ಕೆರೆಗೆ ನೀರು ಬಂದು ಜನರ ಬೇಡಿಕೆ ಈಡೇರಿಕೆ

| Published : Apr 19 2025, 12:34 AM IST

ಸಾರಾಂಶ

ರಾಂಪುರ ರಸ್ತೆಯ ಕಾಲುವೆ ಬಳಿ ₹೧.೩೦ ಕೋಟಿ ಮೊತ್ತದ ನೀರು ತುಂಬುವ ಕಾಮಗಾರಿ ಪ್ರಾರಂಭದ ಪೂಜೆಯನ್ನು ಶಾಸಕ ಅಶೋಕ ಮನಗೂಳಿ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಕಳೆದ ಬೇಸಿಗೆಯಲ್ಲಿ ಬಬಲೇಶ್ವರ, ಬೆನಕೊಟಗಿ, ಕಲಹಳ್ಳಿ, ರಾಂಪೂರ, ಮಂಗಳೂರು, ಆಹೇರಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಬಬಲೇಶ್ವರ ಕೆರೆಗೆ ನೀರು ತುಂಬಿಸುವಂತೆ ಸಾಕಷ್ಟು ಬಾರಿ ಒತ್ತಾಯಿಸಲಾಗಿತ್ತು. ಆಗ ಕಾಲುವೆ ಅಗೆದು ನೀರು ತುಂಬಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ನೀರು ತುಂಬಿಸುವಲ್ಲಿ ಸಫಲತೆ ಸಿಗಲಿಲ್ಲ. ಆಗ ಸ್ಥಳ ಪರಿಶೀಲಿಸಿ ಬೆನಕೊಟಗಿ ಹಳ್ಳದಿಂದ ಬಬಲೇಶ್ವರ ಕೆರೆಗೆ ನೀರು ತುಂಬಿಸಲು ಅಧಿಕಾರಿಗಳ ಜೊತೆ ಚರ್ಚಿಸಿ ಯೋಜನೆ ರೂಪಿಸಲಾಯಿತು. ಹೀಗಾಗಿ ಜನರ ಬಹುದಿನಗಳ ಆಸೆ ಈಗ ಈಡೇರಿದಂತಾಗದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ರಾಂಪುರ ರಸ್ತೆಯ ಕಾಲುವೆ ಬಳಿ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು, ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಐಬಿಎಸ್ ವಿಭಾಗ 02 ಇಂಡಿ ಏತ ನೀರಾವರಿ ಕಾಲುವೆಯ ವಿತರಣಾ ಕಾಲುವೆ ಸಂಖ್ಯೆ 31ಎ ಮೂಲಕ ಬಬಲೇಶ್ವರ ಕೆರೆಗೆ ₹1.30 ಕೋಟಿ ಮೊತ್ತದ ನೀರು ತುಂಬುವ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿದರು.

ಈ ಕಾರ್ಯಕ್ಕೆ ಸಿಎಂ, ಡಿಸಿಎಂ ಸಹಕಾರವಿದೆ. ಮೋರಟಗಿ, ಹಂದಿಗನೂರ, ಪುರದಾಳ, ಆಲಮೇಲ, ಬಬಲೇಶ್ವರ ಹಾಗೂ ಯಂಕಂಚಿ ಗ್ರಾಮಗಳ ಕೆರೆಗಳ ಪುನರುತ್ಥಾನ ಹಾಗೂ ನೀರು ತುಂಬಿಸುವ ಕಾರ್ಯಕ್ಕೆ ಶೀಘ್ರ ಚಾಲನೆ ನೀಡಲಾಗುವುದು. ಗುತ್ತಿಗೆದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಪ್ರಾಮಾಣಿಕವಾಗಿ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಬೇಕು ಎಂದು ಹೇಳಿದರು.

ಮಾಜಿ ಶಾಸಕ ರಮೇಶ ಭೂಸನೂರ ಅವರು ಕೇಂದ್ರ ಸಚಿವ ನೀತಿನ ಗಡ್ಕರಿ ಅವರಿಂದ ಅನುದಾನ ತಂದಿದ್ದೇವೆ ಎಂದು ಸಾಕಷ್ಟು ಬಾರಿ ಹೇಳಿದ್ದಾರೆ. ಮಾಜಿ ಶಾಸಕರೇ ನಿಮ್ಮ ಅವಧಿಯಲ್ಲಿ ಆಲಮೇಲದಿಂದ ನಿಮ್ಮ ಸ್ವಗ್ರಾಮಕ್ಕೆ ಹೋಗುವ ಸುಸಜ್ಜಿತ ರಸ್ತೆ ನಿರ್ಮಿಸಲು ಸಾಧ್ಯವಾಗಿಲ್ಲ. ಮೇಲಿಂದ ಮೇಲೆ ದೆಹಲಿಗೆ ಹೋಗಿ ದುಡ್ಡು ವ್ಯರ್ಥವೇಕೆ ಮಾಡುತ್ತೀರಿ? ಆ ಕೆಲಸವನ್ನು ಕರ್ನಾಟಕ ಸರ್ಕಾರದಲ್ಲಿಯೇ ಮಾಡಿಸಬಹುದು. ಈಗಾಗಲೇ 4 ಕಿಮೀ ರಸ್ತೆ ನಿರ್ಮಾಣ ಮಾಡಲಾಗಿದೆ. ಇನ್ನುಳಿದ ರಸ್ತೆಗೆ ಶೀಘ್ರ ಮಂಜೂರಾತಿ ತರಲಾಗುವುದು ಎಂದರು.

ಈ ವೇಳೆ ದಸಂಸ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ ಹಾಗೂ ಬುದ್ದು ನಾಯಕ್ ಮಾತನಾಡಿ, ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸುವ ಕಾರ್ಯದಲ್ಲಿ ಶಾಸಕರು ತೊಡಗಿದ್ದು ಸಂತಸ ತಂದಿದೆ. 280 ಎಕರೆ ವಿಸ್ತೀರ್ಣ ಹೊಂದಿದ ಬಬಲೇಶ್ವರ ಕೆರೆಗೆ ನೀರು ತುಂಬಿಸುವ ಬಹುದಿನಗಳ ಬೇಡಿಕೆ ಇಂದಿನ ಶಾಸಕ ಅಶೋಕ ಮನಗೂಳಿ ಅವರು ಮಾಡಿದ್ದಕ್ಕೆ ಬಬಲೇಶ್ವರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆಭಾರಿಯಾಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಭಾಗಪ್ಪಗೌಡ ಬಿರಾದಾರ, ರಾಚಯ್ಯ, ನಬಿಸಾಬ್, ದವಲತ ದೊಡಮನಿ, ಈರಣ್ಣ ನಾಯ್ಕೋಡಿ, ಶ್ರೀಶೈಲ ದೇಸಾಯಿ, ಗಂಗಾಧರ ಚಿಂಚೋಳ್ಳಿ, ಎಇಇ ಭಾಸ್ಕರ್, ಫಾರೂಕ್, ಜೈಭೀಮ ತಳಕೇರಿ, ಕುಮಾರ ವರ್ಕಾನಳ್ಳಿ, ಅನಿಲ ಪಾಟೀಲ, ಅನೀಲಗೌಡ ಪಾಟೀಲ, ಸಂತೋಷ ಪಾಟೀಲ, ಶರಣಗೌಡ ಪಾಟೀಲ, ಶರಣು ನಾಯ್ಕೋಡಿ, ಬಸವರಾಜ ಪಾಟೀಲ ಸೇರಿದಂತೆ ಹಲವರಿದ್ದರು.