ಸಾರಾಂಶ
ಕೊಳ್ಳೇಗಾಲದ 23ನೇ ವಾರ್ಡ್‌ನಲ್ಲಿ ಬಂದ ಹುಳು ಮಿಶ್ರಿತ ನೀರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದ ನೂರ್ ಮೊಹಲ್ಲಾದ 23ನೇ ವಾರ್ಡ್‌ನ ಹಲವು ಮನೆಗಳಲ್ಲಿ ಶುಕ್ರವಾರ ಮಧ್ಯಾಹ್ನ ನಲ್ಲಿಗಳಲ್ಲಿ ಕುಡಿಯುವ ನೀರಿನ ಜೊತೆ ಹುಳುಮಿಶ್ರಿತ ನೀರು ಪೂರೈಕೆಯಾದ ಹಿನ್ನೆಲೆಯಲ್ಲಿ ನಗರಸಭಾಧಿಕಾರಿಗಳ ಕಾರ್ಯವೈಖರಿಗೆ ನಾಗರಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.ನೂರ್ ಮೊಹಲ್ಲಾದ 23ನೇ ವಾರ್ಡ್‌ನ 5ನೇ ಕ್ರಾಸ್‌ನಲ್ಲಿರುವ ನಯುದ್ ಪಾಶ, ನವೀದ್ ಸೇರಿದಂತೆ ಐದಾರು ಮಂದಿ ಮನೆಯಲ್ಲಿ ಹುಳು ಮಿಶ್ರಿತ ನೀರು ಪೂರೈಕೆಯಾಗಿದೆ. ಇದನ್ನು ಕಂಡ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಈಗಾಗಲೇ ಕಳೆದ ವಾರವಷ್ಟೇ ಇದೇ ವಾರ್ಡ್‌ನಲ್ಲಿ ಕಲುಷಿತ ನೀರು ಪೂರೈಕೆಯಾಗಿತ್ತು. ಹಲವು ಮಂದಿ ವಾಂತಿ ಭೇದಿಯಿಂದ ಅಸ್ಪಸ್ಥರಾಗಿದ್ದರು. ವಿಚಾರ ತಿಳಿದು ಶಾಸಕ ಕೃಷ್ಣಮೂರ್ತಿ ಭೇಟಿ ನೀಡಿ ಮುಂದೆ ಈ ರೀತಿ ಘಟನೆಯಾದರೆ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದಾಗಿ ಎಚ್ಚರಿಸಿದ್ದರೂ ಸಹಾ ಪುನಃ ನಲ್ಲಿಗಳಲ್ಲಿ ಹುಳುಗಳ ಪೂರೈಕೆಯಾಗಿದೆ.
ಬಿಂದಿಗೆ ಹಾಗೂ ಬಕೆಟ್‌ಗಳಲ್ಲಿ ಹುಳು ಮಿಶ್ರಿತ ನೀರು ನೋಡುತ್ತಿದ್ದಂತೆ ಕಲೆವರು ನೀರು ಚಲ್ಲಿದ್ದಾರೆ, ಇನ್ನು ಕೆಲವರು ಬಾಟಲ್‌ನಲ್ಲಿ ಹಾಕಿಕೊಂಡು ನಗರಸಭೆ ಸದಸ್ಯೆ ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ಏತನ್ಮದ್ಯೆ ಕಲುಷತಿ ನೀರು ಪೂರೈಕೆಗೆ ನಗರಸಭಾ ಸದಸ್ಯೆ ಜಯಮೇರಿ ಆಕ್ರೋಶ ಹೊರಹಾಕಿದ್ದು ಮುಂದೆ ಇದೇ ರೀತಿ ನಡೆದರೆ ಏಕಾಂಗಿ ಪ್ರತಿಭಟನೆಯನ್ನು ಜಿಲ್ಲಾಧಿಕಾರಿ ಮತ್ತು ನಗರಸಭೆ ಮುಂದೆ ಮಾಡಬೇಕಾಗುತ್ತದೆ. ಜನರು ಕುಡಿಯುವ ನೀರಿನ ವಿಚಾರದಲ್ಲಿ ನಗರಸಭೆ ಚಲ್ಲಾಟವಾಡಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ.