ಕೆಎಂಎಫ್‌ ಹಾಲಿನ ಟ್ಯಾಂಕರಲ್ಲಿ ನೀರು: ಮುಖ್ಯಮಂತ್ರಿ ಸಿದ್ದರಾಮಯ್ಯ

| Published : Mar 19 2024, 12:52 AM IST / Updated: Mar 19 2024, 12:15 PM IST

Siddaramaiah

ಸಾರಾಂಶ

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇರುವ ಕಡೆಗೆ ಕೆಎಂಎಫ್‌ ವಾಟರ್‌ ಟ್ಯಾಂಕರ್‌ನಲ್ಲಿ ನೀರು ಪೂರೈಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ನೀರಿನ ಸಮಸ್ಯೆ ನಿವಾರಣೆಗಾಗಿ ಹೊಸದಾಗಿ 313 ಕೊಳವೆಬಾವಿ ಕೊರೆಸಲಾಗುತ್ತಿದೆ, ಜತೆಗೆ ನಿಷ್ಕ್ರಿಯಗೊಂಡಿರುವ 1,200 ಕೊಳವೆಬಾವಿಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. 

ಕೊಳಗೇರಿ, ಎತ್ತರ ಪ್ರದೇಶ ಹಾಗೂ ಕೊಳವೆಬಾವಿ ಅವಲಂಬಿತ ಪ್ರದೇಶಗಳಿಗೆ ಹೆಚ್ಚಿನ ಪ್ರಮಾಣದ ನೀರು ಸರಬರಾಜಿಗೆ ಕೆಎಂಎಫ್‌ ಹಾಲು ಸರಬರಾಜು ಟ್ಯಾಂಕರ್‌ಗಳನ್ನೂ ಬಳಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನ ನೀರಿನ ಸಮಸ್ಯೆ ಹಾಗೂ ಪರಿಹಾರ ಕ್ರಮಗಳ ಕುರಿತಂತೆ ಬಿಬಿಎಂಪಿ, ಜಲಮಂಡಳಿ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿಗಾಗಿ ಕೆಆರ್‌ಎಸ್‌ ಜಲಾಶಯದಲ್ಲಿ 11.05 ಟಿಎಂಸಿ ಹಾಗೂ ಕಬಿನಿಯಲ್ಲಿ 9.02 ಟಿಎಂಸಿ ನೀರು ಶೇಖರಿಸಲಾಗಿದೆ. 

ನಗರದಲ್ಲಿನ 14 ಸಾವಿರ ಕೊಳವೆಬಾವಿಗಳ ಪೈಕಿ 6,900 ಕೊಳವೆಬಾವಿಳು ಬತ್ತಿ ಹೋಗಿವೆ. ಹೀಗಾಗಿ ಸ್ವಲ್ಪ ಸಮಸ್ಯೆಯಾಗುತ್ತಿದೆ. 110 ಹಳ್ಳಿಗಳ ಪೈಕಿ 55 ಹಳ್ಳಿಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದು, ಅಲ್ಲಿಗೆ ಸಮರ್ಪಕ ನೀರು ಪೂರೈಕೆಗೆ ಸೂಚಿಸಲಾಗಿದೆ. 

ಕಾವೇರಿ 5ನೇ ಹಂತದ ಕಾಮಗಾರಿ ಜೂನ್‌ನಲ್ಲಿ ಪೂರ್ಣಗೊಂಡು 775 ಎಂಎಲ್‌ಡಿ ನೀರು ಸಿಗಲಿದೆ. ಮುಂದಿನ ದಿನಗಳಲ್ಲಿ 110 ಹಳ್ಳಿಗಳ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದರು.

ನೀರಿನ ಸಮಸ್ಯೆ ಕುರಿತಂತೆ ಸಾರ್ವಜನಿಕರು ಮಾಹಿತಿ ಮತ್ತು ದೂರು ನೀಡಲು ಸಹಾಯವಾಣಿ ಕೇಂದ್ರ ಹಾಗೂ ಟಾಸ್ಕ್‌ಫೋರ್ಸ್‌ಗಳನ್ನು ಹೆಚ್ಚಿಸಬೇಕು. ದೂರು ಬಂದ ಕೂಡಲೆ ಸ್ಥಳಕ್ಕೆ ತೆರಳಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದೂ ಹೇಳಿದ್ದೇನೆ. 

ಉದ್ಯಾನಗಳಿಗೆ ಶುದ್ಧೀಕರಿಸಿದ ನೀರು ಬಳಕೆ, ಕೆಸಿ ವ್ಯಾಲಿ ಮಾದರಿಯಲ್ಲಿ ಬೆಂಗಳೂರಿನ ಕೆರೆಗಳನ್ನು ಭರ್ತಿ ಮಾಡಬೇಕು. ಅಧಿಕಾರಿಗಳು ಪ್ರತಿದಿನ ಸಭೆ ನಡೆಸಿ, ವಾರಕ್ಕೊಮ್ಮೆ ಕ್ರಿಯಾಯೋಜನೆ ರೂಪಿಸಿ ಅದರಂತೆ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. 

ಒಂದು ವೇಳೆ ನೀರಿನ ಸಮಸ್ಯೆ ನಿವಾರಿಸಲು ವಿಫಲರಾದರೆ ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳನ್ನೇ ಹೊಣೆಯಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.500 ಎಂಎಲ್‌ಡಿ ನೀರಿನ ಕೊರತೆ

ನಗರದಲ್ಲಿ ಕುಡಿಯಲು ಮತ್ತು ಕೈಗಾರಿಕೆಗಳಿಗೆ ಪ್ರತಿದಿನ 2,600 ಎಂಎಲ್‌ಡಿ ನೀರಿನ ಅವಶ್ಯಕತೆಯಿದೆ. ಅದರಲ್ಲಿ ಕಾವೇರಿ ನದಿಯಿಂದ 1,450 ಎಂಎಲ್‌ಡಿ ನೀರು ಪೂರೈಸಲಾಗುತ್ತಿದ್ದು, 650 ಎಂಎಲ್‌ಡಿ ನೀರು ಕೊಳವೆಬಾವಿಯಿಂದ ದೊರೆಯುತ್ತಿದೆ. 

ಹೀಗಾಗಿ ಬೆಂಗಳೂರಿಗೆ 500 ಎಂಎಲ್‌ಡಿ ನೀರಿನ ಕೊರತೆಯಿದೆ. ಅದನ್ನು ನೀಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 1,700 ಖಾಸಗಿ ನೀರಿನ ಟ್ಯಾಂಕರ್‌ಗಳು ನೋಂದಣಿ ಮಾಡಿಕೊಂಡಿದ್ದು, ಅವುಗಳಿಗೆ ಮಾಲ್‌ಗಳು ಸೇರಿ ಖಾಸಗಿ ಬೋರ್‌ವೆಲ್‌ಗಳಿಂದ ನೀರು ತುಂಬಿಸಿ ಅಗತ್ಯವಿರುವಲ್ಲಿಗೆ ಸರಬರಾಜು ಮಾಡುವಂತೆ ಹೇಳಲಾಗಿದೆ. 

ಹಾಗೆಯೇ, ನೀರನ್ನು ದುರುಪಯೋಗ ಮಾಡುವುದನ್ನು ತಡೆಯಲು 143 ಟಾಸ್ಕ್‌ಫೋರ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಖ್ಯೆ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.