ಸಾರಾಂಶ
ಚರಂಡಿ ನಿರ್ಮಿಸದೇ ತರಾತುರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿಸುವ ಅವೈಜ್ಞಾನಿಕ ಪ್ರಯತ್ನದಿಂದ ಕೆರೆಕಟ್ಟೆಗೆ ಹರಿಯಬೇಕಿದ್ದ ಮಳೆನೀರು ರೈತರ ಮನೆ, ಅಂಗಡಿಗಳಿಗೆ ನುಗ್ಗಿದ್ದ ಪರಿಣಾಮ ದಿನಸಿ ಸಾಮಾನು ಮನೆಯಲ್ಲಿದ್ದ ಲಕ್ಷಾಂತರ ರು. ಮೌಲ್ಯದ ದವಸ, ಧಾನ್ಯ ನಾಶವಾದ ಘಟನೆ ಕೊರಟಗೆರೆ ತಾಲೂಕಿನ ಬೈರೇನಹಳ್ಳಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ಹೊಳವನಹಳ್ಳಿ
ಚರಂಡಿ ನಿರ್ಮಿಸದೇ ತರಾತುರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿಸುವ ಅವೈಜ್ಞಾನಿಕ ಪ್ರಯತ್ನದಿಂದ ಕೆರೆಕಟ್ಟೆಗೆ ಹರಿಯಬೇಕಿದ್ದ ಮಳೆನೀರು ರೈತರ ಮನೆ, ಅಂಗಡಿಗಳಿಗೆ ನುಗ್ಗಿದ್ದ ಪರಿಣಾಮ ದಿನಸಿ ಸಾಮಾನು ಮನೆಯಲ್ಲಿದ್ದ ಲಕ್ಷಾಂತರ ರು. ಮೌಲ್ಯದ ದವಸ, ಧಾನ್ಯ ನಾಶವಾದ ಘಟನೆ ಕೊರಟಗೆರೆ ತಾಲೂಕಿನ ಬೈರೇನಹಳ್ಳಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಬೈರೇನಹಳ್ಳಿಯ ರೈತ ಲಕ್ಷ್ಮಣ್ ಪ್ರಸಾದ್, ನಂದೀಶ್, ಗಂಗಮ್ಮ, ಮತ್ತು 8 ಕ್ಕೂ ಅಧಿಕ ಅಂಗಡಿ ಮಳಿಗೆ ಹಾಗೂ ಮೆಡಿಕಲ್ಸ್‌ಗೆ ತಡರಾತ್ರಿ ಸುರಿದ ಮಳೆಯಿಂದ ದಿನಸಿ ಸಾಮಾನು ಮತ್ತು ಧವಸದಾನ್ಯ ನಾಶವಾಗಿ ರೈತ ಕುಟುಂಬಗಳು ಬೀದಿಗೆ ಬಿದ್ದಿವೆ. ತುಮಕೂರಿನಿಂದ ಕೊರಟಗೆರೆ ಮಾರ್ಗವಾಗಿ ಬೈರೇನಹಳ್ಳಿಯಿಂದ ಗೌರಿಬಿದನೂರಿಗೆ ಸಂಪರ್ಕ, ಶಿರಾ-ಮಧುಗಿರಿ ಮಾರ್ಗವಾಗಿ ಬೈರೇನಹಳ್ಳಿ ಮೂಲಕ ಹಿಂದೂಪುರ ಮತ್ತು ಗೌರಿಬಿದನೂರಿಗೆ, ಮಧುಗಿರಿ, ಪಾವಗಡದಿಂದ ಬೈರೇನಹಳ್ಳಿ ಮಾರ್ಗವಾಗಿ ದೊಡ್ಡಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ಕೇಂದ್ರಸ್ಥಾನವೇ ಬೈರೇನಹಳ್ಳಿ ಗ್ರಾಮ. ಪ್ರತಿನಿತ್ಯ ಸಾವಿರಾರು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ.ಐದು ತಾಲೂಕಿಗೆ ಸಂಪರ್ಕ ಕಲ್ಪಿಸುವ ಕೇಂದ್ರಸ್ಥಾನವೇ ಬೈರೇನಹಳ್ಳಿ ಗ್ರಾಮ. ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಚರಂಡಿ ನಿರ್ಮಿಸದಿರುವುದರಿಂದ ಸಮಸ್ಯೆ ಉಂಟಾಗಿದೆ. ಚಿಕ್ಕಬಳ್ಳಾಪುರ ಮತ್ತು ಕೊರಟಗೆರೆಯ ರಾಷ್ಟ್ರೀಯ ರಸ್ತೆ ಅಭಿವೃದ್ದಿ ಪ್ರಾಧಿಕಾರಿದ ಅಧಿಕಾರಿವರ್ಗ ತ್ವರಿತವಾಗಿ ಸ್ಥಳೀಯರ ಸಮಸ್ಯೆಯನ್ನು ಬಗೆಹರಿಸಬೇಕಿದೆ.ಸರಕಾರಿ ಶಾಲೆಯ ದಾರಿಯೇ ಮಾಯ: ಬೈರೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ನೇ ತರಗತಿಯಲ್ಲಿ 60 ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಕಡಿತ ಮಾಡಿ ಮುಚ್ಚಿದ್ದಾನೆ. ರಸ್ತೆಯ ಕಾಮಗಾರಿ ಪರಿಶೀಲನೆ ನಡೆಸಬೇಕಾದ ಚಿಕ್ಕಬಳ್ಳಾಪುರ ಮತ್ತು ಕೊರಟಗೆರೆಯ ಅಧಿಕಾರಿ ವರ್ಗ ಮೌನಕ್ಕೆ ಶರಣಾಗಿರುವುದೇ ವಿಪರ್ಯಾಸ
ಗುತ್ತಿಗೆದಾರನಿಗೆ ತಹಸೀಲ್ದಾರ್ ಎಚ್ಚರಿಕೆ: ಮಳೆಯಿಂದ ಹಾನಿಗೆ ಒಳಗಾದ ರೈತರ ಮನೆಗಳಿಗೆ ಕೊರಟಗೆರೆ ತಹಸೀಲ್ದಾರ್ ಮಂಜುನಾಥ.ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಹಸೀಲ್ದಾರ್ ಎದುರಲ್ಲೇ ಸ್ಥಳೀಯರು ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರನ ವಿರುದ್ದ ಹರಿಹಾಯ್ದರು. ಗ್ರಾಮಸ್ಥರ ಮನವಿ ಆಲಿಸಿದ ತಹಸೀಲ್ದಾರ್ ತಕ್ಷಣವೇ ಚರಂಡಿ ನಿರ್ಮಿಸಿ, ರೈತರಿಗೆ ಮತ್ತು ಸರ್ಕಾರಿ ಶಾಲೆಗೆ ಸಮಸ್ಯೆ ಆಗದಂತೆ ಸರಿಪಡಿಸಬೇಕು. ಇಲ್ಲವಾದರೆ ಕ್ರಮ ಕೈಗೊಂಡು ಸರ್ಕಾರಕ್ಕೆ ವರದಿ ಕಳಿಸುತ್ತೇನೆ ಎಂದು ಗುತ್ತಿಗೆದಾರನಿಗೆ ಖಡಕ್ ಎಚ್ಚರಿಕೆ ನೀಡಿದರು.ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ನಮ್ಮ ಗ್ರಾಮದಲ್ಲಿ ಸಮಸ್ಯೆ ಹೆಚ್ಚಾಗಿದೆ. ಚರಂಡಿಯಲ್ಲಿನ ದುರ್ವಾಸನೆಯ ನೀರು ಮನೆಯೊಳಗೆ ನುಗ್ಗುತ್ತಿದೆ. ಗುತ್ತಿಗೆದಾರರಿಗೆ ನಾವು ಕರೆ ಮಾಡಿದರೆ ನಿಮ್ಮೂರು ನಮ್ಮ ಅತ್ತೆ ಮನೆ ಅಲ್ಲ. ತಡರಾತ್ರಿ ಬರೋದಿಕ್ಕೆ ಅಂತಾ ಹೇಳ್ತಾರೇ. ದಯವಿಟ್ಟು ಶಾಸಕರು ಗ್ರಾಮಕ್ಕೆ ಬಂದು ಸಮಸ್ಯೆ ಸರಿಪಡಿಸಬೇಕಿದೆ.ಲಕ್ಷ್ಮಣ್‌ಪ್ರಸಾದ್. ಸ್ಥಳೀಯ. ಬೈರೇನಹಳ್ಳಿ.