ಸಾರಾಂಶ
ಪಂಪನಗೌಡ ಬಾದನಹಟ್ಟಿ
ಕುರುಗೋಡು: ಬಿಸಿಲಿನ ಧಗೆಗೆ ಮನೆ ಬಿಟ್ಟು ಹೊರಗೆ ಬಾರದ ಸ್ಥಿತಿ. ಎಷ್ಟು ನೀರು ಕುಡಿದರೂ ನೀಗದ ದಾಹ. ಇಂತಹ ಕಠಿಣ ಸಂದರ್ಭದಲ್ಲಿ ಪಟ್ಟಣದ ಜನತೆ ಹನಿ ನೀರಿಗಾಗಿ ನಿತ್ಯ ಪರಿತಪಿಸುತ್ತಿದ್ದಾರೆ.ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜಲಜೀವನ ಮಿಷನ್ ಮೂಲಕ ಮನೆ ಮನೆಗೆ ಶುದ್ಧ ನೀರು ಒದಗಿಸುತ್ತಿದೆ. ಹಲವೆಡೆ ಯೋಜನೆಯಡಿ ಕಳಪೆ ಕಾಮಗಾರಿಗಳಾಗಿವೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. ಹೀಗಾಗಿ ಜನರಿಗೆ ಅನುಕೂಲವಾಗಬೇಕಾದ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗದೇ ಇಲ್ಲಿ ಹಳ್ಳ ಹಿಡಿದಿದೆ.
ತಾಲೂಕಿನ 12 ಗ್ರಾಪಂ ವ್ಯಾಪ್ತಿಯ ಒಟ್ಟು 23 ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಸರ್ಕಾರ ನಿರ್ಮಿಸಿದ ಕೆರೆಗಳು ನೀರಿಲ್ಲದೆ ಬತ್ತಿವೆ. ದುಡ್ಡು ಕೊಟ್ಟು ನೀರು ತರುವ ದುಸ್ಥಿತಿ ಎದುರಾಗಿದೆ. ಕೆಲ ಗ್ರಾಮಗಳಲ್ಲಿ ಪ್ಲೋರೈಡ್ ನೀರೇ ಗತಿಯಾಗಿದೆ. ಜನರು ನೀರಿಗಾಗಿ ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಅಲೆದಾಡುವ ಸ್ಥಿತಿ ಬಂದಿದೆ.ತಾಲೂಕಿನಲ್ಲಿ ಒಟ್ಟು 49 ಆರ್‌ಒ ಪ್ಲಾಂಟ್‌ಗಳಿವೆ. ಅದರಲ್ಲಿ ಕೆಲವು ನಿರ್ವಹಣೆ ಇಲ್ಲದೆ ನಿರುಪಯುಕ್ತಗೊಂಡಿವೆ. ಕುರುಗೋಡು ಪಟ್ಟಣ 25 ಸಾವಿರ ಜನಸಂಖ್ಯೆ ಹೊಂದಿದೆ. ಆದರೆ ಅಧಿಕಾರಿಗಳು ನೀರಿನ ಸಮಸ್ಯೆ ನೀಗಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.
ಹಲವು ಹಳ್ಳಿಗಳಲ್ಲಿ ಬಳಕೆಗೆ ನೀರಿಲ್ಲದ ಪಾತ್ರೆ ತೊಳೆಯಲು, ಬಟ್ಟೆ ಸ್ವಚ್ಛಗೊಳಿಸಲು ಮಹಿಳೆಯರು ಹರಸಾಹಸಪಡುತ್ತಿದ್ದಾರೆ. ಕೆಲವೆಡೆ ಗ್ರಾಮಸ್ಥರು ನಿಯಮಿತವಾಗಿ ನೀರು ಸರಬರಾಜು ಮಾಡುವಂತೆ ಗ್ರಾಪಂಗೆ ಆಗ್ರಹಿಸುತ್ತಿದ್ದಾರೆ. ಆದರೂ ಸ್ಪಂದನೆ ಸಿಗುತ್ತಿಲ್ಲ. ನೀರಿಗಾಗಿ ಜನರ ಪರದಾಟ ತಪ್ಪುತ್ತಿಲ್ಲ.ಎಚ್. ವೀರಾಪುರ, ಸೋಮಲಾಪುರ, ಒರ್ವಾಯಿ, ಏಳುಬೆಂಚೆ, ಕೆರೆಕೆರೆ, ಕಲ್ಲುಕಂಬ, ಸಿದ್ದಮ್ಮನಹಳ್ಳಿ, ಎರೆಂಗಿಳಿ, ವದ್ದಟ್ಟಿ, ದಮ್ಮೂರು, ಕೋಳೂರು, ಬೈಲೂರು, ಸಿಂದಿಗೇರಿ, ಸೋಮಸಮುದ್ರ ಹಾಗೂ ಮುಷ್ಟಗಟ್ಟೆ ಸೇರಿದಂತೆ 23 ಗ್ರಾಮಗಳ ಜನರಿಗೆ ನೀರಿನ ತೊಂದರೆ ತೀವ್ರವಾಗಿದೆ.
