ನಾರಾಯಣಪೂರ ಬಲದಂಡೆ ನಾಲಾ ವ್ಯಾಪ್ತಿಯಲ್ಲಿ ಬೆಳೆಗಳ ಮತ್ತು ರೈತರ ಪರಿಸ್ಥಿತಿ ತೀರಾ ಗಂಭೀರ ರೂಪ ತಾಳುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕಾರಣ ಜನವರಿಯವರೆಗೆ ಕಾಲುವೆಗಳಿಗೆ ನೀರು ಬಿಡಲು ಒತ್ತಾಯಿಸಿ ನ.16ರಂದು ಸಿರವಾರ ಕ್ರಾಸ್ ಬಳಿ ಜೆಡಿಎಸ್ ಪಕ್ಷದಿಂದ ಬೃಹತ್ ರ್ಯಾಲಿ ಮತ್ತು ರಸ್ತೆ ತಡೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು.
ಕನ್ನಡಪ್ರಭ ವಾರ್ತೆ ದೇವದುರ್ಗ
ನಾರಾಯಣಪೂರ ಬಲದಂಡೆ ನಾಲಾ ವ್ಯಾಪ್ತಿಯಲ್ಲಿ ಬೆಳೆಗಳ ಮತ್ತು ರೈತರ ಪರಿಸ್ಥಿತಿ ತೀರಾ ಗಂಭೀರ ರೂಪ ತಾಳುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕಾರಣ ಜನವರಿಯವರೆಗೆ ಕಾಲುವೆಗಳಿಗೆ ನೀರು ಬಿಡಲು ಒತ್ತಾಯಿಸಿ ನ.16ರಂದು ಸಿರವಾರ ಕ್ರಾಸ್ ಬಳಿ ಜೆಡಿಎಸ್ ಪಕ್ಷದಿಂದ ಬೃಹತ್ ರ್ಯಾಲಿ ಮತ್ತು ರಸ್ತೆ ತಡೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು.ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಜರುಗಿದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮುಂಗಾರು ಬೆಳೆಗಳ ರಕ್ಷಿಸಲು ಅಗತ್ಯ ನೀರು ಬಿಡುವ ಭರವಸೆ ನೀಡಿದ್ದಾರೆ. ಆದರೆ ನ.12ಕ್ಕೆ ನೀರು ಬಂದ್ ಮಾಡಲಾಗುತ್ತಿದೆ.
ದೇವದುರ್ಗ ಮತ್ತು ಅರಕೇರಾ ತಾಲೂಕು ವ್ಯಾಪ್ತಿಯಲ್ಲಿ 70 ಸಾವಿರ ಹೆಕ್ಟೇರ್ ಜಮೀನಿನಲ್ಲಿ ಹತ್ತಿ, 30 ಸಾವಿರ ಹೆಕ್ಟೇರ್ ಜಮೀನಿನಲ್ಲಿ ಭತ್ತ ಹಾಗೂ 6 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆಗಳನ್ನು ಬೆಳೆಯಲಾಗಿದೆ.ಹತ್ತಿ ಬೆಳೆಯೇನೋ ಬಂದಿದೆ. ಆದರೆ ಭತ್ತಕ್ಕೆ ಕನಿಷ್ಠ ಡಿಸೆಂಬರ್ ತಿಂಗಳವರೆಗೆ ನೀರಿನ ಅಗತ್ಯವಿದೆ. ಆದರೆ ಮೆಣಸಿನಕಾಯಿ ಬೆಳೆಗಳೆಗೆ ಮಾತ್ರ ಜನವರಿ ತಿಂಗಳವರೆಗೆ ನೀರು ಬೇಕೇಬೇಕಾಗಿದೆ.
