ಜಲಮಂಡಳಿಯ ಕಾವೇರಿ ನೀರಿನ ಸಂಪರ್ಕ ಪಡೆದವರ ಮನೆಗೆ ನೀರು ಬರದಿರುವ ಸಂದರ್ಭದಲ್ಲೂ ಬರೀ ಗಾಳಿಗೆ ಮೀಟರ್ ತಿರುಗುತ್ತಿದೆ. ಈ ಕುರಿತು ಶ್ರೀನಗರ ನಿವಾಸಿಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

-ಶ್ರೀನಗರ ನಿವಾಸಿಯಿಂದ ಇನ್ಸ್ಟಾದಲ್ಲಿ ವಿಡಿಯೋ ಪೋಸ್ಟ್‌ ಕನ್ನಡಪ್ರಭ ವಾರ್ತೆ ಬೆಂಗಳೂರು

ಜಲಮಂಡಳಿಯ ಕಾವೇರಿ ನೀರಿನ ಸಂಪರ್ಕ ಪಡೆದವರ ಮನೆಗೆ ನೀರು ಬರದಿರುವ ಸಂದರ್ಭದಲ್ಲೂ ಬರೀ ಗಾಳಿಗೆ ಮೀಟರ್ ತಿರುಗುತ್ತಿದೆ. ಈ ಕುರಿತು ಶ್ರೀನಗರ ನಿವಾಸಿಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಜಲಗೇರಮ್ಮ ದೇವಸ್ಥಾನದ 2ನೇ ಕ್ರಾಸ್‌ ರಸ್ತೆಯ ಮನೆಯೊಂದಕ್ಕೆ ಕಾವೇರಿ ನೀರಿನ ಸಂಪರ್ಕವಿದ್ದು, ಕೋನಾರ್ಕ್ ಎಂಬ ಬ್ರ್ಯಾಂಡ್‌ಗೆ ಸೇರಿದ ಮೀಟರ್ ಅಳವಡಿಸಲಾಗಿದೆ. ಪೈಪ್‌ನಿಂದ ನೀರು ಬಾರದಿದ್ದರೂ ಮೀಟರ್ ಮಾತ್ರ ತಿರುಗುತ್ತಿದೆ. ಈ ಸಮಸ್ಯೆ ಬರೀ ಈ ಒಂದೆ ಮನೆಯದ್ದಲ್ಲ. ಶ್ರೀನಗರ, ಮುನೇಶ್ವರ ಬ್ಲಾಕ್ ಭಾಗದ ಅನೇಕ ಮನೆಗಳಲ್ಲಿ ಸಮಸ್ಯೆ ಆಗುತ್ತಿದೆ ಎಂದು ವಿಡಿಯೋ ಮಾಡಿದವರು ದೂರಿದ್ದಾರೆ.

ಕೆಲವು ತಿಂಗಳ ಹಿಂದೆ ಹೊಸದಾಗಿ ಪೈಪ್‌ಲೈನ್ ಅಳವಡಿಸಿ ಮನೆಗಳಿಗೆ ಹೊಸ ಮೀಟರ್ ಅಳವಡಿಸಲಾಗಿದೆ. ಹೊಸ ಮೀಟರ್ ಅಳವಡಿಸಿದ ನಂತರ ಈ ಸಮಸ್ಯೆ ಉಂಟಾಗುತ್ತಿದೆ. ಈ ಹಿಂದೆ ಹಳೇ ಮೀಟರ್ ಸರಿಯಾಗಿಯೇ ಇತ್ತು. ಚೆನ್ನಾಗಿರುವುದನ್ನು ಏಕೆ ಬದಲಾವಣೆ ಮಾಡುತ್ತಿರಿ? ಎಂದು ಜಲಮಂಡಳಿಯವರನ್ನು ಪ್ರಶ್ನಿಸಿದಾಗ, ಹಳೇ ಮೀಟರ್ ಅನ್ನು ನಿಯಮಾನುಸಾರ ಬದಲಾವಣೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ ಎಂದು ಮನೆ ಮಾಲೀಕ ಹೇಳಿದ್ದಾರೆ.

ಇನ್ನು ಹಳೇ ಮೀಟರ್ ಇದ್ದಾಗ ಮಾಸಿಕ 250 ರು.ನಿಂದ 300 ರು.ಬಿಲ್ ಬರುತ್ತಿತ್ತು. ಆದರೆ, ಹೊಸ ಮೀಟರ್ ಹಾಕಿದ ನಂತರ 800 ರು.ಬರುತ್ತಿದೆ. ಆಶ್ಚರ್ಯವಾಗಿ ಮೀಟರ್ ಪರಿಶೀಲಿಸಿದಾಗ ಗಾಳಿಗೆ ಮೀಟರ್ ಓಡುತ್ತಿರುವುದು ಕಂಡು ಬಂದಿದೆ. ಸಮಸ್ಯೆಯನ್ನು ಸಂಬಂಧಿಸಿದ ಅಧಿಕಾರಿಗಳು ಪರಿಹರಿಸಿಕೊಡಬೇಕು ಎಂದು ಮನೆ ಮಾಲೀಕ ಮನವಿ ಮಾಡಿದ್ದಾರೆ.