29ರಿಂದ ಮಾರ್ಕೋನಹಳ್ಳಿ ಜಲಾಶಯದಿಂದ ನೀರು ಬಿಡುಗಡೆ

| Published : Aug 08 2025, 01:00 AM IST

29ರಿಂದ ಮಾರ್ಕೋನಹಳ್ಳಿ ಜಲಾಶಯದಿಂದ ನೀರು ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾರ್ಕೊನಹಳ್ಳಿ ಜಲಾಶಯದ ಅಚ್ಚುಕಟ್ಟುವುದಾರರಿಗೆ ರಾಗಿ ಬೆಳೆಗಾಗಿ ಆಗಸ್ಟ್ 29ರ ಶುಕ್ರವಾರದಿಂದ ನೀರು ಹರಿಸಲಾಗುವುದು ಎಂದು ನೀರಾವರಿ ಸಲಹಾ ಸಮಿತಿಯಲ್ಲಿ ತೀರ್ಮಾನಿಸಲಾಯಿತು

ಕನ್ನಡಪ್ರಭ ವಾರ್ತೆ ಕುಣಿಗಲ್ ಮಾರ್ಕೊನಹಳ್ಳಿ ಜಲಾಶಯದ ಅಚ್ಚುಕಟ್ಟುವುದಾರರಿಗೆ ರಾಗಿ ಬೆಳೆಗಾಗಿ ಆಗಸ್ಟ್ 29ರ ಶುಕ್ರವಾರದಿಂದ ನೀರು ಹರಿಸಲಾಗುವುದು ಎಂದು ನೀರಾವರಿ ಸಲಹಾ ಸಮಿತಿಯಲ್ಲಿ ತೀರ್ಮಾನಿಸಲಾಯಿತು ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯದ ಪ್ರವಾಸಿ ಮಂದಿರದಲ್ಲಿ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್, ಕುಣಿಗಲ್ ಶಾಸಕ ಡಾ.ರಂಗನಾಥ ಹಾಗೂ ವಿಭಾಗಾಧಿಕಾರಿ ನಾಹಿದಾ ಜಮ್‌ ಜಮ್‌, ನೇತೃತ್ವದಲ್ಲಿ ನಡೆದ ಸಲಹಾ ಸಮಿತಿ ಸಭೆಯಲ್ಲಿ ರೈತರ ಒತ್ತಾಯದ ಮೇರೆಗೆ ತೀರ್ಮಾನಿಸಲಾಯಿತು. ಮಾರ್ಕೊನಹಳ್ಳಿ ಜಲಾಶಯದಲ್ಲಿ 80 ಅಡಿಗಳಷ್ಟು ನೀರಿದ್ದು ತುಂಬಲು 9 ಅಡಿ ಬಾಕಿ ಇದೆ ಜಲಾಶಯದ ಸಾಮರ್ಥ್ಯ 2004 ಎಂ ಸಿ ಎಫ್ ಟಿ ಗಳಷ್ಟು ಇದ್ದು ಸದ್ಯದ ನೀರಿನ ಲಭ್ಯತೆ 1300 ಎಮ್ ಸಿಎಫ್ ಟಿ ಗಳಷ್ಟಿದ್ದು ಇನ್ನೂ ಅವಶ್ಯಕತೆವಿರುವ 1100 ಎಂಸಿಎಫ್ ಟಿ ಕೂಡ ಮಳೆ ಹಾಗೂ ಇತರ ನೀರಿನ ಮೂಲಗಳಿಂದ ಪ್ರತಿದಿನ 700 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು ರಾಗಿ ಬೆಳೆಗೆ ನೀರಿನ ಲಭ್ಯತೆ ಆಗಲಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು .

ರಾಗಿ ಮತ್ತು ಭತ್ತದ ಬೆಳೆಗೆ ಬೀಜದ ಲಭ್ಯತೆ ಬಗ್ಗೆ ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದು ನಂತರ ರಾಗಿ ಅಥವಾ ಭತ್ತ ಬೆಳೆಯಲು ರೈತರು ತೀರ್ಮಾನಿಸಬೇಕೆಂದು ಶಾಸಕರು ಸೂಚಿಸಿದಾಗ ಈ ಬಗ್ಗೆ ಮಾತನಾಡಿ ಸಭೆಯಲ್ಲಿ ಎಲ್ಲರೂ ಕೂಡ ರಾಗಿ ಬೆಳೆಯಲು ತೀರ್ಮಾನಿಸಿದ್ದು ಕೆಲವು ತಗ್ಗು ಪ್ರದೇಶದ ರೈತರುಗಳು ಭತ್ತ ಬೆಳೆಯುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕುಣಿಗಲ್ ಶಾಸಕ ಡಾ.ರಂಗನಾಥ್ ತಾಲೂಕಿನ ಅಭಿವೃದ್ಧಿಗಾಗಿ ಪ್ರತಿದಿನ ನಾವು ಶ್ರಮಿಸುತ್ತಿದ್ದೇವೆ. ಜಿಲ್ಲಾಧಿಕಾರಿಗಳ ಮೇಲೆ ಹೆಚ್ಚಿನ ಒತ್ತಡ ತಂದು ಕಂದಾಯ ಇಲಾಖೆಯಲ್ಲಿ ಆದಷ್ಟು ತ್ವರಿತವಾಗಿ ದಾಖಲಾತಿಗಳ ಕೆಲಸ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಹೆಚ್ಚು ಮನವಿ ಮಾಡುತ್ತಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಉಭ ಕಲ್ಯಾಣ್ , ಶಾಸಕರ ಸೂಚನೆಯಂತೆ ನಿವೇಶನಕ್ಕೆ ತುಮಕೂರು ಜಿಲ್ಲೆಯಲ್ಲಿ ಹಲವಾರು ಕಂದಾಯ ಗ್ರಾಮಗಳನ್ನು ಗುರುತಿಸಿ ಜನರಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದ್ದೇವೆ ಆದಷ್ಟು ಬೇಗ ಕಂದಾಯ ಗ್ರಾಮವನ್ನು ಘೋಷಣೆ ಮಾಡುತ್ತೇವೆ ಎಂದರು.

ನೀರಾವರಿ ಸಲಹಾ ಸಮಿತಿಗೆ ಬಂದ ಜಿಲ್ಲಾಧಿಕಾರಿ ಅವರನ್ನ ಹಾಗೂ ಶಾಸಕರನ್ನ ಹಲವಾರು ರೈತರು ಕಳೆದ ಎರಡು ತಿಂಗಳಿಂದ ರಾಗಿ ಖರೀದಿ ಮಾಡಿದ್ದ ನಂತರ ಸರ್ಕಾರದಿಂದ ಹಣ ಬಂದಿಲ್ಲ . ಈ ಬಗ್ಗೆ ಕ್ರಮ ವಹಿಸಬೇಕೆಂದು ಮನವಿ ಮಾಡಿದರು ಈ ಸಂಬಂಧ ಜಿಲ್ಲಾಧಿಕಾರಿ ಮತ್ತು ಶಾಸಕರು ಮಾತನಾಡಿ, ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಲಭ್ಯತೆ ಹಾಗೂ ರೈತರ ಖಾತೆಗೆ ಹಣ ಹಾಕುವ ಸಂಬಂಧ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಿ ರೈತರ ಪಾಲಿನ ಹಣವನ್ನು ಅವರ ಖಾತೆಗಳಿಗೆ ಹಾಕಿಸುವ ಭರವಸೆ ನೀಡಿದರು.