ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಧ್ಯಾಹ್ನ ಬಜೆಟ್ ಮಂಡನೆಗೆ ಪಕ್ಷಾತೀತ ವಿರೋಧವಾಗಿದ್ದ ಬೆನ್ನಲ್ಲೇ ಮಂಗಳವಾರ ದಾವಣಗೆರೆ ಮಹಾ ನಗರ ಪಾಲಿಕೆ 2024-25ನೇ ಸಾಲಿಗೆ 17.65 ಕೋಟಿ ರು.ಗಳ ಉಳಿತಾಯ ಬಜೆಟ್ ಮಂಡಿಸಿದೆ.ನಗರದ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಎಚ್.ಬಿ.ವಿನಾಯಕ ಪೈಲ್ವಾನ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ 2024-25ನೇ ಸಾಲಿನಲ್ಲಿ ಉಳಿತಾಯ ಬಜೆಟ್ ಮಂಡಿಸಿದರು. ಸ್ಕೈ ವಾಕ್, ಮೇಲ್ಸೇತುವೆಗಳು, ಸೋಲಾರ್ ದೀಪಗಳ ಅಳವಡಿಕೆ, ಬಾತಿ ಕೆರೆ, ಆವರಗೆರೆ ಕೆರೆಗಳ ಅಭಿವೃದ್ಧಿ, ನೂತನ ಯೋಜನೆಗಳು, ಅಭಿವೃದ್ಧಿ ಕಾರ್ಯಗಳು, ವೇತನ, ಮತ್ತಿತರೆ ಖರ್ಚುಗಳಿಗೆ ಅನುದಾನ ಮೀಸಲಿಟ್ಟು, ಪಾಲಿಕೆಯಿಂದ 17.65 ಕೋಟಿ ರು.ಗಳ ಉಳಿತಾಯ ಬಜೆಟ್ ಮಂಡಿಸಿದರೆ, ಆಡಳಿತ ಪಕ್ಷ ಬಜೆಟ್ ಸಮರ್ಥಿಸಿಕೊಂಡರೆ ವಿಪಕ್ಷ ಬಿಜೆಪಿ ಬಜೆಟ್‌ಗೆ ಖಾಲಿ ಡಬ್ಬದ ಬಜೆಟ್ ಅಂತಾ ಹೀಗಳೆಯಿತು.
ಆರಂಭಿಕ ಶಿಲ್ಕು 5402.69 ಲಕ್ಷ ರು., ಸ್ವೀಕೃತಿಗಳು-ರಾಜಸ್ವ ಸ್ವೀಕೃತಿ 15,567.40 ಲಕ್ಷ ರು., ಬಂಡವಾಳ ಸ್ವೀಕೃತಿಗಳು 18224.75 ಲಕ್ಷ ರು., ಅಸಾಮಾನ್ಯ ಸ್ವೀಕೃತಿಗಳು 18951.00 ಲಕ್ಷ ರು. ಸೇರಿ ಒಟ್ಟು 52743.15 ಲಕ್ಷ ರು. ಒಟ್ಟು ಸ್ವೀಕೃತಿಗಳು. ಪಾವತಿಗಳು-ರಾಜಸ್ವ ಪಾವತಿಗಳು ₹13993.60 ರಾಜಸ್ವ ಪಾವತಿಗಳು, ₹22834.50 ಬಂಡವಾಳ ಪಾವತಿಗಳು, 19552 ರು.ಅಸಾಮಾನ್ಯ ಪಾವತಿಗಳು ಒಟ್ಟು 56380.10 ಲಕ್ಷ ರು. ಪಾವತಿಗಳಾಗಿದ್ದು, 1765.74 ರು. ಉಳಿತಾಯ ಬಜೆಟ್‌ನ್ನು ಸ್ಥಾಯಿ ಸಮಿತಿ ಅಧ್ಯಕ್ಷರು ಮಂಡಿಸಿದರು.ಖಾಲಿ ಡಬ್ಬದ ಬಜೆಟ್: ವಿಪಕ್ಷ ವ್ಯಂಗ್ಯ:
ಬಜೆಟ್ ಬಗ್ಗೆ ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಮಾಜಿ ಮೇಯರ್ ಗಳಾದ ಡಿ.ಎಸ್.ಉಮಾ ಪ್ರಕಾಶ, ಎಸ್.ಟಿ.ವೀರೇಶ, ಸದಸ್ಯರಾದ ಆರ್.ಶಿವಾನಂದ, ಕೆ.ಎಂ.ವೀರೇಶ ಇತರರು, ಬಜೆಟ್‌ನಲ್ಲಿ ಯಾವುದೇ ಹೊಸ ಯೋಜನೆ, ಕಾರ್ಯಕ್ರಮಗಳಿಲ್ಲ. ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಸಮರ್ಪಕ ಅನುದಾನ ಹಂಚಿಕೆ ಮಾಡಿಲ್ಲ. ಕೇವಲ ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳಿಗೆ ಕೋಟಿಗಟ್ಟಲೇ ಅನುದಾನ ಬಿಡುಗಡೆ ಮಾಡಲಾಗಿದೆ. ಇದೊಂದು ಜನ ವಿರೋಧಿಯಾದ ಖಾಲಿ ಡಬ್ಬದ ಬಜೆಟ್ ಎಂದು ಡಬ್ಬಗಳ ಪ್ರದರ್ಶಿಸಿ ವ್ಯಂಗ್ಯವಾಡಿದರು.ಪಾಲಿಕೆ ಖಜಾನೆಯಲ್ಲಿ ಹಣ ಇದೆ: ಆಡಳಿತ ಪಕ್ಷ
ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರಾದ ಎ.ನಾಗರಾಜ, ಕೆ.ಚಮನ್ ಸಾಬ್, ಜಿ.ಎಸ್.ಮಂಜುನಾಥ ಗಡಿಗುಡಾಳ್, ಪಾಮೇನಹಳ್ಳಿ ನಾಗರಾಜ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಲತೀಫ್, ಉದಯಕುಮಾರ ಇತರರು, ಪಾಲಿಕೆ ಬಜೆಟ್ ಹಲವಾರು ನೂತನ ಕಾರ್ಯಕ್ರಮ, ಜನೋಪಯೋಗಿ ಕಾರ್ಯಕ್ರಮಗಳ ಘೋಷಿಸಿದ ಬಜೆಟ್ ಆಗಿದೆ. ಪಾಲಿಕೆ ಖರ್ಚು, ವೆಚ್ಚ ಸಮರ್ಥವಾಗಿ ಸರಿದೂಗಿಸುವ ಯೋಜನೆಗಳಿವೆ ಎಂದು ವಿಪಕ್ಷಕ್ಕೆ ತಿರುಗೇಟು ನೀಡಿದರು. ಅಷ್ಟೇ ಅಲ್ಲ, ಪಾಮೇನಹಳ್ಳಿ ನಾಗರಾಜ ಹಣ ಇರುವ ಡಬ್ಬ ಪ್ರದರ್ಶಿಸಿ, ಪಾಲಿಕೆ ಖಜಾನೆಯಲ್ಲಿ ಹಣ ಇದೆಯೆಂದು ವಿಪಕ್ಷದ ಟೀಕೆಗೆ ತಿರುಗೇಟು ನೀಡಿದರು.ಪಾಲಿಕೆ ಆಡಳಿತ-ವಿಪಕ್ಷ ಸದಸ್ಯರ ಪರ-ವಿರೋಧದ ಮಧ್ಯೆಯೂ ಬಹುಮತದ ಮೂಲಕ ಬಜೆಟ್‌ನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಬಿಜೆಪಿ ಸದಸ್ಯ ಎಸ್.ಟಿ.ವೀರೇಶ ಮಾತನಾಡಿ, ಸಭೆಯ ಆರಂಭದಲ್ಲಿ ಹಿಂದಿನ ಬಜೆಟ್ ನಲ್ಲಿ ಆದ ಕೆಲಸಗಳ ಬಗ್ಗೆಯೂ ಚರ್ಚೆಯಾಗಬೇಕು ಎಂದಾಗ ಸದಸ್ಯರೂ ಧ್ವನಿಗೂಡಿಸಿದರು. ಆಗ ಕಾಂಗ್ರೆಸ್‌ನ ಚಮನ್ ಸಾಬ್, ಎ.ನಾಗರಾಜ, ಮೊದಲು ಬಜೆಟ್ ಮಂಡನೆಯಾಗಲಿ. ಆ ನಂತರ ಇಡೀ ದಿನ ಚರ್ಚೆ ಮಾಡೋಣ. ಅಗತ್ಯ ಬಿದ್ದರೆ ಈ ಚರ್ಚೆಯ ಬಗ್ಗೆ ನಾಳೆ (ಬುಧವಾರ) ವಿಶೇಷ ಸಭೆ ಮಾಡಿ, ಚರ್ಚಿಸೋಣ ಎಂದರು. ಕಡೆಗೂ ಮೇಯರ್ ಚರ್ಚೆಗೆ ಅವಕಾಶ ನೀಡುವ ಭರವಸೆ ನಂತರವಷ್ಟೇ ಬಿಜೆಪಿ ಸದಸ್ಯರು ಬಜೆಟ್ ಮಂಡನೆಗೆ ಅನುವು ಮಾಡಿಕೊಟ್ಟರು.
ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್, ಉಪ ಮೇಯರ್ ಯಶೋಧಾ ಯೋಗೇಶ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಲತೀಫ್, ಉದಯಕುಮಾರ, ಆಡಳಿತ-ವಿಪಕ್ಷ ಸದಸ್ಯರು, ಪಾಲಿಕೆ ಅಧಿಕಾರಿ, ಸಿಬ್ಬಂದಿ ಇದ್ದರು.