ಸಾರಾಂಶ
ಹಾನಗಲ್ಲ: ಹಾನಗಲ್ಲ ಪಟ್ಟಣಕ್ಕೆ ನೀರು ನೈರ್ಮಲ್ಯ ವಿದ್ಯುದ್ದೀಪಗಳಿಗೆ ಮೊದಲ ಆದ್ಯತೆಯಾಗಿ ಸೇವೆ ಸಲ್ಲಿಸುವ ಹೊಣೆಗಾರಿಕೆ ನನ್ನದಾಗಿದ್ದು, ನನ್ನ ಪಾಲಿಗೆ ಬಂದ ಅಧಿಕಾರವನ್ನು ಹಾನಗಲ್ಲ ಜನರ ಹಿತಕ್ಕೆ ಸದುಪಯೋಗ ಮಾಡುವೆ ಎಂದು ಪುರಸಭೆ ನೂತನ ಅಧ್ಯಕ್ಷೆ ಮಮತಾ ಆರೆಗೊಪ್ಪ ತಿಳಿಸಿದರು.ಹಾನಗಲ್ಲಿನಲ್ಲಿ ನಡೆದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶಾಸಕ ಶ್ರೀನಿವಾಸ ಮಾನೆ ಅಭಿನಂದನೆ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಅಧ್ಯಕ್ಷ, ಉಪಾಧ್ಯಕ್ಷರಿಬ್ಬರೂ ಮಹಿಳೆಯರಾಗಿದ್ದು, ಅತ್ಯುತ್ತಮ ಆಡಳಿತ ನೀಡುತ್ತೇವೆ ಎಂಬ ಭರವಸೆ ನಮಗಿದೆ. ಸಾರ್ವಜನಿಕ ಜೀನವದಲ್ಲಿ ಬಹುಕಾಲದಿಂದಲೂ ತೊಡಗಿಕೊಂಡಿರುವುದರಿಂದ, ಹಾನಗಲ್ಲ ಪುರಸಭೆ ಸಮಸ್ಯೆಗಳ ಅರಿವು ಇರುವುದರಿಂದ ಉತ್ತಮ ಆಡಳಿತ ನೀಡಲು ಸಾಧ್ಯ ಎಂದರು.ನೂತನ ಉಪಾಧ್ಯಕ್ಷೆ ವೀಣಾ ಗುಡಿ ಮಾತನಾಡಿ, ಮಹಿಳೆ ಎಲ್ಲ ಸಂದರ್ಭದಲ್ಲಿಯೂ ಪುರುಷರಿಗೆ ಸಮಾನರಾಗಿ ದೇಶ ಸಮಾಜದ ಸೇವೆ ಮಾಡಿದ್ದಾರೆ. ಅಂತಹ ಶಕ್ತಿ ನಮ್ಮಲ್ಲಿದೆ. ಪುರಸಭೆಯ ಆಡಳಿತದಲ್ಲಿ ಎಲ್ಲರೂ ಮೆಚ್ಚುವ ಆಡಳಿತ ನೀಡುತ್ತೇವೆ. ಶಾಸಕ ಶ್ರೀನಿವಾಸ ಮಾನೆ ಅವರ ಮಾರ್ಗದರ್ಶನ, ಎಲ್ಲ ಪುರಸಭೆ ಸದಸ್ಯರ ಸಹಕಾರ, ಹಿರಿಯರ ಆಶೀರ್ವಾದದೊಂದಿಗೆ ಜನಹಿತಕ್ಕೆ ಶ್ರಮಿಸುತ್ತೇವೆ ಎಂದರು.ಹಾನಗಲ್ಲ ಪುರಸಭೆಯಲ್ಲಿ ಕರ ವಸೂಲಿಗೆ ದೊಡ್ಡ ಹಿನ್ನಡೆಯಾಗಿದೆ. ಸಾರ್ವಜನಿಕರು ಕರವನ್ನು ಕಟ್ಟಿದರೆ ಪಟ್ಟಣದ ಹಿತಕ್ಕೆ ಹೆಚ್ಚು ಅನುಕೂಲ. ಪುರಸಭೆ ವ್ಯಾಪ್ತಿಯ ಜನರು ಸಕಾಲಿಕವಾಗಿ ಟ್ಯಾಕ್ಸ ಕಟ್ಟುವ ಮನೋಭಾವ ಹೊಂದಬೇಕು. ಆದಾಗ್ಯೂ ಹಾನಗಲ್ಲ ಪಟ್ಟಣದ ಅಭಿವೃದ್ಧಿಗೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನೂತನ ಅಧ್ಯಕ್ಷ ಉಪಾಧ್ಯಕ್ಷರು ಸಾರ್ವಜನಿಕರ ನಿರೀಕ್ಷೆ ಮೀರಿ ಕೆಲಸ ಮಾಡುವ ಸವಾಲು ನಿಮ್ಮ ಮೇಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷರಾದ ಯಲ್ಲಪ್ಪ ಕಿತ್ತೂರ, ನಾಗಪ್ಪ ಸವದತ್ತಿ, ಎಸ್.ಕೆ. ಪೀರಜಾದೆ, ಖುರ್ಷಿದ್ ಹುಲ್ಲತ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಮುಖಂಡರಾದ ಆದರ್ಶ ಶೆಟ್ಟಿ, ದುದ್ದುಸಾಬ ಅಕ್ಕಿವಳ್ಳಿ, ಗುರುರಾಜ ನಿಂಗೋಜಿ, ಸಂತೋಷ ಸುಣಗಾರ, ವಿರುಪಾಕ್ಷಪ್ಪ ಕಡಬಗೇರಿ, ಮೇಕಾಜಿ ಕಲಾಲ, ಸುರೇಶ ನಾಗಣ್ಣನವರ, ಎಂ.ಆರ್. ಗುತ್ತಲ, ಶಂಶಿಯಾ ಬಾಳೂರ, ಸಿಕಂದರ್ ವಾಲಿಕಾರ, ಶ್ರೀನಿವಾಸ ಭದ್ರಾವತಿ, ಪರಶುರಾಮ ಖಂಡೂನವರ, ಮಾಲತೇಶ ಕಲ್ಲೇರ, ಜಾಫರಸಾಬ ಬಾಳೂರ, ವಿನಯ ಬಂಕನಾಳ, ಮಾಜಿ ತಾಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಅನಿತಾ ಶಿವೂರ, ರಾಜೇಶ್ ಗುಡಿ, ನಾಗೇಂದ್ರ ತುಮರಿಕೊಪ್ಪ ಹಾಗೂ ಪುರಸಭೆ ಸದಸ್ಯರು ಈ ಸಂದರ್ಭದಲ್ಲಿದ್ದರು.