ಬೇಸಿಗೆ ಆರಂಭದಲ್ಲಿಯೇ ನೀರಿನ ಸಮಸ್ಯೆ

| Published : Mar 11 2024, 01:15 AM IST

ಸಾರಾಂಶ

ಬೇಸಿಗೆ ಆರಂಭದಲ್ಲಿಯೇ ತಾಲೂಕಿನ ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ.

ಗ್ರಾಮೀಣ ಭಾಗದ ಕೆಲವು ಕಡೆಗಳಲ್ಲಿ ಸಮಸ್ಯೆ । ಅಂತರ್ಜಲ ಪ್ರಮಾಣ ಕುಸಿತ, ಆಳಕ್ಕೆ ಇಳಿದ ಬೋರ್‌ವೆಲ್ ನೀರುಬಸವರಾಜ ಸರೂರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಬೇಸಿಗೆ ಆರಂಭದಲ್ಲಿಯೇ ತಾಲೂಕಿನ ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಬೇಸಿಗೆಯಾದ ಕಾರಣ ನೀರು ಬಳಕೆ ಹೆಚ್ಚಾಗುತ್ತಿದೆ. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಬೋರ್‌ವೆಲ್‌ನಲ್ಲಿ ಅಂತರ್ಜಲ ಪ್ರಮಾಣ ಇಳಿಕೆಯಾಗಿ ಕುಡಿಯುವ ನೀರಿನ ಅಭಾವ ಎದುರಾಗಿದೆ.

ಇನ್ನೂ ತುಂಗಭದ್ರಾ ನದಿಯಿಂದ ರಾಣಿಬೆನ್ನೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದ್ದು, ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದ್ದು, ನಗರದ ಜನರಿಗೂ ಇನ್ನಷ್ಟು ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಸಿ ತಟ್ಟಲಿದೆ.

78 ಹಳ್ಳಿಗಳಿಗೆ ಬಹುಗ್ರಾಮ ನೀರು:

ತಾಲೂಕಿನಲ್ಲಿ 108 ಹಳ್ಳಿಗಳಿದ್ದು, ಅದರಲ್ಲಿ 80 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನು ಎಲ್ಲ ಹಳ್ಳಿಗಳಿಗೂ ಮನೆ ಮನೆಗೆ ಗಂಗೆ ಯೋಜನೆ ನೀಡಲಾಗಿದ್ದು, ಈಗಾಗಲೇ 80 ಹಳ್ಳಿಗಳಿಗೆ ಮನೆ ಮನೆಗೆ ಗಂಗೆ ಯೋಜನೆಯಲ್ಲಿ ವಾರಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ.

5 ಹಳ್ಳಿಗಳಲ್ಲಿ ಸಮಸ್ಯೆ:

ತಾಲೂಕಿನ ಜೋಯಿಸರಳಹಳ್ಳಿ ಗ್ರಾಮದಲ್ಲಿ ಸುಮಾರು 5 ಸಾವಿರ ಜನಸಂಖ್ಯೆಯಿದ್ದು, ನೀರು ಪೂರೈಕೆ ಮಾಡಲು ಸುಮಾರು 7 ಬೋರ್‌ವೆಲ್‌ಗಳಿವೆ. ಆದರೆ ಎಲ್ಲ ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದ್ದು, 350 ಅಡಿಯಿಂದ 400 ಅಡಿ ಬೋರ್‌ವೆಲ್ ಇಳಿಸಬೇಕಾಗಿದೆ. ನೀರಿಗಾಗಿ ಜನರು ಸಮಸ್ಯೆ ಎದುರಿಸಬೇಕಾಗಿದೆ. ಇದರ ನಿವಾರಣೆಗಾಗಿ ಈಗಾಗಲೇ ಗ್ರಾಪಂ ವತಿಯಿಂದ ಡಿಸೆಂಬರ್ ತಿಂಗಳಿನಲ್ಲಿಯೇ ಎರಡು ಬೋರ್‌ವೆಲ್ ಕೊರೆಯಿಸಲಾಗಿದೆ. ಆದರೂ ಸಮಸ್ಯೆ ಉಂಟಾಗಿರುವುದರಿಂದ ನಾಲ್ಕು ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಿ ಅವುಗಳ ಮೂಲಕ ಗ್ರಾಮದ ಜನರಿಗೆ ನೀರು ಪೂರೈಸಲು ಕರಾರು ಒಪ್ಪಂದ ಪ್ರಕ್ರಿಯೆ ನಡೆದಿದೆ. ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ಸಮಸ್ಯೆ ಎದುರಿಸಬಹುದಾದ ಹನುಮಾಪುರ, ಕೂಲಿ, ದಂಡಗಿಹಳ್ಳಿ, ಬಿಲ್ಲಳ್ಳಿ ಒಟ್ಟು 4 ಹಳ್ಳಿಗಳನ್ನು ಗುರುತಿಸಿಕೊಂಡಿದ್ದು, ಅಲ್ಲಿಯೂ ಸಮಸ್ಯೆಯಾಗದಂತೆ ನೋಡಿಕೊಳ್ಳಲು ತಾಲೂಕು ಆಡಳಿತ ಸಜ್ಜಾಗಿದೆ. ಆದರೆ ಇಂದಿನವರೆಗೂ ತಾಲೂಕಿನಲ್ಲಿ ಎಲ್ಲಿಯೂ ಟ್ಯಾಂಕರ್ ಮೂಲಕ ನೀರು ಪೂರೈಸಬೇಕಾದ ಅನಿವಾರ್ಯತೆ ಉಂಟಾಗಿಲ್ಲ.

