂ ನೀರು ನುಗ್ಗಿದ್ದು ಇದರ ಆರೋಗ್ಯದ ಮೇಲೂ ಕೂಡ ಕೆಟ್ಟ ಪರಿಣಾಮ ಬೀರಿದೆ. ಹಾಗಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಪರಿಹಾರವನ್ನು ನೀಡಬೇಕು ಎಂದು ಗ್ರಾಮದ ನಂದೀಶ್, ರವಿಕುಮಾರ್ ಸೇರಿದಂತೆ ಅನೇಕ ಗ್ರಾಮಸ್ಥರು ಆಗ್ರಹಿಸಿದ್ದಾರೆ.