ಸಿದ್ದಾಪುರ ಸಮೀಪದ ಇಂಜಿಲಗೆರೆಯ ಪುಲಿಯೇರಿ ಗ್ರಾಮದಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಸಂಬಂಧಿಸಿದಂತೆ ಸರ್ಕಾರದ ಹಣ ದುರುಪಯೋಗವಾಗಿರುವ ಆರೋಪ ಕೇಳಿಬಂದಿದ್ದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿದ್ದಾಪುರ: ಸಿದ್ದಾಪುರ ಸಮೀಪದ ಇಂಜಿಲಗೆರೆಯ ಪುಲಿಯೇರಿ ಗ್ರಾಮದಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಸಂಬಂಧಿಸಿದಂತೆ ಸರ್ಕಾರದ ಹಣ ದುರುಪಯೋಗವಾಗಿರುವ ಆರೋಪ ಕೇಳಿಬಂದಿದ್ದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಹಿಂದೆ ಸುಮಾರು ರು. 3 ಲಕ್ಷ ವೆಚ್ಚದಲ್ಲಿ ಬೋರ್‌ವೆಲ್ ನಿರ್ಮಿಸಲಾಗಿದ್ದರೂ ಇದುವರೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಅಲ್ಲದೆ ಜಲಜೀವನ್ ಮಿಷನ್ ಯೋಜನೆಯಡಿ ನಿರ್ಮಿಸಿರುವ ನೀರಿನ ಟ್ಯಾಂಕ್‌ಗೆ ಬೋರ್‌ವೆಲ್‌ನಿಂದ ನೀರು ಪೂರೈಸುವ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ಅಮ್ಮತ್ತಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ನಿತಿಶ್ ಆರೋಪಿಸಿದರು.ಈಗಾಗಲೇ ಇರುವ ಬೋರ್‌ವೆಲ್ ಗೆ ವಿದ್ಯುತ್ ಸಂಪರ್ಕ ಹಾಗೂ ಪೈಪ್‌ಲೈನ್ ಕಲ್ಪಿಸುವ ಬದಲು ಸುಮಾರು ರು. 4.50 ಲಕ್ಷ ವೆಚ್ಚದಲ್ಲಿ ಮತ್ತೊಂದು ಬೋರ್‌ವೆಲ್ ಕೊರೆಯಲಾಗಿದೆ. ಇದರಿಂದ ಸರ್ಕಾರದ ಹಣ ಪೋಲಾಗುವುದಾಗಿ ಹೇಳಿದರು. ಹಾಗೂ ಕಾಮಗಾರಿಯ ಅಗತ್ಯತೆ ಹಾಗೂ ಸ್ಥಳದ ಆಯ್ಕೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದರು.ಗ್ರಾಮಸ್ಥರಿಂದ ಸಂಪೂರ್ಣ ಮಾಹಿತಿ ಪಡೆದು ಕಾಮಾಗಾರಿ ನಡೆಸುವಂತೆ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಹಾಗೂ ವಕೀಲ ಎನ್ ಎಸ್ ಪ್ರಶಾಂತ್ ಅಭಿಪ್ರಾಯ ವ್ಯಕ್ತಪಡಿಸಿದರು. ರಾಜನ್, ಸುಮತಿ, ರೋಶಿತ್, ಅಜಿತ್, ಸಂದೀಪ್, ರೀಶಾ, ಸುರೇಂದ್ರ, ದೀನಶ್, ಶಂಶು, ಪಂಕಜ್ ಸೇರಿದಂತೆ ಹಲವಾರು ಗ್ರಾಮಸ್ಥರು ಇದ್ದರು.