ತಮಿಳುನಾಡಿಗೆ ನೀರು: ಪತ್ರಕರ್ತರಿಂದ ಪ್ರತಿಭಟನೆ
KannadaprabhaNewsNetwork | Published : Oct 07 2023, 02:17 AM IST
ತಮಿಳುನಾಡಿಗೆ ನೀರು: ಪತ್ರಕರ್ತರಿಂದ ಪ್ರತಿಭಟನೆ
ಸಾರಾಂಶ
ತಮಿಳುನಾಡಿಗೆ ನೀರು: ಪತ್ರಕರ್ತರಿಂದ ಪ್ರತಿಭಟನೆ
- ಪ್ರಾಧಿಕಾರದ ಕುರುಡು ಆದೇಶಗಳ ವಿರುದ್ಧ ಪದಾಧಿಕಾರಿಗಳ ಆಕ್ರೋಶ - ಸಂಕಷ್ಟ ಸೂತ್ರ ರಚನೆಯೊಂದಿಗೆ ಸಮಸ್ಯೆ ಪರಿಹಾರಕ್ಕೆ ಒತ್ತಾಯ ಕನ್ನಡಪ್ರಭ ವಾರ್ತೆ ಮಂಡ್ಯ ನಿರಂತರವಾಗಿ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಿಲುವನ್ನು ವಿರೋಧಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಪತ್ರಕರ್ತರ ಭವನದಿಂದ ಮೆರವಣಿಗೆ ಹೊರಟ ಸಂಘದ ಪದಾಧಿಕಾರಿಗಳು ನೀರು ಸಂಗ್ರಹದ ವಸ್ತು ಸ್ಥಿತಿಯ ಅಧ್ಯಯನವನ್ನೇ ನಡೆಸದೆ ನೀರು ಬಿಡುವಂತೆ ಕುರುಡು ಆದೇಶ ಪ್ರಕಟಿಸುತ್ತಿರುವ ಪ್ರಾಧಿಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ನೀರನ್ನು ಸಂರಕ್ಷಣೆ ಮಾಡುವ ವಿಚಾರದಲ್ಲಿ ದಿಟ್ಟ ನಿರ್ಧಾರ ಮಾಡದ, ಮುಂದಿನ ಕಾನೂನು ಹೋರಾಟಕ್ಕೆ ಸಜ್ಜಾಗದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆ ಮೂಲಕ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಧರಣಿ ಸ್ಥಳಕ್ಕೆ ತೆರಳಿ ಧರಣಿಯಲ್ಲಿ ಭಾಗಿಯಾಗಿ ಪತ್ರಕರ್ತರು ಕಾವೇರಿ ಹೋರಾಟ ಬೆಂಬಲಿಸಿದರು. ಹಿರಿಯ ಪತ್ರಕರ್ತ ಪಿ.ಜೆ. ಚೈತನ್ಯಕುಮಾರ್ ಮಾತನಾಡಿ, ಕಾವೇರಿ ನದಿ ನೀರು ಹಂಚಿಕೆಯಲ್ಲಿ ಅನ್ಯಾಯ ಎನ್ನುವುದು ಕರ್ನಾಟಕಕ್ಕೆ ಕಟ್ಟಿಟ್ಟ ಬುತ್ತಿಯಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ, ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳೆಲ್ಲವೂ ತಮಿಳುನಾಡಿನ ಪರವಾಗಿಯೇ ಹೊರಬೀಳುತ್ತಿದೆ. ಸಂಕಷ್ಟಕಾಲದಲ್ಲಿ ಅನುಸರಿಸಬೇಕಾದ ಸೂತ್ರದ ಬಗ್ಗೆ ದಿವ್ಯ ಮೌನ ವಹಿಸಿವೆ. ಕೇಂದ್ರ ಸರ್ಕಾರ ಎರಡೂ ರಾಜ್ಯದವರನ್ನು ಕೂರಿಸಿ ಮಾತುಕತೆ ಮೂಲಕ ಸಂಕಷ್ಟ ಸೂತ್ರ ರಚನೆಗೆ ಮುಂದಾಗಿಲ್ಲ ಎಂದು ದೂಷಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಮತ್ತಿಕೆರೆ ಜಯರಾಮ್ ಮಾತನಾಡಿ, ಜಲಾಶಯಗಳಿಂದ ನಾಲೆಗಳಿಗೆ ನೀರು ಹರಿಸಬೇಕಾದರೆ ನೀರಾವರಿ ಸಲಹಾ ಸಮಿತಿ ಸಭೆ ತೀರ್ಮಾನ ಮಾಡುತ್ತದೆ. ಆದರೆ, ತಮಿಳುನಾಡಿಗೆ ನೀರು ಹರಿಸಬೇಕಾದರೆ ಯಾರ ಅಪ್ಪಣೆಯೂ ಬೇಕಿಲ್ಲ. ಕರ್ನಾಟಕ ಪ್ರಾಧಿಕಾರಕ್ಕೆ ನಮ್ಮ ನೀರಿನ ಸಂಕಷ್ಟ ಮನವರಿಕೆ ಮಾಡಿಕೊಡುವುದರೊಂದಿಗೆ, ಕೇಂದ್ರದ ಮೇಲೂ ಒತ್ತಡ ಹೇರಿ ಸಂಕಷ್ಟ ಸೂತ್ರ ರೂಪಿಸಿ ಜಾರಿಗೊಳಿಸುವಂತೆ ಒತ್ತಾಯಿಸಿದರು. ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ್ ಮಾತನಾಡಿ, ಕಾವೇರಿ ವಿಚಾರದಲ್ಲಿ ಆಗುತ್ತಿರುವ ಅನ್ಯಾಯ ತಡೆಯಲು ಮುಂಬರುವ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಬೇಕು. ಕಾವೇರಿ ಕಣಿವೆ ಜಿಲ್ಲೆಗಳಲ್ಲಿ ಮತದಾನ ಬಹಿಷ್ಕರಿಸಲು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕರೆ ನೀಡಬೇಕು ಎಂದು ಮನವಿ ಮಾಡಿದರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಹೋರಾಟದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು. ಸಂಘದ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಉಪಾಧ್ಯಕ್ಷ ಬಿ.ಪಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಕಾರ್ಯದರ್ಶಿಗಳಾದ ಮಂಜುಳ, ಆನಂದ, ಖಜಾಂಚಿ ನಂಜುಂಡಸ್ವಾಮಿ, ರಾಜ್ಯ ಸಮಿತಿ ಸದಸ್ಯ ಮಂಜುನಾಥ್, ಸಂಘದ ಮಾಜಿ ಅಧ್ಯಕ್ಷ ಕೆ.ಎನ್.ರವಿ. ಡಿ.ಎಲ್.ಲಿಂಗರಾಜು, ಕೃಷ್ಣ ಸ್ವರ್ಣಸಂದ್ರ, ಕೆ.ಎನ್.ಮಂಜುನಾಥ, ನವೀನ್ ಚಿಕ್ಕಮಂಡ್ಯ, ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮೂರ್ತಿ, ಶಂಭು ಕಬ್ಬನಹಳ್ಳಿ, ಬಿ.ಟಿ.ಮೋಹನ್‌ಕುಮಾರ್, ಜಯರಾಂ, ನಿರ್ದೇಶಕರಾದ ರಾಘವೇಂದ್ರ, ನಂದನ್, ನಾಗೇಶ್, ಶಿವನಂಜಯ್ಯ, ಗಂಜಾಂ ಮಂಜು, ನವೀನ್‌ಕುಮಾರ್ ಭಾಗವಹಿಸಿದ್ದರು.