ಕಾಲುವೆ ಕೊನೆ ಭಾಗಕ್ಕೆ ಬಾರದ ನೀರು: ರೈತರ ಪ್ರತಿಭಟನೆ
KannadaprabhaNewsNetwork | Published : Oct 31 2023, 01:15 AM IST
ಕಾಲುವೆ ಕೊನೆ ಭಾಗಕ್ಕೆ ಬಾರದ ನೀರು: ರೈತರ ಪ್ರತಿಭಟನೆ
ಸಾರಾಂಶ
ಲ್ಯಾಟ್ರಲ್ ಗೇಟ್ ದುರಸ್ತಿ: ಇಲ್ಲದೆ ನೀರು ಪೋಲು ವಡಗೇರಾ ಕಾಲುವೆ ಕೊನೆ ಭಾಗದ ರೈತರಿಂದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಶಹಾಪುರ ಕಾಲುವೆ ನೀರು ಮುಂದೆ ಸಾಗದಂತೆ ಲ್ಯಾಟ್ರಲ್ ಗೇಟ್‌ಗಳನ್ನೇ ದ್ವಂಸ ಮಾಡಿ ಕೊನೆ ಭಾಗದ ರೈತರ ಜಮೀನುಗಳಿಗೆ ನೀರುಣಿಸದಂತೆ ಕಿಡಗೇಡಿಗಳಿಂದ ಕೃತ್ಯ ನಡೆದರೂ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಅಧಿಕಾರಿಗಳು ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿ, ತಕ್ಷಣ ದುರಸ್ತಿಗೆ ಕ್ರಮ ಕೈಕೊಳ್ಳಬೇಕೆಂದು ಕೆಬಿಜೆಎನ್‌ಎಲ್ ಕಚೇರಿ ಮುಂದೆ ಕಾಲುವೆ ಕೊನೆಯ ಭಾಗದ ರೈತರು ಪ್ರತಿಭಟನೆ ನಡೆಸಿದರು. ವಡಗೇರಾ ತಾಲೂಕಿನ ಮುನಮುಟಗಿ, ಬಸವಂತಪೂರ ಡಿ-9 ಕಾಲುವೆಯ ವ್ಯಾಪ್ತಿಯಲ್ಲಿ ಬರುವ ಲ್ಯಾಟ್ರಲ್ ಸಂ. 23/24/ ಮತ್ತು ಡಿಸ್ಟಿಬ್ಯೂಟರ್. ಡಿ-17 ರ ಲ್ಯಾಟ್ರಲ್, ಡಿ-16 ರ ಹಯ್ಯಾಳ ಕೆ., ಮುನಮುಟಗಿ, ಬಸವಂತಪೂರ ಗ್ರಾಮಗಳ ರೈತರು ಸಾವಿರಾರು ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಮಾಡಿದ್ದು, ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ಸರ್ಕಾರ ವಾರಾಬಂದಿ ನಿರ್ಬಂಧಿಸಿ, 28 ದಿನಗಳ ಕಾಲ ನಿತ್ಯ ನಿರಂತರ ನೀರು ಪೂರೈಕೆ ಮಾಡುತ್ತಿದ್ದರೂ ಲ್ಯಾಟ್ರಲ್ ದುರಸ್ತಿ ಇಲ್ಲದ ಕಾರಣ ಕಾಲುವೆಗಳ ಕೊನೆಯ ಭಾಗದ ರೈತರು ನೀರು ಕಾಣದಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಶೀಘ್ರ ಲ್ಯಾಟ್ರಲ್ ಕಾಲುವೆ ದುರಸ್ತಿ ಕಾಮಗಾರಿ ಕೈಗೊಂಡು ಕಾಲುವೆ ಕೊನೆಯ ಭಾಗದ ರೈತರ ಜಮೀನುಗಳಿಗೂ ನೀರು ಬಿಡಬೇಕು. ಅಧಿಕಾರಿಗಳು ಕಾಟಾಚಾರದ ಕರ್ತವ್ಯದಲ್ಲಿ ನಿರತರಾದಲ್ಲಿ ನಮ್ಮ ಹೊಲಗಳ ಬೆಳೆಗಳ ನಾಶಕ್ಕೆ ನಿಗಮದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ರೈತ ಮುಖಂಡರಾದ ಮಲ್ಲಣ್ಣ ಗುಡಿ, ಶರಣರಡ್ಡಿ ಹತ್ತಿಗೂಡೂರ, ದೇವಪ್ಪ ಮಡಿವಾಳ, ನಿಂಗಪ್ಪ ಸಾವೂರ, ರಡ್ಡೆಪ್ಪಗೌಡ ಸೋಮಶೇಖರ, ಮಾರ್ಥಂಡಪ್ಪ, ಮಲ್ಲಪ್ಪ ಜೇರಬಂಡಿ, ಹಣಮಂತ ಪೂಜಾರಿ, ರಾಜಪ್ಪ, ಮಾನಪ್ಪ ಹುರಸಗುಂಡಗಿ, ಭೀಮಶೇಪ್ಪ ಪ್ಯಾಟಿ, ಶಿವನಗೌಡ ಜೋಳದಡಗಿ, ಬಸ್ಸಪ್ಪ ಬೆಣಕಲ್, ಸೂಗರಯ್ಯಸ್ವಾಮೀಜಿ ಇತರರಿದ್ದರು. --- 30ವೈಡಿಆರ್11: ಕಾಲುವೆ ನೀರು ಮುಂದೆ ಸಾಗದಂತೆ ಲ್ಯಾಟ್ರಲ್ ಗೇಟ್ ದುರಸ್ತಿ ಮಾಡುವಂತೆ ಆಗ್ರಹಿಸಿ ಶಹಾಪುರ ಸಮೀಪದ ಭೀಮರಾಯನ ಗುಡಿಯ ಕೆಬಿಜೆಎನ್‌ಎಲ್ ಕಚೇರಿ ಮುಂದೆ ಕಾಲುವೆ ಕೊನೆಯ ಭಾಗದ ರೈತರು ಪ್ರತಿಭಟನೆ ನಡೆಸಿದರು.