ಸಾರಾಂಶ
ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಬಸವಸಾಗರ ಆಣೆಕಟ್ಟೆಯಿಂದ ನಾರಾಯಣಪುರ ಬಲದಂಡೆ ಮುಖ್ಯನಾಲೆ ಮುಖಾಂತರ ಜಿಲ್ಲೆ ಶಾಖೋತ್ಪನ್ನ ಸ್ಥಾವರಗಳಾದ ಆರ್‌ಟಿಪಿಎಸ್, ವೈಟಿಪಿಎಸ್ ಕೇಂದ್ರಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದ್ದು ಇದಕ್ಕಾಗಿ ಮುಖ್ಯನಾಲೆ ಪ್ರದೇಶದಲ್ಲಿ ಕಲಂ 144 ಜಾರಿಗೊಳಿಸಲಾಗಿದೆ.ರಾಯಚೂರು ಹಾಗೂ ಯರಮರಸ್ ಥರ್ಮಲ್ ವಿದ್ಯುತ್ ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸಲು ನೀರಿನ ಅಗತ್ಯವಿದೆ. ಇದನ್ನು ಮನಗಂಡು ವಿದ್ಯುತ್ ಉತ್ಪಾದನೆ ನಿಲುಗಡೆಯಾಗದಂತೆ 10 ದಿನಗಳ ಕಾಲ 500 ಕ್ಯೂಸೆಕ್ ನೀರು ಹರಿಬಿಡಲಾಗುತ್ತದೆ. ಇದಕ್ಕಾಗಿ ಬಲದಂಡೆ ನಾಲೆ ಪ್ರದೇಶದಲ್ಲಿ 144 ಕಲಂ ಜಾರಿ ಮಾಡಲಾಗಿದೆ.
ಈ ಹಿಂದೆ ಕೃಷ್ಣಾನದಿ ಮೂಲಕ ಆರ್‌ಟಿಪಿಎಸ್, ವೈಟಿಪಿಎಸ್ಗೆ ನೀರು ಹರಿಸಲಾಗುತಿತ್ತು ಆದರೆ ನದಿ ಸಂಪೂರ್ಣ ಒಣಗಿರುವುದರಿಂದ ನದಿ ಮೂಲಕ ನೀರು ಬಿಟ್ಟರೆ ಶೇ.25ರಷ್ಟು ನೀರು ನದಿಯಲ್ಲಿ ಹಿಂಗುವುದು ಹಾಗೂ ಗಾಳಿಗೆ ಹಾರುವುದು ಆಗುತ್ತದೆ. ಇದನ್ನು ಮನಗಂಡು ಬಲದಂಡೆ ಮುಖ್ಯನಾಲೆಯಿಂದ ನೀರು ಬಿಡಲಾಗುತ್ತದೆ.ಕುಡಿವ ನೀರಿಗೆ ಆಗ್ರಹ:ನಾರಾಯಣಪುರ ಬಲದಂಡೆ ನಾಲೆ ವ್ಯಾಪ್ತಿಯ ಯರಜಂತಿ, ಪೈದೊಡ್ಡಿ, ಬಂಡೇಬಾವಿ ಸೇರಿ ಗುಡ್ಡಗಾಡಿನಲ್ಲಿ ಹರಿಯುತ್ತಿದ್ದ ಹಳ್ಳ-ಕೊಳ್ಳ, ಬಾವಿ, ಗುಂಡ, ವರ್ತಿ, ಬತ್ತಿ ಬರಿದಾಗಿ ಇದರಿಂದ ಗುಡ್ಡಗಾಡಿನಲ್ಲಿ ವಾಸ ಮಾಡುವ ಸಾವಿ ಜನವಸತಿಗಳಲ್ಲಿ ನೀರು ಇಲ್ಲದೇ ಪರಿತಪಿಸುತ್ತಿದ್ದಾರೆ. ಇದರ ಜೊತೆಗೆ ಪಶುಸಂಗೋಪನೆ ಮಾಡುವ ಇಲ್ಲಿನ ಜನರಿಗೆ ಕುರಿ-ಮೇಕೆ, ದನ-ಕರು, ಎತ್ತು-ಎಮ್ಮೆ, ಕುಡಿಯುವ ನೀರಿನ ತೀವ್ರ ತೊಂದರೆ ಎದುರಾಗಿದೆ. ಸೋಮನಮರಡಿ ಬಳಿಯ ಮುಖ್ಯನಾಲೆಗೆ ಇರುವ ಎಸ್ಕೆಪ್ ಗೇಟ್ ಮೂಲಕ ವಿತರಣಾ ನಾಲೆ ನೀರು ಬಿಟ್ಟರೆ ಬೇಸಿಗೆಯ ನೀರಿನ ಬರ ನಿಗುತ್ತದೆ. ಇಲ್ಲದೇ ಹೋದರೆ ಗುಡ್ಡಗಾಡಿನಲ್ಲಿ ವಾಸ ಮಾಡುವ ಜನರು ಹಾಗೂ ಸಾಕು ಪ್ರಾಣಿಗಳಿಗೆ ಬೀಕರ ಕುಡಿಯುವ ನೀರಿನ ಆಪತ್ತು ಎದುರಾಗಲಿದೆ. ನೀರು ಬಿಡಿ ಎಂದು ನಾಲೆಯ ಮೇಲೆ ವಿಕ್ಷಣೆಗೆ ತೆರಳಿದ್ದ ಬಲದಂಡೆ ನಾಲೆ ಇಂಜಿನಿಯರ್‌ಗಳಿಗೆ ಜನರು ಆಗ್ರಹಸಿದರು.ಸರ್ಕಾರದ ನಿರ್ದೇಶನದಂತೆ ಬಲದಂಡೆ ನಾಲೆ ಮೂಲಕ ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕಗಳಿಗೆ ನೀರು ಬಿಡಲಾಗುತ್ತದೆ. 10 ದಿನಗಳ ಕಾಲ ನೀರು ಹರಿಸಲಾಗುವುದು. ನೀರಿನ ಅಕ್ರಮ ಬಳಕೆ ಹಾಗೂ ವಿತರಣಾ ನಾಲೆಗೆ ನೀರು ಬಿಡುವುದಿಲ್ಲ.
ಅಶೋಕ ಪಾಟೀಲ್, ನೊಡಲ್ ಅಧಿಕಾರಿ ಬಸವಸಾಗರ ಜಲಾಶಯ ನಾರಾಯಣಪುರ.