ಸಾರಾಂಶ
ಬೆಳಗಾವಿ ಜಿಲ್ಲೆಯ ನದಿಗಳ ಆರ್ಭಟ ಮುಂದುವರಿದಿದ್ದು, 36 ಸೇತುವೆಗಳು ಮುಳುಗಡೆಯಾಗಿವೆ. ಮಹಾರಾಷ್ಟ್ರ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲೆಯ ನದಿಗಳ ಆರ್ಭಟ ಮುಂದುವರಿದಿದ್ದು, 36 ಸೇತುವೆಗಳು ಮುಳುಗಡೆಯಾಗಿವೆ. ಮಹಾರಾಷ್ಟ್ರ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.ಸಂತ್ರಸ್ತರಿಗೆ ಜಿಲ್ಲೆಯಲ್ಲಿ 427 ಕಾಳಜಿ ಕೇಂದ್ರಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಒಟ್ಟು 35 ಬೋಟ್‌ಗಳು ಲಭ್ಯಇವೆ. ರಾಮದುರ್ಗ ತಾಲೂಕನ್ನು ಹೊರತುಪಡಿಸಿದರೆ, ಜಿಲ್ಲೆಯ ಎಲ್ಲ ತಾಲೂಕುಗಳ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜುಗಳಿಗೆ ಜು.27ರಂದು ರಜೆ ವಿಸ್ತರಿಸಲಾಗಿದೆ.
ಬೆಳಗಾವಿ ನಗರದಲ್ಲಿ ಶುಕ್ರವಾರ ಮಳೆಯ ಅಬ್ಬರ ಅಲ್ಪ ಕಡಿಮೆಯಾಗಿದ್ದರೂ ಟೆಂಗಿನಕೇರ ಗಲ್ಲಿಯಲ್ಲಿ ಮನೆಗಳಿಗೆ ನೀರು ನುಗ್ಗಿ, ಮನೆಬಳಕೆ ವಸ್ತುಗಳೆಲ್ಲವೂ ಹಾನಿಗೀಡಾಗಿದೆ. ಮನೆಯ ನೆಲಮಹಡಿಗಳಲ್ಲಿ ಅಂತರ್ಜಲ ಚಿಮ್ಮುತ್ತಿದೆ. ವಾಣಿಜ್ಯ ಸಂಕೀರ್ಣಗಳು ನೆಲಮಹಡಿಗಳೆಲ್ಲವೂ ಜಲಾವೃತಗೊಂಡಿವೆ. ಖಡೇಬಜಾರ್, ಗಣಪತಿ ಗಲ್ಲಿ, ಮಾರುತಿ ಗಲ್ಲಿ ಮತ್ತಿತರ ಕಡೆಗಳಲ್ಲಿ ಮಳೆಯಿಂದ ನೆಲಮಹಡಿಗಳಲ್ಲಿ ಸಂಗ್ರಹವಾಗಿರುವ ನೀರನ್ನು ಅಂಗಡಿದಾರರು ರಾತ್ರಿ ವೇಳೆ ಪಂಪ್‌ಸೆಟ್‌ಗಳ ಮೂಲಕ ರಸ್ತೆಗೆ ಬಿಡುತ್ತಿದ್ದಾರೆ.ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ಮನೆಗಳಿಗೆ ನುಗ್ಗಿರುವ ನೀರನ್ನು ಹೊರತೆಗೆಯಲು ನಾಗರಿಕರು ಹರಸಾಹಸ ಮಾಡುವಂತಾಗಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಳೆ ನೀರೆಲ್ಲ ಮನೆಗಳಿಗೆ ನುಗ್ಗಿತ್ತಿದೆ. ಮಳೆನೀರಿನಿಂದ ನೆನೆದಿರುವ ಹಳೆಯ ಕಟ್ಟಡಗಳು ಕುಸಿದು ಬೀಳುತ್ತಿವೆ. ರೈಲ್ವೆ ನಿಲ್ದಾಣದ ಪೊಲೀಸ್ ಠಾಣೆ ಎದುರು ನೀರು ಸಂಗ್ರಹವಾಗಿದೆ. ಪಾದಚಾರಿಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ.