ಸಾರಾಂಶ
ಅರಸೀಕೆರೆ ಎಪಿಎಂಸಿ ಯಾರ್ಡ್‌ನಲ್ಲಿ ಘಟನೆ । ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ । ಸರತಿಯಲ್ಲಿ ನಿಂತ ರೈತ ಮಹಿಳೆಯರು ಹೈರಾಣು
ಕನ್ನಡಪ್ರಭ ವಾರ್ತೆ ಅರಸೀಕೆರೆರೈತ ದೇಶದ ಬೆನ್ನೆಲುಬು, ಅವನೇ ಅನ್ನದಾತ, ಸರ್ಕಾರದ ಕಾರ್ಯಕ್ರಮಗಳಲ್ಲಿ ರೈತ ಗೀತೆ ಹಾಡಲೇಬೇಕು ಎಂದೆಲ್ಲಾ ಹೇಳುವ ಸರ್ಕಾರ ರೈತರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದನ್ನು ಅರಸೀಕೆರೆ ಎಪಿಎಂಸಿ ಯಾರ್ಡಿನಲ್ಲಿ ನಮ್ಮ ಜನಪ್ರತಿನಿಧಿಗಳು ರಾಜಕಾರಣಿಗಳು ಬಂದು ನೋಡಲೇಬೇಕು ಎಂದು ರೈತರು ಕಿಡಿಕಾರಿದ್ದಾರೆ.
ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸಲು ಅರಸೀಕೆರೆ ಎಪಿಎಂಸಿ ಯಾರ್ಡ್‌ನಲ್ಲಿ ಸರ್ಕಾರ ಸೋಮವಾರ ವ್ಯವಸ್ಥೆ ಕಲ್ಪಿಸಿತ್ತು. ಆದರೆ ಸೂಕ್ತ ವ್ಯವಸ್ಥೆ ಇಲ್ಲದೆ ಸರತಿ ಸಾಲಿನಲ್ಲಿ ರೈತರು, ಮಹಿಳೆಯರು ಬಿಸಿಲಿನಲ್ಲಿ ಬಳಲಿದರು. ಇಲ್ಲಿನ ಅವ್ಯವಸ್ಥೆಯನ್ನು ಖಂಡಿಸಿ ರೈತರು ಪ್ರತಿಭಟನೆ ನಡೆಸಿದರು.ರೈತರನ್ನು ಬಹಳ ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ. ತಾವು ಬೆಳೆದ ಕೊಬ್ಬರಿಯನ್ನು ಬೆಂಬಲ ಬೆಲೆಗೆ ಮಾರಲು ಕೇವಲ ನೊಂದಣಿಗಾಗಿಯೇ ಹಗಲು ರಾತ್ರಿ ರೈತ, ರೈತ ಮಹಿಳೆ ನಿಲ್ಲಬೇಕೆ? ವ್ಯವಸ್ಥಿತವಾಗಿ ನಾಲ್ಕಾರು ಕೌಂಟರ್‌ಗಳನ್ನು ಮಾಡುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲವೇ? ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಮುಂಜಾನೆಯಿಂದ ಮಹಿಳೆಯರು ಸರದಿಯಲ್ಲಿ ನಿಂತು ನೋಂದಣಿಗಾಗಿ ತಿಂಡಿ, ಊಟ ಬಿಟ್ಟು ಉರಿ ಬಿಸಿಲಿನಲ್ಲಿ ನರಕ ಯಾತನೆ ಅನುಭವಿಸುತ್ತಿದ್ದಾರೆ. ರೈತರಿಗೆ ಕುಡಿಯಲು ನೀರಿಲ್ಲ, ನಿಲ್ಲಲು ನೆರಳಿಲ್ಲ ವ್ಯವಸ್ಥಿತವಾಗಿ ಒಂದು ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಕಳೆದ ತಿಂಗಳಷ್ಟೇ ನೋಂದಣಿ ಕಾರ್ಯವನ್ನು ಮಾಡಿ ಅದರಲ್ಲಿ ಭ್ರಷ್ಟಾಚಾರವನ್ನು ಮನಗಂಡ ಸರ್ಕಾರ ಮರು ನೋಂದಣಿಗೆ ಆದೇಶಿಸಿದೆ.ರೈತರು ತಾವು ಕೊಬ್ಬರಿ ಬೆಳೆಯಲು ಸಹ ಇಷ್ಟು ಕಷ್ಟ ಪಡಲಿಲ್ಲ ಎಂದು ಹೇಳುತ್ತಾರೆ. ಸರ್ಕಾರ ತುಘಲಕ್ ದರ್ಬಾರ್ ಆಗಿದೆ, ವ್ಯವಸ್ಥಿತವಾಗಿ ನೋಂದಣಿ ಮಾಡುವ ನಿಟ್ಟಿನಲ್ಲಿ ಯಾವ ಜನಪ್ರತಿನಿಧಿಗಳು ಇತ್ತ ತಲೆ ಹಾಕುವುದಿಲ್ಲ. ಉತ್ತಮ ಸಾಮರ್ಥ್ಯದ ಸರ್ವರ್ ವ್ಯವಸ್ಥೆಗೊಳಿಸಲು ಆಗದ ಸರ್ಕಾರವೇ ಇದು? ಎಂದು ರೈತರು ದೂರಿದ್ದಾರೆ.
