ಮನೆಗಳಿಗೆ ನುಗ್ಗಿದ ನೀರು, ನಿದ್ದೆಗೆಟ್ಟ ಜನರು

| Published : Oct 11 2024, 11:50 PM IST

ಸಾರಾಂಶ

ಮೂರುಸಾವಿರ ಮಠದ ಹಿಂಭಾಗದಲ್ಲಿರುವ ಸಿದ್ಧೇಶ್ವರ ನಗರದ ಜಿ. ಅಡ್ಡಾ ಭಾಗದಲ್ಲಿ ಹಲವು ಮನೆಗಳಿಗೆ ತಡರಾತ್ರಿ ಮಳೆನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಇದರಿಂದಾಗಿ ಸ್ಥಳಿಯ ನಿವಾಸಿಗಳು ಪಾಲಿಕೆ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ಹುಬ್ಬಳ್ಳಿ:

ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ರಾತ್ರಿಯಿಡೀ ಸುರಿದ ಕುಂಭದ್ರೋಣ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಕೆರೆ ಕಟ್ಟೆಗಳು, ಹಳ್ಳ- ಕೊಳ್ಳಗಳು ಮೈದುಂಬಿ ಹರಿದಿವೆ. ಉಣಕಲ್‌ ಕೆರೆ ಈ ವರ್ಷದಲ್ಲಿ 3ನೆಯ ಬಾರಿಗೆ ಕೋಡಿ ಬಿದ್ದಿದೆ. ಹಲವೆಡೆ ಹತ್ತಾರು ಮರಗಳು ನೆಲಕ್ಕುರುಳಿವೆ. ತೆಗ್ಗು ಪ್ರದೇಶಗಳಲ್ಲಿನ ಮನೆ, ಅಪಾರ್ಟ್‌ಮೆಂಟ್‌, ವಾಣಿಜ್ಯ ಸಂಕೀರ್ಣಗಳಿಗೆ ಮಳೆ ನೀರು ನುಗ್ಗಿದೆ. ಮಹಾನಗರ ಪಾಲಿಕೆ ವಿಪತ್ತು ನಿರ್ವಹಣಾ ತಂಡ ಪರಿಹಾರ ಕಾರ್ಯಾಚರಣೆಗಿಳಿದಿದೆ.

ಬುಧವಾರ ಸಂಜೆ ವೇಳೆ ಕೆಲ ಕಾಲ ಸುರಿದಿದ್ದ ಮಳೆ ಬಳಿಕ ಶಾಂತವಾಗಿತ್ತು. ಮತ್ತೆ ರಾತ್ರಿ 12ರ ನಂತರ ಶುರುವಾದ ಮಳೆ ಬೆಳಗ್ಗೆ 7ರ ವರೆಗೂ ಸುರಿದು ಹಲವು ಆವಾಂತರ ಸೃಷ್ಟಿಸಿತು. ಚರಂಡಿಗಳೆಲ್ಲ ತುಂಬಿ ನೀರೆಲ್ಲ ರಸ್ತೆ ಮೇಲೆ ಹರಿದು ಜನ ಸಂಚರಿಸುವುದು ಕಷ್ಟಕರವಾಗಿತ್ತು.

ಧಾರವಾಡ ಜಿಲ್ಲೆಯಲ್ಲಿ ಮಳೆಗೆ 27 ಮನೆಗಳಿಗೆ ಹಾನಿ ಸಂಭವಿಸಿದೆ.

ಮನೆಗಳಿಗೆ ನುಗ್ಗಿದ ನೀರು:

ಇಲ್ಲಿನ ಮೂರುಸಾವಿರ ಮಠದ ಹಿಂಭಾಗದಲ್ಲಿರುವ ಸಿದ್ಧೇಶ್ವರ ನಗರದ ಜಿ. ಅಡ್ಡಾ ಭಾಗದಲ್ಲಿ ಹಲವು ಮನೆಗಳಿಗೆ ತಡರಾತ್ರಿ ಮಳೆನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಇದರಿಂದಾಗಿ ಸ್ಥಳಿಯ ನಿವಾಸಿಗಳು ಪಾಲಿಕೆ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ವಿದ್ಯಾನಗರದ ಎಂಟಿಎಸ್‌ ಕಾಲನಿಯಲ್ಲಿ ಹಲವು ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿ ದ್ವಿಚಕ್ರ, ಕಾರು ಸೇರಿದಂತೆ ಹಲವು ವಾಹನಗಳು ನೀರಿನಲ್ಲಿಯೇ ನಿಲ್ಲುವಂತಾಯಿತು. ಕಮರಿಪೇಟೆ ಭಾಗದಲ್ಲಿ ಹಲವು ಮನೆಗಳಿಗೆ ಚರಂಡಿ ನೀರು ನುಗ್ಗಿ ರಾತ್ರಿಯಿಡಿ ನೀರು ಹೊರಹಾಕುವಲ್ಲಿ ಹರಸಾಹಸ ಪಡುವಂತಾಯಿತು.

ಉಣಕಲ್ ಪ್ರದೇಶ, ಸಾಯಿನಗರ, ಹೆಗ್ಗೇರಿ ಕಾಲನಿ, ಮುರುಡೇಶ್ವರ ಫ್ಯಾಕ್ಟರಿ ರಸ್ತೆ, ಉಣಕಲ್ ಕೆರೆ ಭಾಗದ ಕೆಳ ಪ್ರದೇಶ ಸೇರಿದಂತೆ ತಗ್ಗು ಪ್ರದೇಶದ ಬಡಾವಣೆಗೆ ನೀರು ನುಗ್ಗಿ ಪರದಾಡುವಂತಾಯಿತು. ಮಳೆನಿಂತ ಮೇಲೆಯೂ ಬೆಳಗ್ಗೆ 10ರ ವರೆಗೂ ಹಲವು ಕಡೆಗಳಲ್ಲಿ ಚರಂಡಿ ನಾಲಾಗಳು ತುಂಬಿ ಹರಿಯುತ್ತಿರುವುದು ಕಂಡುಬಂದಿತು.

ವಾಣಿಜ್ಯ ಸಂಕೀರ್ಣಗಳಿಗೆ ನೀರು ನುಗ್ಗಿದ್ದು, ಸಬ್‌ಮರ್ಸಿಬಲ್‌ ಪಂಪ್‌ ಮೂಲಕ ನೀರನ್ನು ಹೊರಹಾಕುತ್ತಿದ್ದ ದೃಶ್ಯ ಕಂಡು ಬಂದಿತು. ಶ್ರೀನಗರ ಕ್ರಾಸ್, ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದ ಬಳಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಮೊಣಕಾಲಿನ ವರೆಗೂ ನೀರು ನಿಂತಿತ್ತು. ರಾಮನಗರ, ಅಶೋಕ ನಗರದಲ್ಲಿ ತಡರಾತ್ರಿ ಎರಡು ಮರಗಳು ನೆಲಕ್ಕುರಳಿವೆ.

ಕೋಡಿ ಬಿದ್ದ ಉಣಕಲ್ಲ ಕೆರೆ:

ಬುಧವಾರ ತಡರಾತ್ರಿ ಮತ್ತು ಗುರುವಾರ ಬೆಳಗಿನ ಜಾವ ಸುರಿದ ಮಳೆಯಿಂದಾಗಿ ಇಲ್ಲಿನ ಉಣಕಲ್ಲ ಕೆರೆ ಕೋಡಿ ಹರಿಯಿತು. ಒಮ್ಮಿಂದೊಮ್ಮೆಲೆ ಕೆರೆಗೆ ಅಪಾರ ಪ್ರಮಾಣದ ನೀರು ಬಂದ ಹಿನ್ನೆಲೆಯಲ್ಲಿ ಕೆರೆಯು ಕೋಡಿಬಿತ್ತು. ಉಣಕಲ್ ಕ್ರಾಸ್, ಹಳೆ ಬಸ್ ನಿಲ್ದಾಣ ಮುಂಭಾಗ, ಪ್ರೆಸಿಡೆಂಟ್ ಹೊಟೇಲ್ ಹತ್ತಿರ ಅವಳಿ ನಗರ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಬಡಾವಣೆಯ ರಸ್ತೆಗಳೇ ನಾಲಾ ಸ್ವರೂಪ ಪಡೆದಿದ್ದವು. 40ಕ್ಕೂ ಅಧಿಕ ಕಡೆಗಳಲ್ಲಿ ಒಳಚರಂಡಿ ಮೇಲಿನ ಮ್ಯಾನ್‌ಹೋಲ್‌ ಓಪನ್ ಆಗಿದ್ದು, ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯಿತು.

ತುಂಬಿ ಹರಿದ ಹಳ್ಳಗಳು:

ತುಪ್ಪರಿಹಳ್ಳ ಹಾಗೂ ಬೆಣ್ಣಿಹಳ್ಳಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದು ಹಳ್ಳ ದಾಟಲು ಹರಸಾಹಸ ಪಡುವಂತಾಯಿತು. ಕೊನೆಗೆ ಹಳ್ಳದ ಹರಿವಿನ ಪ್ರಮಾಣ ಇಳಿಕೆಯಾದ ಬಳಿಕ ಚಕ್ಕಡಿ, ಟ್ರ್ಯಾಕ್ಟರ್‌ ಮೂಲಕ ತಮ್ಮ ಮನೆಗಳತ್ತ ಮರಳಿದರು.