ಚಿಕ್ಕೇನಹಳ್ಳಿಯಲ್ಲಿ ಸಂಭ್ರಮದ ಕಾಳುಹಬ್ಬ: ೧೧೦೦ ಬಾಳೆಎಲೆ ಎಡೆ ತಿಂದ ದಾಸಯ್ಯರು

| Published : Mar 05 2024, 01:37 AM IST

ಚಿಕ್ಕೇನಹಳ್ಳಿಯಲ್ಲಿ ಸಂಭ್ರಮದ ಕಾಳುಹಬ್ಬ: ೧೧೦೦ ಬಾಳೆಎಲೆ ಎಡೆ ತಿಂದ ದಾಸಯ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ಸಿರಿಗೆರೆ ಸಮೀಪದ ಚಿಕ್ಕೇನಹಳ್ಳಿ ಗ್ರಾಮದಲ್ಲಿ ಕಾಳುಹಬ್ಬದ ಅಂಗವಾಗಿ ೧,೧೦೦ ಬಾಳೆಹಣ್ಣಿನ ಎಡೆಗಳನ್ನು ದಾಸಯ್ಯಗಳು ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆಸಿರಿಗೆರೆ ಸಮೀಪದ ಚಿಕ್ಕೇನಹಳ್ಳಿ ಗ್ರಾಮದಲ್ಲಿ ಕಾಳುಹಬ್ಬವನ್ನು ಆಂಜನೇಯ ಸ್ವಾಮಿಗೆ ೧೧೦೦ ಬಾಳೆಹಣ್ಣಿನ ಎಡೆ ಹಾಕುವುದರ ಮೂಲಕ ಭಾನುವಾರ ಸಂಜೆ ಅದ್ಧೂರಿಯಾಗಿ ಆಚರಿಸಲಾಯಿತು.ಗ್ರಾಮದ ಆಂಜನೇಯಸ್ವಾಮಿಗೆ ಬೆಳಿಗ್ಗೆಯಿಂದ ಪೂಜಾದಿ ಕಾರ್ಯಗಳನ್ನು ನೆರವೇರಿಸಿದರು. ಗ್ರಾಮದ ಬೀದಿಗಳನ್ನು ಶೃಂಗಾರಗೊಳಿಸಿ, ಮಂಗಳವಾದ್ಯ ದೊಂದಿಗೆ ಸ್ವಾಮಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ದೇವರ ಉತ್ಸವ ಗ್ರಾಮದ ಪ್ರಮುಖ ಬೀದಿಗೆ ಬಂದಾಗ ೧೧೦೦ ಬಾಳೆಹಣ್ಣಿನ ಎಡೆ ಹಾಕಿ ದೇವರಿಗೆ ನೈವೇದ್ಯ ಮಾಡಲಾಯಿತು. ದಾರಿಯುದ್ದಕ್ಕೂ ಬಾಳೆ ಎಲೆ ಹಾಕಿ ಅದರಲ್ಲಿ ಬಾಳೆಹಣ್ಣು, ತುಪ್ಪ ಮತ್ತು ಬೆಲ್ಲವನ್ನು ಬಡಿಸಲಾಗಿತ್ತು. ದೇವರ ಉತ್ಸವ ಹಾದು ಹೋದ ನಂತರ ಸುಮಾರು ೧೦೦ ದಾಸಯ್ಯಗಳು ಎಡೆ ಊಟ ಮಾಡಿದರು.ಸಂಪ್ರದಾಯ: ರಸ್ತೆಯುದ್ದಕ್ಕೂ ಬಾಳೆ ಎಲೆ ಹಾಕಿ ಅದರಲ್ಲಿ ಬಡಿಸಲಾದ ಖಾದ್ಯಗಳನ್ನು ದಾಸಯ್ಯಗಳು ಊಟ ಮಾಡುವುದು ಪದ್ಧತಿ. ಆದರೆ ಅವರು ದೇವರ ಎಡೆ ಯನ್ನು ಕೈಯಿಂದ ಮುಟ್ಟದೆ ನೆಲಕ್ಕೆ ಮಂಡಿಯೂರಿ, ನೇರವಾಗಿ ಎಲೆ ಮೇಲಿನ ಎಡೆಗೆ ಬಾಯಿ ಹಾಕಿ ಪ್ರಸಾದ ಸ್ವೀಕರಿಸಬೇಕು. ದಾಸಯ್ಯಗಳಿಗೆ ಇದೊಂದು ಸವಾಲಾದರೆ ನೋಡುಗರಿಗೆ ವಿನೋದವೇ ಸರಿ. ೧೦೦ ಜನ ದಾಸಯ್ಯಗಳು ೧೧೦೦ ಎಲೆಗಳಲ್ಲಿ ಬಡಿಸಲಾದ ನೈವೇದ್ಯವನ್ನು ಊಟ ಮಾಡುವುದು ಮತ್ತೊಂದು ಸವಾಲೇ ಸರಿ. ಅಂತಹ ಕೆಲಸವನ್ನು ದಾಸಯ್ಯಗಳು ನೆರವೇರಿಸಿ ನೋಡುಗರ ಕಣ್ಣುಗಳು ಅರಳುವಂತೆ ಮಾಡಿದರು.ಕಾಳು ಹಬ್ಬದ ಅಂಗವಾಗಿ ಪ್ರತಿ ಮನೆಯಲ್ಲೂ ಹುರುಳಿ ಕಾಳು ಬೇಯಿಸಿ, ಅದಕ್ಕೆ ತುಪ್ಪ, ಬೆಲ್ಲ, ಹಾಲು ಹಾಕಿ ಊಟ ಮಾಡುವುದು ಕೂಡ ಸಂಪ್ರದಾಯ. ಈ ಖಾದ್ಯವನ್ನಲ್ಲದೆ ಬೇರೆ ಖಾದ್ಯಗಳನ್ನು ಈ ಹಬ್ಬದಲ್ಲಿ ಗ್ರಾಮಸ್ಥರು ಮಾಡುವಂತಿಲ್ಲವೆಂಬುದು ಗ್ರಾಮಸ್ಥರ ಕಟ್ಟುನಿಟ್ಟು. ಗ್ರಾಮಸ್ಥರಾದ ಗೌಡ್ರ ಮಹದೇವಪ್ಪ, ಕೃಷ್ಣಮೂರ್ತಿ, ಪೂಜಾರ್‌ ತಿಮ್ಮಪ್ಪ, ಪೂಜಾರ್‌ ಮಧು, ಶಿವಣ್ಣ, ಗ್ರಾಪಂ ಸದಸ್ಯರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೂ ಭಾಗವಹಿಸಿದ್ದರು.