ತಮ್ಮ ಸರದಿ ಬಂದರೂ ನೋಂದಣಿ ಆಗುವುದಿಲ್ಲ. ಸರ್ವರ್ ಇಲ್ಲ ಎಂದು ಸಿಬ್ಬಂದಿ ಎದ್ದು ಹೋಗುತ್ತಾರೆ. ಕೌಂಟರ್‌ಗಳನ್ನು ಹೆಚ್ಚಿಸಿಲ್ಲ. ರೈತರು ಮಹಿಳೆಯರು ಪಡಿಪಾಟಲು ಅನುಭವಿಸಿದ್ದಾರೆ. ಸರ್ವರ್ ಉತ್ತಮ ಪಡಿಸಿ ಕೌಂಟರ್‌ಗಳನ್ನು ಹೆಚ್ಚಿಸಬೇಕು. ರೈತರು ಭಿಕ್ಷುಕರಲ್ಲ, ನಾವು ಭಿಕ್ಷೆ ಬೇಡಲು ಬಂದವರಲ್ಲ ಎಂದು ರೈತರು ಹೇಳಿದ್ದಾರೆ.‘ವಾಸ್ತವತೆ ಏನಾಗಿದೆ? ಸಮಸ್ಯೆಗೆ ಏನು ಕಾರಣ ಎಂದಷ್ಟೇ ಅಧಿಕಾರಿಗಳು ಹೇಳಿ ಸಮಾಧಾನಪಡಿಸಬಹುದು. ಆದರೆ ಇಲ್ಲಿ ಅಧಿಕಾರಗಳು ವಿಧಾನಸೌಧದ ಬಾಗಿಲು ತಟ್ಟಲು ಆಗದು. ಅದನ್ನು ಯಾರು ಮಾಡಬೇಕೋ ಅವರೇ ಮಾಡಬೇಕು. ರೈತರ ಸಂಖ್ಯೆಗೆ ಅನುಗುಣವಾಗಿ ಕೌಂಟರ್‌ಗಳನ್ನು ಹೆಚ್ಚಿಸಬೇಕು. ನಿರಂತರವಾಗಿ ಸರ್ವರ್ ಇರಬೇಕು’ ಎಂದು ರೈತರು ಒತ್ತಾಯಿಸಿದ್ದಾರೆ.
‘ರೈತರಿಂದ ಚಪ್ಪಾಳೆ ತಟ್ಟಿಸಿಕೊಳ್ಳುವ ರಾಜಕಾರಣಿಗಳೇ ಮನೆಯಿಂದ ಹೊರಬನ್ನಿ. ಗರಿಗರಿ ಜುಬ್ಬಾ ಧರಿಸಿ ಮತ ಕೇಳಲು ಬರುವ ನಿಮಗೆ ನಾಚಿಕೆ ಆಗುವುದಿಲ್ಲವೇ? ಯಾವ ಮುಖ ಇಟ್ಟುಕೊಂಡು ನೀವು ಮತ ಕೇಳಲು ಈ ಬಾರಿ ಬರುತ್ತೀರಿ? ಹಿಂದೆಂದೂ ಈ ರೀತಿ ಮಹಿಳೆಯರು ಸರದಿಯಲ್ಲಿ ನಿಂತು ತಾವು ಬೆಳೆದ ಕೊಬ್ಬರಿಗಾಗಿ ನೋಂದಣಿ ಮಾಡಿಸಿಕೊಳ್ಳಲು ಹಗಲು-ರಾತ್ರಿ ನಿಂತ ನಿದರ್ಶನವಿರಲಿಲ್ಲ. ರೈತರನ್ನು ಇಷ್ಟು ಕೀಳಾಗಿ ನಡೆಸಿಕೊಳ್ಳಬೇಡಿ’ ಎಂದು ರೈತರು ಎಚ್ಚರಿಸಿದರು.ಜನಪ್ರತಿನಿಧಿಗಳು ತುರ್ತಾಗಿ ಕೌಂಟರ್‌ಗಳನ್ನು ಹೆಚ್ಚಿಸಬೇಕು ಬಿಸಿಲಿನ ತಾಪ ಈ ಬಾರಿ ಹೆಚ್ಚಿದೆ. ರೈತರು ಸರದಿಯಲ್ಲಿ ನಿಲ್ಲಲು ನೆರಳನ್ನು ಒದಗಿಸಿ ಕೊಡಬೇಕು. ನೋಂದಣಿ ವೇಳೆ ರೈತರಿಗೆ ಅಗತ್ಯ ಸೌಲಭ್ಯವನ್ನು ಮಾಡಿಕೊಡಿ. ಜನಪ್ರತಿನಿಧಿಗಳು ಪ್ರಾಮಾಣಿಕ ಕಾಳಜಿಯ ಮೂಲಕ ಸಮಸ್ಯೆಗೆ ಪರಿಹಾರ ಒದಗಿಸಿ ಕೊಡಬೇಕಾಗಿದೆ ಎಂದು ರೈತರು ಒತ್ತಾಯಿಸಿದ್ದಾರೆ. ಕೊಬ್ಬರಿ ನೋಂದಣಿಗಾಗಿ ಉಂಟಾದ ಗೊಂದಲದಿಂದ ಅರಸೀಕೆರೆ ಎಪಿಎಂಸಿ ಯಾರ್ಡ್‌ನಲ್ಲಿ ರೈತರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು.