ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಾರ್ಕಳದ 14, ಕುಂದಾಪುರದ 36, ಬೈಂದೂರಿನ 15, ಉಡುಪಿಯ 9, ಬ್ರಹ್ಮಾವರದ 13, ಕಾಪುವಿನ 4 ಹಾಗೂ ಹೆಬ್ರಿ ತಾಲೂಕಿನಲ್ಲಿ 2 ಪಂಚಾಯಿತಿ ಮತ್ತು ಸಾಲಿಗ್ರಾಮದ 5, ಬೈಂದೂರಿನ 19 ವಾರ್ಡ್‌ಗಳಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುವ ಸಾಧ್ಯತೆಗಳಿರುವುದಾಗಿ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಹೇಳಿದ್ದಾರೆ.ಗುರುವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ
ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜೂನ್‌ನಲ್ಲಿ ಮುಂಗಾರು ಮಳೆ ಆರಂಭವಾಗುವವರೆಗೆ ಜನರಿಗೆ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಪ್ರಸ್ತುತ ಜಿಲ್ಲೆಯಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಾಗಿಲ್ಲ. ತಾಲೂಕುವಾರು ವರದಿಯಂತೆ ಮೇ 15 ರ ವರೆಗೆ ನೀರಿನ ಸಮಸ್ಯೆಯಾಗಿರುವುದಿಲ್ಲ, ಆದರೂ ಈಗಿನಿಂದಲೇ ನೀರಿನ ಸರಬರಾಜಿಗೆ ಯೋಜನೆ ರೂಪಿಸಿಕೊಳ್ಳಬೇಕು ಎಂದು ತಹಸೀಲ್ದಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರಿಗೆ ಸೂಚನೆ ನೀಡಿದರು.ಜಿಲ್ಲೆಯಲ್ಲಿರುವ ಕುಡಿಯುವ ನೀರಿನ ಮೂಲಗಳಲ್ಲಿ ನೀರು ಎಷ್ಟು ದಿನಗಳಿಗೆ ಸಾಕಾಗಬಹುದು ಎಂಬ ಬಗ್ಗೆ 2 ದಿನಗಳ ಒಳಗಾಗಿ ಪರಿಶೀಲಿಸಿ ವರದಿ ನೀಡಬೇಕೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಭಿಯಂತರರಿಗೆ ಸೂಚನೆ ನೀಡಿದ ಅವರು, ಬಾವಿಗಳನ್ನು ಗುರುತಿಸಿ ತಕ್ಷಣಕ್ಕೆ ನೀರು ನೀಡುವ ವ್ಯವಸ್ಥೆ ಮಾಡಬೇಕು, ಸರ್ಕಾರಿ ಬಾವಿಗಳು, ಕೆರೆಗಳು ಸ್ವಚ್ಛವಾಗಿಟ್ಟು, ಪ್ರಾಣಿ, ಪಕ್ಷಿಗಳಿಗೆ ನೀರನ್ನು ಕುಡಿಯಲು ಅನುಕೂಲ ಮಾಡಿಕೊಡಬೇಕು ಎಂದರು.
ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ದನ, ಕರುಗಳಿಗೆ ಮೇವಿನ ಕೊರತೆ ಕಂಡು ಬಂದಿಲ್ಲ. ಪ್ರಸ್ತುತ ಎಲ್ಲಾ ತಾಲೂಕುಗಳಲ್ಲಿ ಮುಂದಿನ 38 ವಾರಗಳಿಗೆ ಆಗುವಷ್ಟು ಮೇವು ದಾಸ್ತಾನಿದೆ ಎಂದರು.ಬೇಸಿಗೆ ದಿನಗಳಲ್ಲಿ ಅಗ್ನಿ ಅನಾಹುತಗಳಾದರೇ ಕೂಡಲೇ ಸ್ಪಂದಿಸಲು ಅಗ್ನಿಶಾಮಕ ಅಧಿಕಾರಿಗಳು ಸನ್ನದ್ಧರಾಗಿರಬೇಕು ಅರಣ್ಯ ಪ್ರದೇಶಗಳಲ್ಲಿ ಅಗ್ನಿ ಅನಾಹುತ ತಡೆಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಹೆಚ್ಚುತ್ತಿರುವ ತಾಪಮಾನದಿಂದ ಉಂಟಾಗುವ ಅರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಅಗತ್ಯ ಔಷಧಿಗಳನ್ನು ಹಾಗೂ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಓ.ಆರ್.ಎಸ್ ಪ್ಯಾಕೇಟ್‌ಗಳನ್ನು ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಜಿ.ಪಂ. ಉಪ ಕಾರ್ಯದರ್ಶಿ ಎಸ್. ಎಸ್ ಕಾದ್ರೋಳ್ಳಿ,
ಸಹಾಯಕ ಕಮಿಷನರ್ ರಶ್ಮಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸೀಲ್ದಾರ್ ಮತ್ತಿತರರಿದ್ದರು.