ಸಾರಾಂಶ
ಕುಕನೂರು: ತಾಲೂಕು ಕೇಂದ್ರ, ಪಟ್ಟಣ ಪಂಚಾಯಿತಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುತ್ತಿದೆ. ಬೇಸಿಗೆ ಆರಂಭದ ದಿನಗಳಲ್ಲೇ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗಿದ್ದು, ಮುಂದಿನ ಮೂರ್ನಾಲ್ಕು ತಿಂಗಳು ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ.
ಮಾರ್ಚ್ ತಿಂಗಳು ಬಂದರೆ ಇನ್ನು ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಬಿಸಿಲಿನ ತಾಪಮಾನ ದಿನದಿನಕ್ಕೆ ಹೆಚ್ಚುತ್ತಿದೆ. ೩೫ ಡಿಗ್ರಿಗಿಂತ ಹೆಚ್ಚು ತಾಪಮಾನ ದಾಖಲಾಗುತ್ತಿದೆ. ಕೆರೆ, ಬಾವಿ ಮತ್ತು ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿವೆ.ಯೋಜನೆಗಳು ಶೀಘ್ರ ಸಾಕಾರವಾಗಲಿ: ಕುಷ್ಟಗಿ, ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ಗ್ರಾಮಸ್ಥರಿಗೆ ಅನುಕೂಲವಾಗಲಿ ಅನ್ನುವ ಉದ್ದೇಶದಿಂದ ೨೦೧೬-೧೭ನೇ ಸಾಲಿನಲ್ಲಿ ಬಸವರಾಜ ರಾಯರೆಡ್ಡಿ ಸಚಿವರಿದ್ದಾಗ ₹763 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ಯೋಜನೆಗೆ ಅನುದಾನ ಒದಗಿಸಿದ್ದರು. ೨೦೧೮ರಿಂದ ಕುಡಿಯುವ ನೀರಿಗಾಗಿ ಮಾಜಿ ಸಚಿವ ಹಾಲಪ್ಪ ಆಚಾರ್ ಕುಡಿಯುವ ನೀರು, ಅಂತರ್ಜಲ ವೃದ್ಧಿಗಾಗಿ ಕೆರೆಗಳ ಜೀರ್ಣೋದ್ಧಾರ, ಚೆಕ್ ಡ್ಯಾಂಗಳನ್ನು ನಿರ್ಮಿಸಿದರು. ಜತೆಗೆ ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆ ಜಾರಿಯಾದರೂ ಅಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುತ್ತಿದೆ. ಮತ್ತೆ ೨೦೨೪ರಲ್ಲಿ ಶಾಸಕ ರಾಯರೆಡ್ಡಿ ಅವರು ₹೯೭೦ ಕೋಟಿ ವೆಚ್ಚದಲ್ಲಿ ೩೮ ಕೆರೆಗಳನ್ನು ನಿರ್ಮಿಸಲು ಅನುದಾನ ನೀಡಿದ್ದಾರೆ. ಚೆಕ್ ಡ್ಯಾಮ್‌ಗಳ ನಿರ್ಮಾಣಕ್ಕೆ ಕೋಟ್ಯಂತರ ರು. ಅನುದಾನದಿಂದ ಒಂದೆರೆಡು ವರ್ಷಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಬಹುದು ಎನ್ನಲಾಗುತ್ತಿದೆ.
ಯರೇಭೂಮಿಯಲ್ಲಿ ಕೆರೆಯ ನೀರೇ ಆಸರೆ: ತಾಲೂಕಿನ ಯರೇಭಾಗದ ಗ್ರಾಮಗಳಲ್ಲಿ ಶತಮಾನಗಳಿಂದ ಕೆರೆಯ ನೀರನ್ನು ಕುಡಿಯುತ್ತಿದ್ದಾರೆ. ಅಲ್ಲಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದರೂ ನಿರ್ವಹಣೆ ಇಲ್ಲದೆ ಕೆಟ್ಟು ನಿಂತಿವೆ. ಯರೇಹಂಚಿನಾಳ, ಬನ್ನಿಕೊಪ್ಪ, ಚಿಕೇನಕೊಪ್ಪ, ಬಿನ್ನಾಳ, ಸಿದ್ನೇಕೊಪ್ಪ ಹಾಗೂ ಇತರ ಗ್ರಾಮಗಳಲ್ಲಿ ಕೆರೆಯ ನೀರೇ ಆಸರೆಯಾಗಿದೆ.ಸಮಸ್ಯಾತ್ಮಕ ಗ್ರಾಮಗಳು: ಕುಕನೂರು ತಾಲೂಕಿನಲ್ಲಿ ೧೫ ಗ್ರಾಪಂಗಳು ಇದ್ದು, ೫೬ ಗ್ರಾಮಗಳು ವ್ಯಾಪ್ತಿಗೆ ಬರುತ್ತವೆ. ಅದರಲ್ಲೆ ೫ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಯರೇಹಂಚಿನಾಳ ಗ್ರಾಮದಲ್ಲಿ ೩,೭೮೨ ಜನಸಂಖ್ಯೆ ಇದೆ, ಬಿನ್ನಾಳ ೨,೭೪೬, ಇಟಗಿ ೪,೮೨೦, ಮನ್ನಾಪುರ ೯೯೯, ಮನ್ನಾಪುರ ತಾಂಡಾ ೩೬೨ ಜನಸಂಖ್ಯೆಯಲ್ಲಿರುವಂತಹ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದು, ಅವುಗಳಲ್ಲಿ ಕೆಲವು ದುರಸ್ತಿಯಲ್ಲಿವೆ. ಮಂಗಳೂರು ಗ್ರಾಮದಲ್ಲಿ ೧೪ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು ಕುಡಿಯುವ ನೀರಿನ ಸಮಸ್ಯೆ ಇದೆ. ಗ್ರಾಮದ ಬಿ. ರಾಚಯ್ಯ ನಗರಕ್ಕೆ ಮತ್ತು ಸಿದ್ದಲಿಂಗ ನಗರಕ್ಕೆ ಎರಡು ಬೋರ್‌ವೆಲ್‌ಗಳ ಅವಶ್ಯಕತೆ ಇದೆ.
ಟಾಸ್ಕ್‌ಪೋರ್ಸ್ ಸಮಿತಿ ರಚನೆ: ತಾಲೂಕಾಡಳಿತದಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ₹೫೦ ಲಕ್ಷ ಬಿಡುಗಡೆಗೊಳಿಸಲಾಗಿದೆ. ತಾಲೂಕಿನ ೫ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿ ಇದೆ. ಕುಕನೂರು ಪಟ್ಟಣದಲ್ಲಿ ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿಲ್ಲ. ಖಾಸಗಿ ಮಾಲೀಕತ್ವದ ಘಟಕ ಇದೆ. ಹೊರಗಡೆ ನೀರಿನಲ್ಲಿ ಫ್ಲೋರೈಡ್ ಇರುವುದರಿಂದ ಶುದ್ಧ ನೀರಿಗಾಗಿ ಖಾಸಗಿ ಘಟಕ ಆಶ್ರಯಿಸಬೇಕಾಗಿದೆ. ಕಡಿಮೆಯಾಗುತ್ತಿದೆ ಅರಕೇರಿ ಡ್ಯಾಂ ನೀರು: ತಾಲೂಕಿನ ಅರಕೇರಿ ಡ್ಯಾಂನ ನೀರು ಸಹ ಕಡಿಮೆ ಆಗುತ್ತಿದ್ದು, ಮಂಗಳೂರು ಹೋಬಳಿಯ ಬಹುತೇಕ ಗ್ರಾಮಗಳಿಗೆ ಅರಕೇರಿ ಡ್ಯಾಂನಿಂದ ಕುಡಿಯಲು ನೀರು ಪೂರೈಕೆಯಾಗುತ್ತದೆ. ಸದ್ಯ ಬೇಸಿಗೆ ದಿನಗಳಲ್ಲಿ ನೀರಿನ ಅಭಾವ ತಪ್ಪಿದ್ದಲ್ಲ. ಕುಕನೂರು ತಾಲೂಕಿನಲ್ಲಿ ಕುಡಿಯುವ ನೀರು ಸಮಸ್ಯೆ ಎಲ್ಲೆಲ್ಲಿ ಇದೆ ಎಂದು ಗುರುತಿಸಲಾಗಿದೆ. ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ತಾಲೂಕಾಡಳಿತ ಮತ್ತು ತಾಪಂ ವತಿಯಿಂದ ನೀರಿನ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಕುಕನೂರು ತಹಸೀಲ್ದಾರ್ ಅಶೋಕ ಶಿಗ್ಗಾವಿ ಹೇಳಿದರು..ಕುಕನೂರು ತಾಲೂಕಿನ ಯರೇಹಂಚಿನಾಳ ಮತ್ತು ಇಟಗಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ನೀಲಯೋಗಿಪುರದಿಂದ ೧೪ ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತದೆ. ಇತ್ತೀಚೆಗೆ ಇಟಗಿಯಲ್ಲಿ ನೀರಿನ ಟ್ಯಾಂಕ್‌ನ್ನು ಬೀಳಿಸಲಾಯಿತು. ಡಿಬಿಒಟಿ ಮತ್ತು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಾಪಂ ಇಒ ಸಂತೋಷ ಪಾಟೀಲ್ ಬಿರಾದಾರ ಹೇಳಿದರು.