ಸರ್ಕಾರ ಈ ಭಾಗದಲ್ಲಿ 8 ಕುಡಿಯುವ ನೀರಿನ ಕೆರೆಗಳನ್ನು ನಿರ್ಮಿಸಿದೆ. ತುಂಗಭದ್ರಾ ಡ್ಯಾಂನಿಂದ ಕೃಷಿಗೆ ಬೇಸಿಗೆ ನೀರು ಸರಬರಾಜು ಸ್ಥಗಿತಗೊಳಿಸಿದ ಕಾರಣ ಕೆರೆಗೆ ನೀರು ತುಂಬಿಸಲು ಆಗಿಲ್ಲ. ಈ ಕಾರಣದಿಂದ ಕೆರೆಗಳು ಒಣಗಿವೆ. ಹೀಗಾಗಿ ಗ್ರಾಮಸ್ಥರು ಕೈಬೋರ್ ಸುರಿಸುವ ಅಶುದ್ಧ ನೀರು ಸೇವಿಸುವ ಒತ್ತಡಕ್ಕೆ ಸಿಲುಕಿ ನಾನಾ ರೋಗಕ್ಕೆ ತುತ್ತಾಗಿ ಅಸ್ಪತ್ರೆ ಅಲೆದಾಡುವಂತಾಗಿದೆ.ತಕ್ಷಣ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಡಳಿತ ಕಣ್ಣು ಮುಚ್ಚಿ ಕೂತಿದೆ. ಇಲ್ಲಿಯವರೆಗೆ ತೀವ್ರ ನೀರಿನ ಅಭಾವ ಎದುರಿಸುತ್ತಿರುವ ಗ್ರಾಮಗಳಿಗೆ ಯಾವ ಅಧಿಕಾರಿಗಳೂ ಭೇಟಿ ನೀಡಿಲ್ಲ. ಪರ್ಯಾಯ ವ್ಯವಸ್ಥೆ ರೂಪಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಕನಿಷ್ಠ ಕೆಟ್ಟಿರುವ ಬೋರ್‌ವೆಲ್‌ಗಳ ದುರಸ್ತಿಗೂ ಕ್ರಮ ಕೈಗೊಂಡಿಲ್ಲ.
ಮುಂಜಾಗ್ರತಾ ಕ್ರಮ: ಕುಡಿಯುವ ನೀರಿನ ಕೆರೆಗಳಲ್ಲಿ ಸ್ವಲ್ಪ ಮಟ್ಟಿಗೆ ನೀರು ಇದೆ. ಅದರ ನಿರ್ವಹಣೆ ಗ್ರಾಮೀಣ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಸಂಬಂಧಪಟ್ಟಿದ್ದು. ನೀರಿನ ಸಮಸ್ಯೆ ನೀಗಿಸಲು ಪಿಡಿಒಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಅದಕ್ಕಾಗಿ ಅನುದಾನ ಕೂಡ ಮೀಸಲಿಟ್ಟಿದ್ದಾರೆ ಎಂದು ತಾಪಂ ಇಒ ಕೆ.ವಿ. ನಿರ್ಮಲಾ ತಿಳಿಸಿದರು.ನೀರಿನ ಕೊರತೆ: ಗ್ರಾಮದ ಕೆರೆಯಲ್ಲಿ ನೀರೇ ಇಲ್ಲ. ಬೋರ್ ನೀರನ್ನು ಒವರ್ ಹೆಡ್ ಟ್ಯಾಂಕ್‌ಗೆ ಪೂರೈಸಿ ಅಲ್ಲಿಂದ ನಳಗಳಿಗೆ ಬಿಡುತ್ತಿದ್ದಾರೆ. ಇದು ಜನರಿಗೆ ತುಂಬಾ ಸಮಸ್ಯೆಯಾಗಿದೆ. ಅಲ್ಲದೆ ಶುದ್ಧ ಕುಡಿಯುವ ನೀರಿನ ಕೊರತೆ ಕಾಣುತ್ತಿದೆ. ಜತೆಗೆ ಜಾನುವಾರುಗಳಿಗೂ ಸಮಸ್ಯೆ ಎದುರಾಗಿದೆ ಎಂದು ಕಲ್ಲುಕಂಬ ಗ್ರಾಮದ ಗೊಲ್ಲರ ನಾಗರಾಜ್ ತಿಳಿಸಿದರು.ಸಮಸ್ಯೆ ತೀವ್ರ: ಸಿಂದಿಗೇರಿ ಗ್ರಾಮದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಗ್ರಾಪಂನವರು ಶುದ್ಧ ಘಟಕಗಳ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಿದ್ದಾರೆ. ಅವರು ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ. ಅಲ್ಲದೇ ಗ್ರಾಪಂನವರು ವಾರಕ್ಕೊಮ್ಮೆ ನೀರು ಬಿಡುತ್ತಿದ್ದಾರೆ. ಇದರಿಂದ ತೀವ್ರ ತೊಂದರೆಯಾಗಿದೆ ಎಂದು ಸಿಂದಿಗೇರಿ ಗ್ರಾಮಸ್ಥೆ ಮೋಕಾ ನೀಲಮ್ಮ ತಿಳಿಸಿದರು.