ನವಲಗುಂದ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮೂರು ಗಂಟೆ ಸುರಿದ ಮುಂಗಾರು ಮಳೆಗೆ ಬೆಣ್ಣೆಹಳ್ಳ, ತುಪ್ಪರಿಹಳ್ಳ ಸೇರಿದಂತೆ ವಿವಿಧ ಹಳ್ಳಗಳು ತುಂಬಿ ಹರಿಯುತ್ತಿವೆ.

ತಾಲೂಕಿನ ಶಾನವಾಡ ಗ್ರಾಮದ ಹೊರ ವಲಯದ ನೂರಾರು ಎಕರೆ ಜಮೀನಿನ ನೀರು ಲಟಿಗೇನ್ ಸರವು ಮೂಲಕ ತಳವಾರ ಓಣಿಗೆ ನುಗ್ಗಿದ ಪರಿಣಾಮ ಮನೆಯಲ್ಲಿ ನೀರು ನಿಂತು ಹಾನಿಯುಂಟಾಗಿದೆ. ಅಲ್ಲದೇ ಮಳೆಗೆ ಹಾಳಕುಸುಗಲ್ ರಸ್ತೆಯ ಸಂಚಾರ ಸ್ಥಗಿತಗೊಂಡಿದೆ. ಹವಾಮಾನ ಇಲಾಖೆ ಪ್ರಕಾರ ಎಲ್ಲೋ ಅಲರ್ಟ್ ಘೋಷಣೆಯಾಗಿದ್ದು ಇನ್ನೂ ಮೂರು ದಿನ ಮಳೆಯಾಗುವ ಸಂಭವ ಇದೆ ಎಂದು ತಹಸೀಲ್ದಾರ್ ಸುಧೀರ್ ಸಾಹುಕಾರ್ ತಿಳಿಸಿದ್ದಾರೆ.

ಮುಂಗಾರು ಮಳೆ ಆರ್ಭಟಕ್ಕೆ ರಸ್ತೆ ಸಂಚಾರ ಸ್ಥಗಿತ

ಅಳ್ನಾವರ:


ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದೆರಡು ದಿನಗಳಿಂದ ಉತ್ತಮವಾದ ಮಳೆಯಾಗಿದೆ. ಭಾನುವಾರವೂ ಮಧ್ಯಾಹ್ನ ಸುರಿದ ಗುಡುಗು, ಮಿಂಚು ಮಿಶ್ರಿತ ಭಾರಿ ಮಳೆಗೆ ಜನರು ತತ್ತರಿಸಿದರೆ ಸಮೀಪದ ಕುಂಬಾರಕೊಪ್ಪ ಗ್ರಾಮದ ಹಳ್ಳ ತುಂಬಿ ಹರಿದ ಪರಿಣಾಮ ಕುಂಬಾರಗೊಪ್ಪ-ಸಿದ್ದಾಪುರ ರಸ್ತೆ ಸಂಚಾರ 2-3 ಗಂಟೆಗಳ ಕಾಲ ಬಂದ್ ಆಗಿತ್ತು. ಭಾನುವಾರದ ಮಳೆಯು ಜನರ ನಿತ್ಯದ ಕೆಲಸ ಮತ್ತು ಕೃಷಿ ಚಟುವಟಿಕೆಗೆ ಅಡಚಣೆ ಮಾಡಿದ್ದು, ಪಟ್ಟಣದ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ನಿವಾಸಿಗಳು ಪರದಾಡುವಂತಾಗಿತ್ತು.

ಮುಂಜಾನೆಯಿಂದ ಬಿಸಿಲಿನ ವಾತಾವರಣವಿದ್ದ ಕಾರಣ ರೈತರು ಹೊಲಗಳಲ್ಲಿ ಬಿತ್ತನೆಯ ಕಾರ್ಯದಲ್ಲಿ ತೊಡಗಿದ್ದರು. ಮಧ್ಯಾಹ್ನ ಮೂರು ಗಂಟೆಗೆ ಜೋರಾದ ಮಳೆ ಸುರಿದ ಪರಿಣಾಮ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸುವ ಅನಿವಾರ್ಯತೆ ಎದುರಾಯಿತು, ಈಗಾಗಲೇ ಈ ಭಾಗದಲ್ಲಿ ಭತ್ತ ಹಾಗೂ ಗೋವಿನ ಜೋಳ ಬಿತ್ತನೆಯು ಜೋರಾಗಿ ನಡೆದಿದೆ. ಆದರೆ, ನಿರಂತವಾಗಿ ಸುರಿಯುತ್ತಿರುವ ಮಳೆಯಿಂದ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿದೆ ಎಂದು ಹೇಳುತ್ತಾರೆ ಸ್ಥಳೀಯ ರೈತರು.ಧಾರವಾಡದಲ್ಲಿ ಸಾಧಾರಣ ಮಳೆ

ಧಾರವಾಡ:

ಕಳೆದ ಎರಡು ದಿನಗಳಿಂದ ನಗರದಲ್ಲಿ ಬೆಳಗ್ಗೆ ಬಿಸಿಲು ಹಾಗೂ ಮೋಡ ಮುಸುಕಿದ ವಾತಾವರಣವಿದ್ದು ಸಂಜೆಯ ಹೊತ್ತು ಜಿಟಿ ಜಿಟಿ ಮಳೆಯಾಗುತ್ತಿದೆ. ಅಂತೆಯೇ ಭಾನುವಾರ ಬೆಳಗ್ಗೆ ಬಿಸಿಲಿದ್ದು, ಮಧ್ಯಾಹ್ನದ ನಂತರ ಮಳೆ ಶರುವಾಯಿತು. ಈ ಮಳೆ ಬರೀ ನಗರಕ್ಕೆ ಮಾತ್ರ ಸೀಮಿತವಾಗಿದ್ದು, ಅಳ್ನಾವರ ಹೊರತು ಪಡಿಸಿ ಧಾರವಾಡ ಗ್ರಾಮೀಣಕ್ಕೆ ಹೇಳಿಕೊಳ್ಳುವ ಮಳೆಯಾಗಿಲ್ಲ. ಹೀಗಾಗಿ ಮುಂಗಾರು ಬಿತ್ತನೆ ಮಾಡಿರುವ ರೈತರು ಮಳೆಯ ಬರುವಿಕೆಗಾಗಿ ಕಾಯುತ್ತಿದ್ದಾರೆ.