ವಂಚಿತ ಪ್ರದೇಶಕ್ಕೆ ವಿವಿಸಾಗರದಿಂದ ನೀರು

| Published : Aug 01 2025, 11:45 PM IST

ಸಾರಾಂಶ

ಮುಖ್ಯಮಂತ್ರಿಗಳೊಂದಿಗೆ ನಡೆದ ಸಭೆಯಲ್ಲಿ ಶಾಸಕ ಬಿ.ಜಿ. ಗೋವಿಂದಪ್ಪಭಾಗವಹಿಸಿರುವುದು.

ಕನ್ನಡಪ್ರಭ ವಾರ್ತೆ ಹೊಸದುರ್ಗಭದ್ರಾ ಮೇಲ್ದಂಡೆ ಯೋಜನೆಯಲ್ಲಿ ವಂಚಿತವಾಗಿದ್ದ ಕಸಬಾ ಹಾಗೂ ಮಾಡದಕೆರೆ ಹೋಬಳಿಯ ವಿವಿಸಾಗರ ಜಲಾಶಯದ ಹಿನ್ನೀರಿನ ಭಾಗಕ್ಕೆ ಏತ ನೀರಾವರಿ ಮೂಲಕ ನೀರು ಒದಗಿಸಲು ಸಿಎಂ ಸಿದ್ದರಾಮ್ಯನವರು ಸಮ್ಮತಿ ಸೂಚಿಸಿದ್ದು ಡಿಪಿಆರ್‌ ಮಾಡಿಸಲು ಸೂಚಿಸಿದ್ದಾರೆ ಎಂದು ಶಾಸಕ ಬಿಜಿ ಗೋವಿಂದಪ್ಪ ತಿಳಿಸಿದರು.

ಈ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗುರುವಾರ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲೆಯ ಶಾಸಕರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳೊಂದಿಗೆ ನಡೆದ ಸಭೆಯಲ್ಲಿ ತಾಲೂಕಿನ ಹಿನ್ನಿರಿನ ಭಾಗದ ಲಕ್ಕಿಹಳ್ಳಿ, ಅತ್ತಿಮಗ್ಗೆ, ಹುಣವಿನಡು, ಮತ್ತೋಡು, ಗುಡ್ಡದನೇರಲಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜನರ ಸಮಸ್ಯೆಯನ್ನು ಪ್ರಸ್ತಾಪಿಸಲಾಗಿದ್ದು ಈ ಬಾಗದ 6 ಕೆರೆಗಳು ಹಾಗೂ 12 ಸಾವಿರ ಎಕರೆ ಕೃಷಿ ಭೂಮಿಗೆ ಏತ ನೀರಾವರು ಮೂಲಕ ನೀರು ಸಿಗಲಿದೆ ಎಂದರು.

ಕಳೆದ 2 ವರ್ಷಗಳ ಹಿಂದೆ ಕೋಡಿ ಬಿದ್ದಾಗ ಹೊಸದುರ್ಗ ಹಿರಿಯೂರು ರಸ್ತೆಯಲ್ಲಿ ರಸ್ತೆ ಹಾಳಾಗಿದ್ದರಿಂದ ಕೋಡಿ ನೀರು ಹರಿಯುವ ಜಾಗದಲ್ಲಿ 34 ಕೋಟಿ ವೆಚ್ಚದಲ್ಲಿ ಬ್ರಿಡ್ಜ್‌ ನಿರ್ಮಿಸಲು ಹಣ ಮಂಜೂರಾಗಿದೆ ಅಲ್ಲದೆ ಹಿನ್ನೀರಿನ ಪ್ರದೇಶದ ಹಳ್ಳಿಗಳಲ್ಲಿ ಜಲಾಶಯ ಭರ್ತಿಯಾದಾಗ ಉಂಟಾಗಿದ್ದ ಹಾನಿ ಸರಿಪಡಿಸಲು 86 ಕೋಟಿ ರು. ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ ಇದಕ್ಕೂ ಹಣ ನೀಡಲು ಮುಖ್ಯಮಂತ್ರಿಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ವಿವಸಾಗರ ಜಲಾಶಯದ ಕೋಡಿಯಲ್ಲಿ ಕ್ರಸ್ಟ್‌ ಗೇಟ್‌ ಅಳವಡಿಕೆಗೆ ಈಗಾಗಲೇ ಸಿದ್ದತೆ ನಡೆಸಲಾಗಿದ್ದು ಶೀಘ್ರದಲ್ಲಿಯೇ ಕೆಲಸವೂ ಪ್ರಾರಂಭವಾಗಲಿದೆ . ಜಲಾಶಯದ ಹಿನ್ನಿರಿನ ಜನ ಪಕ್ಕದಲ್ಲಿಯೇ ನೀರು ಇದ್ದರೂ ಅದನ್ನು ಬಳಸಲು ಸಾಧ್ಯವಾಗದೆ ನೀರಿಗಾಗಿ ಪರದಾಡುವಂತಾಗಿದ್ದು ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂದು ಅವರು ತಿಳಿಸಿದರು.