ಕನ್ನಡಪ್ರಭ ವಾರ್ತೆ ಮೈಸೂರು

ಕೂರ್ಗಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು, ಸಾರ್ವಜನಿಕರ ಸಮಸ್ಯೆ ಆಲಿಸಿದರು.ಕುಡಿಯುವ ನೀರು ಸರಬರಾಜು ಆಗುವಲ್ಲಿ ಸರಿಯಾಗಿ ಆಗುತ್ತಿಲ್ಲ. ಬೋರ್‌ ವೆಲ್ ನೀರು ಬತ್ತಿ ಹೋಗಿರುವ ಕಾರಣ ಟ್ಯಾಂಕರ್ ನೀರು ಪೂರೈಸಬೇಕು. ವಾರದಲ್ಲಿ ಮೂರು ದಿನಗಳು ನೀರು ಪೂರೈಕೆಯಾಗಯತ್ತಿದ್ದು, ಎರಡು ದಿನಕ್ಕೊಮ್ಮೆ ನೀರು ಬಿಡುವಂತೆ ಮಾಡಬೇಕು ಎಂದು ಸಾರ್ವಜನಿಕರು ಕೋರಿದರು.ಮತ್ತೊಬ್ಬರು ಯುಜಿಡಿ ನೀರು ಹರಿಯುತ್ತಿದ್ದು, ಬೇರೆ ಕಡೆ ಮಾರ್ಗಕ್ಕೆ ಸಂಪರ್ಕ ಕೊಡಬೇಕು. ಮುಖ್ಯರಸ್ತೆಯಲ್ಲಿರುವ ಫ್ಯಾಕ್ಟರಿಯಿಂದ ಹೊರ ಬರುವ ಹೊಗೆಯಿಂದ ಉಸಿರಾಟಕ್ಕೆ ತುಂಬಾ ಸಮಸ್ಯೆಯಾಗಿದೆ. ಜಿಲ್ಲಾಧಿಕಾರಿ, ಪರಿಸರ ಮಂಡಳಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಹೊಗೆಯಿಂದ ಆಗುವ ಸಮಸ್ಯೆ ತಪ್ಪಿಸಿಲ್ಲ ಎಂದು ದೂರಿದರು.ಕುಡಿಯುವ ನೀರಿನ ಟ್ಯಾಂಕ್ ದುರಸ್ತಿಗೆ ಸಂಬಂಧಿಸಿದಂತೆ ಕೆಐಎಡಿಬಿ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು. ನಾವು ಕಾಮಗಾರಿ ಮಾಡಲು ಶುರು ಮಾಡಲು ರೆಡಿ ಇದ್ದೇವೆ. ಆದರೆ, ಕೆಐಎಡಿಬಿ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದರು. ತಕ್ಷಣವೇ ದೂರವಾಣಿ ಮೂಲಕ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ ಶಾಸಕರು, ಕುಡಿಯುವ ನೀರಿನ ಕಾಮಗಾರಿಗೂ ಈ ರೀತಿ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ಉಂಡುವಾಡಿ ಯೋಜನೆ ಸಂಪರ್ಕ ಆರಂಭವಾದ ಮೇಲೆ ಕೆಐಎಡಿಬಿ ಟ್ಯಾಂಕ್ ಬಳಸುವುದಿಲ್ಲ. ಅಲ್ಲಿಯ ತನಕ ಬಳಸಲು ಅವಕಾಶ ಕೊಡಲು ಸೂಚಿಸಿದರು.ಬಳಿಕ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರೊಂದಿಗೆ ಸಮಾಲೋಚಿಸಿ, ಕುಡಿಯುವ ನೀರಿನ ವಿಚಾರದಲ್ಲಿ ಆಗುವ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು. ಬಡಾವಣೆಗೆ ಹೆಚ್ಚುವರಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಬೇಕು ಎಂದರು.ಇದಾದ ಬಳಿಕ ಬೆಳಗ್ಗೆ ಮತ್ತು ಸಂಜೆ ನಗರ ಸಾರಿಗೆ ಬಸ್‌ ಗಳ ಸಂಚಾರ ಇಲ್ಲದೆ ಮುಖ್ಯರಸ್ತೆಗೆ ನಡೆದುಕೊಂಡು ಹೋಗಬೇಕಾದ ಸನ್ನಿವೇಶ ಇದೆ ಎಂದು ಮಹಿಳೆಯರು ಶಾಸಕರಿಗೆ ಅಲವತ್ತುಕೊಂಡರು. ಕೂಡಲೇ ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ. ವೀರೇಶ್ ಜತೆ ಮಾತನಾಡಿ, ಬೆಳಗ್ಗೆ 9.30 ರವರೆಗೆ ಹಾಗೂ ಸಂಜೆ 4.30 ರವರೆಗೆ ಹೆಚ್ಚುವರಿಯಾಗಿ ಎರಡು ಬಸ್‌ ಗಳ ರೂಟ್ ಕಲ್ಪಿಸಬೇಕು ಎಂದು ಸೂಚಿಸಿದರು. ಇದಕ್ಕೆ ಒಪ್ಪಿದ ಅಧಿಕಾರಿಗಳು, ಮಂಗಳವಾರದಿಂದಲೇ ಸಂಚಾರ ಮಾಡಲಿದೆ ಎಂದು ಭರವಸೆ ನೀಡಿದರು.ನಂತರ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿದ ಶಾಸಕರು, ಹಲವಾರು ಸಮಸ್ಯೆಗಳನ್ನು ಆಲಿಸಿದರು. ಮುಂದಿನ ದಿನಗಳಲ್ಲಿ ಪ್ರತಿಯೊಂದು ಕಾಮಗಾರಿ ಶುರು ಮಾಡಲಾಗುವುದು. ಅಭಿವೃದ್ಧಿ ಮಾಡಲೇಬೇಕೆಂದು ಗ್ರಾಪಂನ್ನು ನಗರಸಭೆಯನ್ನಾಗಿ ಮಾಡಿಸಿದ್ದೇನೆ. ಈಗ ಅನುದಾನ ಬಿಡುಗಡೆ ಆಗಿರುವುದರಿಂದ ಕಾಮಗಾರಿಗಳು ಪ್ರಾರಂಭವಾಗಲಿದೆ ಎಂದು ತಿಳಿಸಿದರು.