ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್ ಕೃಷಿ ಅನುಭವಿಲ್ಲದ ಶಾಸಕ ಡಾ, ರಂಗನಾಥ್ ರೈತರ ಪ್ರತಿಭಟನೆಗೆ ಎಚ್ಚೆತ್ತು ಅಕ್ಟೋಬರ್ 18 ರಿಂದ ನೀರು ಹರಿಸಲು ಮುಂದಾಗಿದ್ದು ರೈತರ ಶ್ರಮದ ಜೊತೆಗೆ ನೀರು ಹಾಳಾಗಲಿದೆ ಎಂದು ಬಿಜೆಪಿ ಮುಖಂಡ ಡಿ ಕೃಷ್ಣಕುಮಾರ್ ಆರೋಪಿಸಿದ್ದಾರೆ. ತಾಲೂಕಿನ ಅಮೃತೂರು ಹೋಬಳಿಯ ಮಾರ್ಕೋನಹಳ್ಳಿ ಅಚ್ಚು ಕಟ್ಟು ಪ್ರದೇಶದ ರೈತರು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಜೊತೆಗೂಡಿ ಅಮೃತೂರಿನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಮಾರ್ಕೋನಹಳ್ಳಿ ಜಲಾಶಯದಲ್ಲಿ ಅಚ್ಚುಕಟ್ಟುದಾರರು ಭತ್ತ ಬೆಳೆದು ಹಲವಾರು ವರ್ಷಗಳಿಂದ ಬದುಕು ಸಾಗಿಸುತ್ತಿದ್ದರು. ಇತ್ತೀಚಿನ ಬದಲಾವಣೆ ಮತ್ತು ಕೃಷಿ ಚಟುವಟಿಕೆ ಹಾಗೂ ನೀರಾವರಿ ಸಮಸ್ಯೆಯಿಂದ ಬಹುತೇಕ ರೈತರು ಬೆಂಗಳೂರಿಗೆ ಗುಳೇ ಹೋಗಿದ್ದಾರೆ ಈ ಭಾಗದಲ್ಲಿ ಉಳಿದಿರುವ ಅಲ್ಪಸಲ್ಪ ರೈತರು ಕೃಷಿ ಮಾಡಲು ಮುಂದಾಗಿದ್ದಾರೆ. ಆದರೆ ಜಲಾಶಯದಿಂದ ನೀರು ಬಿಡುತ್ತಿಲ್ಲ ಈ ವಿಚಾರವಾಗಿ ರೈತರು ಮತ್ತು ಬಿಜೆಪಿ ಜೆಡಿಎಸ್ ಪ್ರತಿಭಟನೆ ತಯಾರಿ ನಡೆಸಿದ ಹಿನ್ನೆಲೆಯಲ್ಲಿ ಜಾಗೃತಗೊಂಡ ಶಾಸಕರು ತರಾತುರಿಯಲ್ಲಿ ಸಭೆ ಕರೆದು 135 ದಿನ ಹರಿಸಬೇಕಾಗಿದ್ದ ನೀರನ್ನು 125 ದಿನ ಹರಿಸುವ ತೀರ್ಮಾನ ತೆಗೆದುಕೊಂಡು ಅವೈಜ್ಞಾನಿಕ ಪದ್ಧತಿಗೆ ಚಾಲನೆ ಕೊಟ್ಟಿದ್ದಾರೆ. ಕೃಷಿ ಚಟುವಟಿಕೆಯಲ್ಲಿ ಅನುಭವ ಇಲ್ಲದಿದ್ದರೆ ಹಿರಿಯ ರೈತರು ಅಥವಾ ಸಂಬಂಧ ಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕು ಕೇವಲ ಕಣ್ಣು ಒರೆಸುವ ತಂತ್ರಕ್ಕೆ ನೀರು ಬಿಡುವದು ಸರಿ ಇಲ್ಲ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಡಾಕ್ಟರ್ ರವಿಬಾಬು ಮಾರ್ಕೋನಹಳ್ಳಿ ಜಲಾಶಯದಿಂದ ಈ ಭಾಗದ ರೈತರು ಭತ್ತ ಕಬ್ಬು ಬೆಳೆದು ಸಂತಸವಾಗಿರುತ್ತಿದ್ದರು. ಕಳೆದ ಕೆಲವು ದಿನಗಳಿಂದ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಕೃಷಿ ಚಟುವಟಿಕೆ ಇಲ್ಲಿ ನಿಂತಿದೆ. ಅಂತಹ ಸಮೃದ್ದವಾದ ಪ್ರದೇಶದಲ್ಲಿ ಬರಗಾಲ ಕಾಡುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಲು ವಿಫಲರಾಗಿರುವ ಶಾಸಕರು ಕೇವಲ ನೀರು ಬಿಡುವ ನಾಟಕ ಆಡುತ್ತಿದ್ದಾರೆ. ರೈತರಿಗೆ ಒಳಿತು ಮಾಡುವ ವಿಚಾರ ಇದ್ದರೆ ಈ ವೇಳೆಗೆ ಭತ್ತ ರಾಗಿ ನಾಟಿ ನಡೆದು ಹೋಗುತ್ತಿತ್ತು ಎಂದರು. ಅಮೃತೂರ್ ಬಸ್ ನಿಲ್ದಾಣದಿಂದ ಸಂಘಟನೆಗೊಂಡ ನೂರಾರು ರೈತರು ಹಾಗೂ ಜೆಡಿಎಸ್ ಮತ್ತು ಬಿಜೆಪಿಯ ಕಾರ್ಯಕರ್ತರು ಕೆಇಬಿ ವೃತ್ತದ ವರೆಗೆ ಮೆರವಣಿಗೆ ನಡೆಸಿ ಶಾಸಕರು ಸೇರಿದಂತೆ ಸರಕಾರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮುಖಂಡರಾದ ಅಶ್ವತ್, ರಾಮನಂಜಯ ಪ್ರಕಾಶು ಪಾಪಣ್ಣಿ ದಿನೇಶ ಸೇರಿದಂತೆ ಹಲವಾರು ರೈತರು ಇದ್ದರು.