ಸಾರಾಂಶ
ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ನೀರು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ತಾಲೂಕಿನ ಆನೆಗೊಂದಿಯ ನವ ವೃಂದಾವನ ಗಡ್ಡೆ ಜಲಾವೃತಗೊಂಡಿದೆ.
ಕನ್ನಡಪ್ರಭ ವಾರ್ತೆ ಗಂಗಾವತಿ
ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ನೀರು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ತಾಲೂಕಿನ ಆನೆಗೊಂದಿಯ ನವ ವೃಂದಾವನ ಗಡ್ಡೆ ಜಲಾವೃತಗೊಂಡಿದೆ. ಇದರಿಂದಾಗಿ ದಿನ ನಿತ್ಯ ನಡುಗಡ್ಡೆಯಲ್ಲಿರುವ 9 ಯತಿವರಣ್ಯರಿಗೆ ಪೂಜೆ ನಡೆಸುವುದು ಸ್ಥಗಿತಗೊಂಡಿದೆ.ದಿನ ನಿತ್ಯ ನವವೃಂದಾವನ ಗಡ್ಡೆಗ ಆನೆಗೊಂದಿಯ ಶ್ರೀರಾಘವೇಂದ್ರಸ್ವಾಮಿಗಳ ಮಠ ಮತ್ತು ಉತ್ತರಾದಿ ಮಠದ ಅರ್ಚಕರು ತೆರಳಿ ಪೂಜೆ, ಅಭಿಷೇಕ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಸುತ್ತಿದ್ದರು. ಈಗ ನದಿಗೆ 1 ಲಕ್ಷ 60 ಸಾವಿರ ಕ್ಯುಸೆಕ್ ನೀರು ಬಂದಿದ್ದರಿಂದ ತೆಪ್ಪ ಹಾಕುವುದನ್ನು ಸ್ಥಗಿತಗೊಳಿಸಿದೆ. ಅಲ್ಲದೇ ನದಿ ತೀರದಲ್ಲಿರುವ ಶ್ರೀಕೃಷ್ಣದೇವರಾಯ ಸಮಾಧಿ (60 ಕಾಲಿನ ಮಂಟಪ) ಜಲಾವೃತಗೊಂಡಿದೆ.
ಚಿಂತಾಮಣಿ, ಋಷಿಮುಖ ಪರ್ವತ, ತಳವಾರ ಘಟ್ಟದ ಭಾಗದಲ್ಲಿ ಅಧಿಕ ನೀರು ಬಂದಿದ್ದರಿಂದ ನದಿ ತೀರದಲ್ಲಿ ಜನತೆಗೆ ತಾಲೂಕು ಆಡಳಿತ ಎಚ್ಚರಿಕೆ ವಹಿಸಿದೆ.ಗಂಗಾವತಿ ನೂತನ ಸ್ನಾತಕೋತ್ತರ ಕೇಂದ್ರದಲ್ಲಿ ಉಪನ್ಯಾಸ:
ಪ್ರಸ್ತುತ ದಿನಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿವಿಧ ಕೌಶಲ್ಯದ ಬಳಕೆ ಅತ್ಯವಶ್ಯವಿದೆ ಎಂದು ಗಂಗಾವತಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಹಾಗೂ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಾಜಿ ದೇವೇಂದ್ರಪ್ಪ ಹೇಳಿದರು.ಕೊಪ್ಪಳ ವಿಶ್ವವಿದ್ಯಾಲಯದಡಿ ಪ್ರಾರಂಭವಾಗಿರುವ ಗಂಗಾವತಿ ನೂತನ ಸ್ನಾತಕೋತ್ತರ ಕೇಂದ್ರದಲ್ಲಿ ಎಂಎ ಇಂಗ್ಲಿಷ್ ವಿಭಾಗದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಯಶಸ್ವಿ ವೃತ್ತಿ ಜೀವನಕ್ಕಾಗಿ ಮೃದು ಕೌಶಲ್ಯ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆ ಎಂಬ ವಿಷಯದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಯಶಸ್ವಿ ವೃತ್ತಿ ಜೀವನಕ್ಕಾಗಿ ವಿವಿಧ ಕೌಶಲ್ಯಗಳ ಬಳಕೆ ಮಾಡಿಕೊಳ್ಳುವುದು ಅಗತ್ಯ ಎಂದರು.ಸಿಎನ್‌ಆರ್ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಸರ್ಫರಾಜ್ ಅಹಮದ್ ಮಾತನಾಡಿ, ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಯಾವೆಲ್ಲ ರೀತಿಯ ಸಮರ್ಪಕವಾದ ಜ್ಞಾನ ಅಭಿವೃದ್ಧಿಗೊಳಿಸಿಕೊಳ್ಳಬಹುದು ಎಂದು ವಿಶೇಷ ಉಪನ್ಯಾಸ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಹೊಸ ವಿಷಯದ ಪರಿಚಯ ಮಾಡಿಕೊಟ್ಟರು.
ಹಾಗೆಯೇ ನಾಯಕತ್ವ ಕೌಶಲ್ಯ, ಪ್ರಸ್ತುತಿ ಕೌಶಲ್ಯ, ಸಮಯ, ನಿರ್ವಹಣೆ ಕೌಶಲ್ಯ, ಸಮಸ್ಯೆ ನಿರ್ವಹಿಸುವ ಕೌಶಲ್ಯ, ಸೃಜನಶೀಲತೆ ಕೌಶಲ್ಯ ಹಾಗೂ ಭಾವನಾತ್ಮಕ ಬುದ್ಧಿವಂತಿಕೆ ಈ ಎಲ್ಲ ವಿಷಯದ ಕುರಿತು ಮಾಹಿತಿ ನೀಡಿದರು.ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕರಾದ ಡಾ. ಚೈತ್ರಾ ಪಾಂಡುರಂಗ ನಾಯ್ಕ, ಸುಲೋಚನಾ, ಡಾ. ಮಾನಸಾ, ಡಾ. ನಳಿನಿ ಇದ್ದರು.