ಮುಂಬರುವ ಬೇಸಿಗೆ ಮಧ್ಯ ಕಾಲವಾದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಿಲ್ಲೆಯ 76 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಶಿವಕುಮಾರ ಕುಷ್ಟಗಿ

ಗದಗ: ಪ್ರಸಕ್ತ ಸಾಲಿನ ಬೇಸಿಗೆ ಪ್ರಾರಂಭದ ದಿನಗಳ ಫೆಬ್ರವರಿ ಅಂತ್ಯ ಮತ್ತು ಮಾರ್ಚ್‌ ಮೊದಲ ವಾರದಲ್ಲಿಯೇ ಬೇಸಿಗೆಯ ಅನುಭವ ತೀವ್ರವಾಗುತ್ತಿದೆ. ಮುಂಬರುವ ದಿನಗಳಲ್ಲಿ ಬಿಸಿಲಿನ ತಾಪ ಹೆಚ್ಚಿದಂತೆ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಲಕ್ಷಣಗಳಿವೆ. ಈಗಿನಿಂದಲೇ ಜಿಲ್ಲಾಡಳಿತ ಈ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಜಿಲ್ಲೆಯ ವ್ಯಾಪ್ತಿಯಲ್ಲಿರುವ 7 ಪುರಸಭೆ, 2 ಪಟ್ಟಣ ಪಂಚಾಯಿತಿ, ಗದಗ ಬೆಟಗೇರಿ- ನಗರಸಭೆ ಹಾಗೂ ಜಿಲ್ಲೆಯ ಗ್ರಾಮೀಣ ಭಾಗದ 342 ಹಳ್ಳಿಗಳಲ್ಲಿ ಕುಡಿಯುವ ನೀರು ಪೂರೈಕೆಯ ಜವಾಬ್ದಾರಿಯನ್ನು ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಪಂಗಳು ನಿರ್ವಹಿಸುತ್ತಿವೆ. ಆದರೆ ಪ್ರಸಕ್ತ ಸಾಲಿನಲ್ಲಿ ಇದುವರೆಗೂ ಯಾವುದೇ ಗ್ರಾಮಗಳಲ್ಲಿ ನೀರಿನ ಕೊರತೆ ಕಂಡು ಬಂದಿಲ್ಲವಾದರೂ ಈ ಕುರಿತು ಮುನ್ನೆಚ್ಚರಿಕಾ ಕ್ರಮಗಳ ಅವಶ್ಯಕತೆ ಎದ್ದು ಕಾಣುತ್ತಿದೆ.

76 ಹಳ್ಳಿಗಳಲ್ಲಿ ಕೊರತೆ ಸಾಧ್ಯತೆ: ಮುಂಬರುವ ಬೇಸಿಗೆ ಮಧ್ಯ ಕಾಲವಾದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಿಲ್ಲೆಯ 76 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಸದ್ಯ ಜಿಲ್ಲೆಯ ಎರಡು ಪ್ರಮುಖ ನೀರಿನ ಮೂಲಗಳಾದ ತುಂಗಭದ್ರಾ ಮತ್ತು ಮಲಪ್ರಭಾ ನದಿಯ ನೀರು ಹರಿಸಲಾಗುತ್ತಿದೆಯಾದರೂ ನೀರು ಪೂರೈಕೆಯಲ್ಲಿರುವ ಲೋಪಗಳಿಂದಾಗಿ ಬೇಸಿಗೆಯ ವೇಳೆಯಲ್ಲಿ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಬಹುಗ್ರಾಮ ಯೋಜನೆ: ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಜಿಲ್ಲೆಯ ಎಲ್ಲ ಜನವಸತಿಗಳಿಗೆ ಭೂಮಿ ಮೇಲ್ಮಟ್ಟದ (ನದಿ, ಕೆರೆ) ನೀರನ್ನು ಪೂರೈಕೆ ಮಾಡುವ ಯೋಜನೆ ಗದಗ ಜಿಲ್ಲೆಯಲ್ಲಿ ಜಾರಿಯಾಗಿದೆ. ರೋಣ, ಗಜೇಂದ್ರಗಡ ಮತ್ತು ನರಗುಂದ ತಾಲೂಕಿನ ಹಳ್ಳಿಗಳಿಗೆ ತಹಲ್ ಕಂಪನಿಯು ಮಲಪ್ರಭಾ ನದಿ ಮೂಲದಿಂದ ಹಾಗೂ ಗದಗ, ಮುಂಡರಗಿ, ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನ ಗ್ರಾಮಗಳಿಗೆ ಎಲ್ ಆ್ಯಂಡ್‌ ಟಿ ಕಂಪನಿ ತುಂಗಭದ್ರಾ ನದಿ ಮೂಲದಿಂದ ನೀರು ಪೂರೈಕೆ ಮಾಡುವ ಯೋಜನೆ ಇದಾಗಿದ್ದು, ಈಗಾಗಲೇ ಅನುಷ್ಠಾನವಾಗಿದೆ.