ಮೆಣಸಿನಕಾಯಿ ಬೆಳೆಗೆ ಪ್ರತಿ ಎಕರೆಗೆ ರೈತರು ಒಂದು ಲಕ್ಷ ಖರ್ಚು ಮಾಡಿದ್ದಾರೆ. ಇನ್ನೂ ಕೆಲ ರೈತರು 10-20 ಎಕರೆ ಲೀಜ್ ಆಧರಿಸಿ ಬೆಳೆ ಹಾಕಿದ್ದಾರೆ. ಡಿಸೆಂಬರ್-ಜನವರಿಯಲ್ಲಿ ಫಸಲು ಬರುವ ಹಂತವಿರುತ್ತದೆ. ನೀರಿನ ಅಭಾವ ಉಂಟಾದಲ್ಲಿ ಕೋಟಿ ಕೋಟಿ ಹಾನಿಯಾಗುತ್ತಿದ್ದು, ರೈತರು ಆತಂಕ ಮತ್ತು ಭಯದಲ್ಲಿದ್ದಾರೆ.ಜೆಡಿಎಸ್ ರೈತರ ಹಿತ ಕಾಪಾಡುವ ಪಕ್ಷವಾಗಿದೆ. ಕಾರಣ ನ.7ರಿಂದ 11ರವರೆಗೆ 11 ಕಡೆ ಎಲ್ಲಾ ಗ್ರಾ.ಪಂಗಳ ವ್ಯಾಪ್ತಿಯ ರೈತರೊಂದಿಗೆ ಚರ್ಚಿಸಲು ಸಭೆಗಳನ್ನು ಆಯೋಜಿಸಲಾಗಿದೆ. ರೈತರು ತಿಳಿಸುವ ಮಾಹಿತಿಯನ್ನು ಜಿಲ್ಲಾಡಳಿತದ ಗಮನ ಸೆಳೆಯಲಾಗುವುದು.
ಈಗಾಗಲೇ ನೀರಿನ ಅಗತ್ಯತೆ ಮತ್ತು ಆಗಬಹುದಾದ ಬೆಳೆಹಾನಿ ಮಾಹಿತಿ ನೀಡಲು ನೀರಾವರಿ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ವಾರದೊಳಗೆ ವರದಿ ನೀಡಲಿದ್ದಾರೆ.ರೈತರು ನೀಡುವ ಮಾಹಿತಿ ಮತ್ತು ಅಧಿಕಾರಿಗಳು ನೀಡಲಿರುವ ವರದಿ ಆಧರಿಸಿ ನೀರಾವರಿ ಸಲಹಾ ಸಮಿತಿ ಹಾಗೂ ಚಳಿಗಾಲ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಲಾಗವುದು.
ಸರ್ಕಾರ ದಿವಾಳಿಯಾಗಿದೆ ಎಂದು ಸ್ವತಃ ಸಿಎಂ ಡಿ.ಕೆ.ಶಿವುಕುಮಾರ್ರವರು ಡಿಸೇಲ್ಗೆ ದುಡ್ಡಿಲ್ಲ ಎನ್ನುವ ಮೂಲಕ ಒಪ್ಪಿಕೊಂಡಿದ್ದಾರೆ. ಬರಗಾಲ ಘೋಷಣೆಯಾಯಿತೇ ಹೊರತು ಪರಿಹಾರ ಹಾಗೂ ಇತರೆ ಸೌಲಭ್ಯಗಳು ಜಾರಿಗೊಂಡಿಲ್ಲ. ಇಂಥ ಅಧೋಗತಿ ಸರಕಾರವನ್ನು ರಾಜ್ಯ ಎಂದೂ ಕಂಡಿರಲಿಲ್ಲವೆಂದರು.ಈ ಸಂದರ್ಭದಲ್ಲಿ ದೇವದುರ್ಗ ತಾಲೂಕು ಜೆಡಿಎಸ್ ಅಧ್ಯಕ್ಷ ಬಸನಗೌಡ ದೇಸಾಯಿ, ಅರಕೇರಾ ತಾಲೂಕು ಅಧ್ಯಕ್ಷ ಸಿದ್ದಣ್ಣ ಬಿ.ಗಣೇಕಲ್, ಮುಖಂಡರಾದ ಶರಣಪ್ಪ ಬಳೆ, ಅಮರೇಶ ಪಾಟೀಲ್ ಪರ್ತಪೂರ, ಹನುಮಂತ್ರಾಯನಾಯಕ ಚಿಂತಲಕುಂಟಿ, ಚನ್ನಪ್ಪ ಮಸೀದಪೂರ, ಶಿಖರೇಶ ಪಾಟೀಲ್, ನಾಗರಾಜ ಪಾಟೀಲ್, ಗೋವಿಂದರಾಜ್ ನಾಯಕ, ಶಾಲಂ ಉದ್ದಾರ, ಶಾಂತಕುಮಾರ ಗೋಪಾಳಪೂರ, ಶರಣಗೌಡ, ಚನ್ನಮ್ಮ ವಾಚಾನಾಯ್ಕ ತಾಂಡ, ರಮೇಶ ರಾಮನಾಳ ಇದ್ದರು.