ರಾಮನಗರ: ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ರೈತರ ಕೃಷಿ ಚಟುವಟಿಕೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶಾಸಕ ಹೆಚ್.ಎ.ಇಕ್ಬಾಲ್ ಹುಸೇನ್ ಅವರು ಗುರುವಾರ ಅಧಿಕೃತವಾಗಿ ಪೂಜೆ ಸಲ್ಲಿಸುವ ಮೂಲಕ ಮಂಚನಬೆಲೆ ಜಲಾಶಯದ ಎಡದಂಡೆ ನಾಲೆಗೆ ನೀರು ಹರಿಸಿದರು.

ಎರಡು ದಶಕಗಳಿಂದ ಮಳೆಯ ಅಭಾವ ಮತ್ತು ಅಂತರ್ಜಲ ಬತ್ತಿದ ಕಾರಣದಿಂದಾಗಿ ನೀರಿನ ಕೊರತೆಯಿಂದಾಗಿ ಕಂಗೆಟ್ಟಿದ್ದ ನಾಲಾ ವ್ಯಾಪ್ತಿಯ ರೈತರು, ಕೃಷಿ ಚಟುವಟಿಕೆಗೆ ಹಾಗೂ ಜಾನುವಾರುಗಳಿಗಾಗಿ ನಾಲೆಗೆ ನೀರು ಹರಿಸುವಂತೆ ಶಾಸಕರಲ್ಲಿ ಮನವಿ ಮಾಡುತ್ತಲೇ ಬಂದಿದ್ದರು.

ರೈತರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿದ ಶಾಸಕ ಇಕ್ಬಾಲ್ ಹುಸೇನ್ ರವರು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ, ಎಡದಂಡೆ ನಾಲೆ ದುರಸ್ಥಿ ಪಡಿಸಿ ನಿಯಮಾನುಸಾರ ನೀರು ಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ಎಡದಂಡೆ ನಾಲೆ‌ಯ ದುರಸ್ಥಿ ಕಾರ್ಯ ಪೂರ್ಣಗೊಳಿಸಿ ನೀರು ಹರಿಸಲಾಗಿದ್ದು, ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ಜೀವಕಳೆ ಬಂದಂತಾಗಿದೆ. ನಾಲೆಯಲ್ಲಿ ಹರಿಯುತ್ತಿದ್ದ ನೀರು ಕಂಡ ರೈತರು ಶಾಸಕರು ಹಾಗೂ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ನಾಲೆಗೆ ನೀರು ಹರಿಸಿದ ಬಳಿಕ ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್ , ರೈತರ ಶ್ರೇಯೋಭಿವೃದ್ಧಿ ಮತ್ತು ಕೃಷಿ ಚಟುವಟಿಕೆಗಳಿಗೆ ಬೆಂಬಲ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ‌ ಭಾಗದಲ್ಲಿ ಪ್ರವಾಸ ಕೈಗೊಂಡಾಗ ಜನರು ಎರಡು ನಾಲೆಗಳ ದುರಸ್ಥಿ ಮಾಡಿಸಿ ನೀರು ಹರಿಸುವಂತೆ ಮನವಿ ಸಲ್ಲಿಸಿದ್ದರು. ಅದರಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮಾರ್ಗದರ್ಶನದಲ್ಲಿ ನಾಲೆ ದುರಸ್ಥಿ ಪಡಿಸಲಾಯಿತು ಎಂದು ಹೇಳಿದರು.

ರೈತರ ಬೆಳೆಗಳಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಜಲಾಶಯದಿಂದ ಹರಿಸಲಾಗುತ್ತಿರುವ ನೀರನ್ನು ರೈತರು ಪೋಲು ಮಾಡದೆ, ಮಿತವಾಗಿ ಹಾಗೂ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅಂತರ್ಜಲ ಮಟ್ಟ ಹೆಚ್ಚಿಸಲು ಈ ಕಾರ್ಯ ಸಹಕಾರಿಯಾಗಲಿದೆ. ಬಲದಂಡೆ ನಾಲೆಯನ್ನು ದುರಸ್ಥಿ ಪಡಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ರಾಜು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್‌ ನಟರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ‌ಅಧ್ಯಕ್ಷ ವಿ.ಎಚ್.ರಾಜು, ಕೆಡಿಪಿ ಸದಸ್ಯ ಮುಕುಂದ, ಸಾಗುವಳಿ ಸಮಿತಿ‌ ಸದಸ್ಯ ರವಿ, ಗ್ರಾಪಂ ಮಾಜಿ ಅಧ್ಯಕ್ಷರಾದ ಸ್ವಾಮಿ, ಚಿಕ್ಕಸ್ವಾಮಿ ಮುಖಂಡ ಆಂಜನಪ್ಪ, ಮಂಚನಬೆಲೆ ಯೋಜನಾ ವಿಭಾಗದ ಎಇಇ ಉಮೇರಾ ಮತ್ತಿತರರು ಹಾಜರಿದ್ದರು.

ಬಾಕ್ಸ್ ................

ಹೊಸ ನಾಲೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಬಾಕಿ

ರಾಮನಗರ: ರಾಮನಗರ ಕ್ಷೇತ್ರ ವ್ಯಾಪ್ತಿಯ ಕಸಬಾ ಮತ್ತು ಕೈಲಾಂಚ ಹೋಬಳಿ ಗ್ರಾಮಗಳಲ್ಲಿ ಕೃಷಿ ಚಟುವಟಿಕೆ ಉದ್ದೇಶದಿಂದ ಮಂಚನಬೆಲೆ ಜಲಾಶಯದ ಎಡ - ಬಲ ದಂಡೆ ನಾಲೆಗಳನ್ನು ಹೊಸದಾಗಿ ನಿರ್ಮಿಸುವ 70 ಕೋಟಿ ರು.ವೆಚ್ಚದ ಪ್ರಸ್ತಾವನೆ ಅನುಮೋದನೆಗೊಂಡಿದ್ದು, ಅನುದಾನ ಬಿಡುಗಡೆಗೊಳ್ಳುವುದಷ್ಟೇ ಬಾಕಿ ಇದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎಡ - ಬಲ ದಂಡೆ ನಿರ್ಮಾಣ ಸಂಬಂಧ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದು, ಅದಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅನುಮೋದನೆ ಕೊಟ್ಟಿದ್ದಾರೆ. ಶೀಘ್ರದಲ್ಲಿಯೇ ಅನುದಾನ ಬಿಡುಗಡೆಗೊಳ್ಳಲಿದೆ ಎಂದರು.

ಮಂಚನಬೆಲೆಯ ಎಡ - ಬಲ ದಂಡೆ ನಾಲೆಗಳನ್ನು ತಲಾ 32 ಕಿ.ಮೀ ಉದ್ದದಷ್ಟು ಹೊಸದಾಗಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇದು ವಿನೂತನವಾಗಿರಲಿದೆ. ಗುರುತ್ವಾಕರ್ಷಣೆ ಮೂಲಕ ನಾಲೆಯ ಕೊನೆ ಭಾಗಕ್ಕೂ ನೀರು ಹರಿಯುವಂತೆ ಮಾಡಲಾಗುವುದು. ಇದರಿಂದ ಕಸಬಾ ಮತ್ತು ಕೈಲಾಂಚ ಹೋಬಳಿ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.

21ಕೆಆರ್ ಎಂಎನ್ 5.ಜೆಪಿಜಿ

ಮಂಚನಬೆಲೆ ಜಲಾಶಯದಿಂದ ಎಡದಂಡೆ ನಾಲೆಯಲ್ಲಿ ನೀರು ಹರಿಯುತ್ತಿರುವುದನ್ನು ಶಾಸಕ ಇಕ್ಬಾಲ್ ಹುಸೇನ್ ರವರು ವೀಕ್ಷಣೆ ಮಾಡಿದರು.