ನಗರದ ಪರಿಸ್ಥಿತಿ:

ಜಿಲ್ಲೆಯಲ್ಲಿ ಅತಿದೊಡ್ಡ ನಗರವಾದ ರಾಣಿಬೆನ್ನೂರಿನಲ್ಲಿ 1.30 ಲಕ್ಷಕ್ಕೂ ಜನಸಂಖ್ಯೆಯಿದ್ದು, ದಿನವೊಂದಕ್ಕೆ ಪ್ರತಿಯೊಬ್ಬರಿಗೆ 122 ಲೀಟರ್‌ನಂತೆ ಒಟ್ಟು 10 ಎಂಎಲ್‌ಡಿ ಕುಡಿಯುವ ನೀರು ಅಗತ್ಯವಾಗಿದೆ. ಈಗಾಗಲೇ ನಿರಂತರ ಕುಡಿಯುವ ನೀರು ಯೋಜನೆಯಲ್ಲಿ ಬಹುತೇಕ ವಾರ್ಡ್‌ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಅದಕ್ಕಾಗಿಯೇ ತಾಲೂಕಿನ ಮುದೇನೂರು ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ಜಾಕ್‌ವೆಲ್ ಮೂಲಕ ನೀರನ್ನು ತರುವ ಮೂಲಕ ಶುದ್ಧೀಕರಿಸಿ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಇತ್ತೀಚಿಗೆ ಮೈಲಾರ ಜಾತ್ರೆ ಸಲುವಾಗಿ ತುಂಗಭದ್ರಾ ನದಿಗೆ ನೀರು ಹರಿಸಿರುವುದು ಸ್ವಲ್ಪ ನೆಮ್ಮದಿಗೆ ಕಾರಣವಾಗಿದೆ.

ಬೋರ್‌ವೆಲ್‌ಗಳ ವ್ಯವಸ್ಥೆ:

ರಾಣಿಬೆನ್ನೂರಿನ ಒಟ್ಟು 35 ವಾರ್ಡ್‌ಗಳಲ್ಲಿ ಒಟ್ಟು 462 ಕೊಳವೆ ಬಾವಿಗಳಿದ್ದು, ಅದರಲ್ಲಿ 410 ಕೊಳವೆ ಬಾವಿಗಳ ಮೂಲಕ ನೀರು ನೀಡಲಾಗುತ್ತಿದೆ. ದನಕರುಗಳಿಗೆ ಹಾಗೂ ಹಳೆಯ ನಗರದಲ್ಲಿ ಬಟ್ಟೆ ತೊಳೆಯಲು ಬಳಕೆ ಮಾಡಲಾಗುತ್ತಿದೆ. ನದಿಯ ನೀರು ಬರದೇ ಹೋದರೆ ಬೋರ್‌ವೆಲ್‌ಗಳ ನೀರು ಜನರಿಗೆ ಆಸರೆಯಾಗಿದೆ.