ಸಾರಾಂಶ
ಹಾರಂಗಿ ಜಲಾಶಯದಲ್ಲಿ ನೀರಿನ ಒಳಹರಿವಿನ ಪ್ರಮಾಣ ಏರಿಕೆಯಾಗಿದೆ. ಈ ಹಿನ್ನೆಲೆ ಸೋಮವಾರ ಸಂಜೆ ನೀರನ್ನು ನದಿಗೆ ಬಿಡಲಾಗಿದೆ.
ಕನ್ನಡಪ್ರಭ ವಾರ್ತೆ ಕುಶಾಲನಗರ
ಹಾರಂಗಿ ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ಏರಿಕೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ ಸಂಜೆ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗಿದೆ.ಕಳೆದ ಕೆಲವು ದಿನಗಳಿಂದ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಹೆಚ್ಚಿನ ಒಳಹರಿವು ಇದ್ದು ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕರಾದ ಡಾ ಮಂತರ್ ಗೌಡ ಅವರು ತಿಳಿಸಿದ್ದಾರೆ.
ಪ್ರಸಕ್ತ ಜಲಾಶಯದಿಂದ ನಾಲ್ಕು ಕ್ರಸ್ಟ್ ಗೇಟ್ ಗಳ ಮೂಲಕ ನೀರು ಹರಿಸಲಾಗಿದ್ದು ಒಂದು ಸಾವಿರ ಕ್ಯುಸೆಕ್ ಪ್ರಮಾಣದ ನೀರು ಹರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಈ ಸಂದರ್ಭ ಮಾತನಾಡಿದ ಹಾರಂಗಿ ಯೋಜನೆ ವೃತ್ತದ ಅಧೀಕ್ಷಕ ಅಭಿಯಂತರ ಕೆ ಕೆ ರಘುಪತಿ, ಕಳೆದ ಭಾರಿಗಿಂತ ಶೇಕಡ 30ರಷ್ಟು ಹೆಚ್ಚಿನ ಪ್ರಮಾಣದ ಮಳೆ ಸುರಿಯುವ ಮುನ್ಸೂಚನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಿಂದ ಹಂತ ಹಂತವಾಗಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತದೆ ಎಂದರು.
ಜಲಾಶಯದಲ್ಲಿ ಪ್ರಸಕ್ತ 6 ಟಿ ಎಂ ಸಿ ಪ್ರಮಾಣದ ನೀರಿನ ಸಂಗ್ರಹ ಇರುವುದಾಗಿ ಅವರು ಮಾಹಿತಿ ನೀಡಿದ್ದಾರೆ.ಈ ಸಂದರ್ಭ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ, ಹಾರಂಗಿ ಅಣೆಕಟ್ಟು ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಪ್ರಮೋದ್ ಮುತ್ತಪ್ಪ, ನೀರು ಬಳಕೆದಾರರ ಸಂಘದ ಪ್ರಮುಖರಾದ ಟಿ ಕೆ ಪಾಂಡುರಂಗ ಅಣೆಕಟ್ಟು ಅಧಿಕಾರಿಗಳಾದ ಸಿದ್ಧರಾಜು ಸೌಮ್ಯ ಮತ್ತಿತರರು ಇದ್ದರು.