ಸಾರಾಂಶ
ಹುಕ್ಕೇರಿಯಲ್ಲಿ ಎಸ್ಸಿಎಸ್ಟಿ ಜನರಿಗೆ ವಿಚಾರಗೋಷ್ಠಿಯಲ್ಲಿ ಪೊಲೀಸರಿಗೆ ದಲಿತ ಮುಖಂಡರ ಆಗ್ರಹ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನರ ದೌರ್ಜನ್ಯ ಪ್ರಕರಣಗಳಲ್ಲಿ ಪೊಲೀಸರು ನಿಷ್ಪಕ್ಷಪಾತವಾಗಿ ವರ್ತಿಸಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದರು.ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಎಸ್ಸಿಎಸ್ಟಿ ಜನರಿಗೆ ವಿಚಾರಗೋಷ್ಠಿ ಮತ್ತು ಕಾರ್ಯಾಗಾರದಲ್ಲಿ ಮಾತನಾಡಿದ ಬಹುತೇಕ ದಲಿತ ಮುಖಂಡರು, ದೌರ್ಜನ್ಯ ಪ್ರಕರಣಗಳಲ್ಲಿ ಪೊಲೀಸರು ಸವರ್ಣಿಯರ ಪರ ಒಲವು ತೋರುತ್ತಿದ್ದಾರೆ ಎಂದು ದೂರಿದರು.
ಎಸ್ಸಿಎಸ್ಟಿ ಜನರ ಮೇಲಿನ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರ, ಅಸ್ಪೃಶ್ಯತೆ, ಜಾತಿನಿಂದನೆ ಸೇರಿದಂತೆ ಮತ್ತಿತರ ಪ್ರಕರಣಗಳ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ನ್ಯಾಯ ಕೇಳಿ ಠಾಣೆಗೆ ಹೋದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಸಮಸ್ಯೆಗಳಿಗೆ ಪೊಲೀಸರು ಸರಿಯಾಗಿ ಸ್ಪಂದಿಸಬೇಕು. ಯಾವುದೇ ಪ್ರಭಾವಿಗಳು ಮತ್ತು ರಾಜಕಾರಣಿಗಳ ಒತ್ತಡಕ್ಕೆ ಒಳಗಾಗದೇ ನಿಷ್ಠುರವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಆಗ್ರಹಿಸಿದರು.ಪಟ್ಟಣ, ನಗರ ಸೇರಿದಂತೆ ಹಳ್ಳಿಗಳಲ್ಲಿ ಕಾನೂನಿನ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ದಾಖಲಾಗುವ ದೂರು-ಪ್ರತಿದೂರುಗಳನ್ನು ಕೂಲಂಕುಷವಾಗಿ ವಿಚಾರಣೆ ನಡೆಸಬೇಕು. ಅನ್ಯಾಯಕ್ಕೊಳಗಾದ ಸಂತ್ರಸ್ತರಿಗೆ ಕಾನೂನಿನಡಿ ಅಗತ್ಯ ನೆರವು ನೀಡಿ ರಕ್ಷಿಸಬೇಕು. ಸಮಾಜ ಕಲ್ಯಾಣ ಸೇರಿದಂತೆ ಇತರೆ ಇಲಾಖೆಗಳ ಸಮನ್ವಯದೊಂದಿಗೆ ದಲಿತರಲ್ಲಿ ಆತ್ಮಸ್ಥೈರ್ಯ ಮೂಡಿಸಬೇಕು ಎಂದು ದಲಿತ ಮುಖಂಡರು ಮನವಿ ಮಾಡಿದರು.
ಸಿಪಿಐ ಜಯಂತ ಗೌಳಿ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎ.ಮಾಹುತ, ಪಿಎಸ್‌ಐ ಐ.ಎಂ.ದುಂಡಸಿ, ಮುಖಂಡರಾದ ಬಸವರಾಜ ತಳವಾರ, ರಾಜೇಂದ್ರ ಮೋಶಿ, ತುಕಾರಾಮ ಕಾಂಬಳೆ, ರಮೇಶ ತಳವಾರ, ಸುನೀಲ ಖಾತೇದಾರ, ಸತೀಶ ದಿನ್ನಿಮನಿ, ಶಶಿಕಾಂತ ಹೊನ್ನೊಳ್ಳಿ, ಶಂಕರ ಕಟ್ಟಿಮನಿ, ಕಾಡಪ್ಪಾ ಮರಿನಾಯಿಕ ಮತ್ತಿತರರು ಉಪಸ್ಥಿತರಿದ್ದರು.ನಿಲಯಪಾಲಕಿ ನಾಗವೇಣಿ ಹೊಳೆಯಾಚೆ ಸ್ವಾಗತಿಸಿ, ನಿರೂಪಿಸಿದರು. ಮಹಾನಂದಾ ಕೊಟಬಾಗಿ ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))