ವಿವರ: ರೋಣ, ಗಜೇಂದ್ರಗಡ ಮತ್ತು ನರಗುಂದ ತಾಲೂಕಿನ 123 ಹಳ್ಳಿಗಳಿಗೆ ಪ್ರತಿನಿತ್ಯ 26 ಮಿಲಿಯನ್ ಲೀಟರ್(ಎಂಎಲ್‌ಡಿ) ನೀರು ಅಗತ್ಯವಿದ್ದು, ಪ್ರಸ್ತುತ 16ರಿಂದ 20 ಎಂಎಲ್‌ಡಿ ನೀರು ಪೂರೈಕೆ ಆಗುತ್ತಿದೆ. ಗದಗ, ಮುಂಡರಗಿ, ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನ 219 ಹಳ್ಳಿಗಳಿಗೆ 40 ಎಂಎಲ್‌ಡಿ ನೀರಿನ ಅವಶ್ಯಕತೆ ಇದ್ದು, ಈಗ ಅಂದಾಜು 30 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದೆ ಎಂದು ಇಲಾಖೆ ದಾಖಲೆಗಳು ಹೇಳುತ್ತಿವೆ.

ಸಮಸ್ಯೆ ಎದುರಾಗಬಹುದಾದ ಹಳ್ಳಿಗಳು: ಗದಗ: ಎಚ್.ಎಸ್. ವೆಂಕಟಾಪುರ, ನಾಗಸಮುದ್ರ, ಸೊರಟೂರು, ಅಡವಿಸೋಮಾಪುರ, ಎಲಿಶಿರೂರು, ತಿಮ್ಮಾಪುರ, ಹಿರೇಹಂದಿಗೊಳ, ಕೋಟಮುಚಗಿ, ಕದಡಿ, ಗಾವರವಾಡ, ಚಿಂಚಲಿ, ಸಾರಿಗೆ ನಗರ, ಲಿಂಗದಾಳ, ಹೊಂಬಳ.

ಮುಂಡರಗಿ: ಹಳ್ಳಿಕೇರಿ, ಚಿಕ್ಕವಡ್ಡಟ್ಟಿ, ಪೇಟಾಲೂರು, ಹೈತಾಪುರ, ಬೆಣ್ಣಿಹಳ್ಳಿ, ಗುಡ್ಡದ ಬೂದಿಹಾಳ, ಚಿಕ್ಕವಡ್ಡಟ್ಟಿ.

ನರಗುಂದ: ಹದಲಿ, ಗಂಗಾಪುರ, ಕುರ್ಲಗೇರಿ, ಶಿರೋಳ, ಕಲ್ಲಾಪುರ, ಕಪ್ಪಲಿ, ಕೊಣ್ಣೂರು, ಬೂದಿಹಾಳ, ರಡ್ಡೇರ ನಾಗನೂರು, ಖಾನಾಪುರ, ವಾಸನ, ಬೆಳ್ಳೇರಿ, ಹಿರೇಕೊಪ್ಪ, ಕುರಗೋವಿನಕೊಪ್ಪ, ಬೆನಕೊಪ್ಪ, ಸಂಕದಾಳ, ಮೂಗನೂರು, ಭೈರನಹಟ್ಟಿ.

ಗಜೇಂದ್ರಗಡ: ಮಾಟರಂಗಿ, ಗುಡಗೇರಿ, ನಾಗರಶಿಕೊಪ್ಪ, ಲಕ್ಕಲಕಟ್ಟಿ.

ರೋಣ: ಸ್ಥಳಾಂತರಗೊಂಡ ಮೆಣಸಗಿ, ಮಾಳವಾಡ, ಹೊಳೆಮಣ್ಣೂರು, ಭೋಪಳಾಪುರ, ಗಾಡಗೋಳಿ, ಕುರವಿನಕೊಪ್ಪ, ಬಸರಕೋಡ, ಹೊಳೆಆಲೂರು, ಸವಡಿ, ಅಬ್ಬಿಗೇರಿ, ಹಿರೇಹಾಳ, ಬಳಗೋಡ, ಹೊನ್ನಿಗನೂರು, ಚಿಕ್ಕಮಣ್ಣೂರು, ಮಾಡಲಗೇರಿ, ಮುದೇನಗೂಡಿ.

ಶಿರಹಟ್ಟಿ: ಮಾಗಡಿ, ಬನ್ನಿಕೊಪ್ಪ, ಕಡಕೊಳ, ಹೆಬ್ಬಾಳ, ಚವಡಾಳ, ಬೂದಿಹಾಳ, ಹೊಸರು, ಗೊಜನೂರು, ಯತ್ತಿನಹಳ್ಳಿ, ಮಾಡಳ್ಳಿ, ಬಾಳೆಹೊಸೂರು, ಆದ್ರಳ್ಳಿ, ಹುಲ್ಲೂರು, ಅಕ್ಕಿಗುಂದ ಮತ್ತು ಅಕ್ಕಿಗುಂದ ತಾಂಡಾ.

ಕ್ರಮ ಕೈಗೊಳ್ಳಿ: ಜಿಲ್ಲಾಡಳಿತ ಬೇಸಿಗೆ ಪೂರ್ವದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಮಸ್ಯೆ ಎದುರಾಗುವ ಗ್ರಾಮಗಳಲ್ಲಿನ ಕೆರೆಗಳಿಗೆ ಸಾಧ್ಯವಾದಲ್ಲಿ ನೀರು ಭರ್ತಿ ಮಾಡಿಕೊಳ್ಳಬೇಕು. ಕೊಳವೆಬಾವಿಗಳು ದುರಸ್ತಿ ಇದ್ದರೆ ಅವುಗಳನ್ನು ಸರಿಪಡಿಸಿಕೊಳ್ಳಬೇಕು. ಜಿಲ್ಲೆಯ ಜನರಿಗೆ ಬೇಸಿಗೆಯಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ವಿಜಯ ಕುಲಕರ್ಣಿ ಆಗ್ರಹಿಸಿದರು.