ನೀರಿನ ಸಮಸ್ಯೆ: ಸ್ಥಳೀಯ ವ್ಯಾಪಾರಸ್ಥರಿಂದ ಪ್ರತಿಭಟನೆ

| Published : May 29 2024, 01:00 AM IST

ಸಾರಾಂಶ

ದೇವಾಲಯದ ಆವರರ್ಣದಲ್ಲಿ ದೇವಾಲಯಕ್ಕೆ ಸೇರಿದ ಶಾಲೆಯಲ್ಲಿದ್ದ ಬೋರ್ ವೆಲ್ ಕೆಟ್ಟು ನಿಂತು, ಅದು ದುರಸ್ತಿಯಾಗದೆ ಮಕ್ಕಳಿಗೆ ಒಂದು ತೊಟ್ಟು ನೀರಿಲ್ಲದೆ ಹಾಹಾಕಾರ ಉಂಟಾಗಿದೆ. ಕೆಟ್ಟು ನಿಂತ ಬೋರ್ ವೆಲ್ ಕೂಡ ದುರಸ್ತಿಮಾಡದ ಅಧಿಕಾರಿಗಳು ದೇವಾಲಯದ ಹುಂಡಿ ತುಂಬಿದ ನಂತರ ಬಂದು ಹುಂಡಿ ಹೊಡೆದು ಹಣ ಎಣಿಸಿ ಖಜಾನೆಗೆ ಜಮಾ ಮಾಡಲು ತೆಗೆದುಕೊಂಡು ಹೋಗುತ್ತಿದ್ದಾರೆ.

ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಶಕ್ತಿ ದೇವತೆ ಆಹಲ್ಯಾ ದೇವಿ ಆರತಿ ಉಕ್ಕಡ ಮಾರಮ್ಮನ ದೇವಾಲಯದ ಬಳಿ ನೀರಿನ ಸಮಸ್ಯೆ ನಿವಾರಿಸಲು ಆಗ್ರಹಿಸಿ ಸ್ಥಳೀಯರು ಹಾಗೂ ವ್ಯಾಪಾರಸ್ಥರು ದೇಗುಲದ ಆವರಣದ ಬಳಿ ಪ್ರತಿಭಟನೆ ನಡೆಸಿದರು.

ದೇವಾಲಯ ಸಮಿತಿ ಅಧ್ಯಕ್ಷ ಚಂದ್ರು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮುಜುರಾಯಿ ಇಲಾಖೆ ವಹಿಸಿಕೊಂಡ ದಿನದಿಂದಲೂ ದೇವಾಲಯದ ಬಳಿ ಮೂಲ ಸೌಕರ್ಯಗಳು ಕಡಿಮೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವಾಲಯಕ್ಕೆ ಬರುವ ಭಕ್ತರು ಹಾಗೂ ವ್ಯಾಪಾರಸ್ಥರಿಗೆ ಕುಡಿಯಲು, ಕೈಕಾಲು ತೊಳೆದುಕೊಳ್ಳಲು ಹಾಗೂ ಶೌಚಾಲಯಕ್ಕೆ ಬಳಸಲು ನೀರಿನ ಸಮಸ್ಯೆಯಾಗಿದೆ. ಶೌಚಾಲಯದಲ್ಲಿ ನೀರಿಲ್ಲದೆ ಬಾಟಲು ನೀರನ್ನು ಹಣ ಕೊಟ್ಟು ಬಳಸುವಂತಾಗಿದೆ. ಅಧಿಕಾರಿಗಳು ಇಲ್ಲಿನ ಜನರ ಸಮಸ್ಯೆಗಳನ್ನು ಆಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ದೇವಾಲಯದ ಆವರರ್ಣದಲ್ಲಿ ದೇವಾಲಯಕ್ಕೆ ಸೇರಿದ ಶಾಲೆಯಲ್ಲಿದ್ದ ಬೋರ್ ವೆಲ್ ಕೆಟ್ಟು ನಿಂತು, ಅದು ದುರಸ್ತಿಯಾಗದೆ ಮಕ್ಕಳಿಗೆ ಒಂದು ತೊಟ್ಟು ನೀರಿಲ್ಲದೆ ಹಾಹಾಕಾರ ಉಂಟಾಗಿದೆ. ಕೆಟ್ಟು ನಿಂತ ಬೋರ್ ವೆಲ್ ಕೂಡ ದುರಸ್ತಿಮಾಡದ ಅಧಿಕಾರಿಗಳು ದೇವಾಲಯದ ಹುಂಡಿ ತುಂಬಿದ ನಂತರ ಬಂದು ಹುಂಡಿ ಹೊಡೆದು ಹಣ ಎಣಿಸಿ ಖಜಾನೆಗೆ ಜಮಾ ಮಾಡಲು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಕಿಡಿಕಾರಿದರು.

ದೇವಾಲಯದ ಅಭಿವೃದ್ಧಿಗೆ ಯಾವ ಪೂರಕವಾದ ಕೆಲಸಗಳು ನಡೆಯುತ್ತಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಇಲ್ಲಿನ ಜನರ ಕಷ್ಟಗಳನ್ನು ಆಲೀಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸ್ಥಳೀಯರಾದ ಎನ್.ಕುಮಾರ್, ಭೂತಯ್ಯ, ಕೆ.ಕುಮಾರ್, ಲೋಕೇಶ್, ರವಿ, ವೆಂಕಟೇಶ್, ಶಿವು, ಸುನಂದಮ್ಮ, ಮಾಸ್ತಮ್ಮ, ಮಂಜುಳಮ್ಮ, ಇಂದ್ರಮ್ಮ, ಶಾಂತಮ್ಮ, ಬೋರಮ್ಮ, ರತ್ನಮ್ಮ ಸೇರಿದಂತೆ ಸ್ಥಳೀಯರು ಗ್ರಾಮಸ್ಥರು ಭಕ್ತರು ಉಪಸ್ಥಿತರಿದ್ದರು.