ಸಾರಾಂಶ
ಅಧಿಕಾರಿಗಳು, ಗುತ್ತಿಗೆದಾರರು ಅವೈಜ್ಞಾನಿಕ ಕಾಮಗಾರಿ ಮಾಡಿದ್ದರಿಂದ ಗ್ರಾಮದ ನಾಲ್ಕು ದೇವಸ್ಥಾನಗಳು, ರಸ್ತೆಗಳು ಜಲಾವೃತ
ಕನ್ನಡಪ್ರಭ ವಾರ್ತೆ ಕುಕನೂರುತಾಲೂಕಿನ ಶಿರೂರು ಗ್ರಾಮದಲ್ಲಿ ಕೆಬಿಜೆಎನ್ ಅಧಿಕಾರಿಗಳು, ಗುತ್ತಿಗೆದಾರರು ಅವೈಜ್ಞಾನಿಕ ಕಾಮಗಾರಿ ಮಾಡಿದ್ದರಿಂದ ಗ್ರಾಮದ ನಾಲ್ಕು ದೇವಸ್ಥಾನಗಳು, ರಸ್ತೆಗಳು ಜಲಾವೃತವಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಗ್ರಾಮಸ್ಥರು, ಪುರ್ನವಸತಿ ಗ್ರಾಮದಲ್ಲಿ ಗುತ್ತಿಗೆದಾರರು, ಅಧಿಕಾರಿಗಳು ಅರೆಬರೆ ಕಾಮಗಾರಿ ಮಾಡಿದ್ದಾರೆ. ಇದರಿಂದ ಕಲ್ಲಿನಾಥೇಶ್ವರ, ದುರ್ಗಾದೇವಿ, ದ್ಯಾಮವ್ವ ಹಾಗೂ ಮಾರುತಿ ದೇವಸ್ಥಾನಗಳಿಗೆ ಮಳೆ ನೀರು ನುಗ್ಗಿದೆ. ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಇಂತಹ ಸಮಸ್ಯೆಗಳು ಆಗುತ್ತಿದ್ದರು ನಮಗೂ, ಇದಕ್ಕೂ ಸಂಬಂಧವಿಲ್ಲದಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.ಮಳೆ ನೀರನ್ನು ಸರಾಗವಾಗಿ ಹರಿದು ಹೋಗಲು ಸೂಕ್ರ ಕ್ರಮಕೈಗೊಳ್ಳುವುದಾಗಿ ತಹಶೀಲ್ದಾರ್ ಎಚ್.ಪ್ರಾಣೇಶ, ಮುಖಂಡ ದೇವಪ್ಪ ಅರಕೇರಿ, ಪೋಲಿಸ್ ಅಧಿಕಾರಿಗಳು ಭರವಸೆ ನೀಡಿ ಪ್ರತಿಭಟನಾನಿರತರ ಮನವೊಲಿಸಿದರು.
ಜಮೀನಿಗೆ ನುಗ್ಗಿದ ಚರಂಡಿ ನೀರು:ಶಿರೂರು ಗ್ರಾಮದ ರೈತ ರಮೇಶ ವಾಲ್ಮೀಕಿ ಅವರ ಜಮೀನಿನ ಹತ್ತಿರ ಚರಂಡಿ ಕಾಮಗಾರಿಯನ್ನು ಅರೆಬರೆ ಮಾಡಿದ್ದರಿಂದ ಪ್ರತಿವರ್ಷ ಮಳೆಬಂದಂತಹ ವೇಳೆ ನೀರು ಜಮೀನಿಗೆ ಹರಿದು ಹೋಗುತ್ತದೆ. ಇದರಿಂದ ರೈತ ರಮೇಶ ಜಮೀನು ಬಿತ್ತನೆ ಮಾಡುವುದನ್ನೆ ಬಿಟ್ಟಿದ್ದರು. ಇದರ ಬಗ್ಗೆ ಎಇಇ ಅಧಿಕಾರಿ ರಾಘವೇಂದ್ರ ಜೋಶಿ ಅವರಿಗೆ ಅನೇಕ ಬಾರಿ ಹೇಳಿದರು ಕ್ಯಾರೆ ಎಂದಿಲ್ಲ. ಸಾವಿರಾರು ರೂ. ಖರ್ಚು ಮಾಡಿ ಬಿತ್ತನೆ ಮಾಡಿದ ಮೆಕ್ಕೆಜೋಳ ನೀರಿನಲ್ಲಿ ಮುಳುಗಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ತಾಪಂ ಮಾಜಿ ಉಪಾಧ್ಯಕ್ಷ ಈಶಪ್ಪ ದೊಡ್ಡಮನಿ, ಗ್ರಾಪಂ ಸದಸ್ಯ ವೀರೇಂದ್ರ ಮಾದಿನೂರು, ಮಲ್ಲಪ್ಪ ಬಂಗಾರಿ, ಮಂಜುನಾಥ ವಾಲ್ಮೀಕಿ, ಈರಪ್ಪ, ಶರಣಪ್ಪ ಹೂಗಾರ ಸೇರಿದಂತೆ ಅನೇಕರು ಇದ್ದರು.