ತರಕಾರಿ, ಹಣ್ಣು ಹಾಗೂ ತೆಂಗು, ಅಡಕೆ ಸೇರಿದಂತೆ ಯಾವುದೇ ಬೆಳೆಯಲು ಮಣ್ಣಿನ ಪರೀಕ್ಷೆಯ ಮಹತ್ವ, ಹಸಿರು ಎಲೆ ಗೊಬ್ಬರದ ಬಳಕೆ ಹಾಗೂ ರಾಸಾಯನಿಕ ಗೊಬ್ಬರಗಳಿಗೆ ಪರ್ಯಾಯ ವಿಧಾನಗಳ ಕುರಿತು ವಿವರಿಸಿದರು.ಮಕ್ಕಳಿಗೆ ಅನ್ನದ ಜೊತೆಗೆ ಪೋಷಕಾಂಶವುಳ್ಳ ಆಹಾರ ನೀಡುವ ಮಾದರಿಯಲ್ಲಿಯೇ ಹಣ್ಣು ಹಾಗೂ ತರಕಾರಿ ಗಿಡಗಳಿಗೂ ಪೋಷಕಾಂಶಗಳನ್ನು ನೀಡಬೇಕಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಯಾವುದೇ ಬೆಳೆಯನ್ನು ಸ್ಥಿರವಾಗಿ ಬೆಳೆಯಲು ನೀರು, ಮಣ್ಣು ಹಾಗೂ ಪೋಷಕಾಂಶ ನೀಡುವುದು ಅತ್ಯಗತ್ಯ ಎಂದು ಹಿರಿಯ ವಿಜ್ಞಾನಿ ಡಾ.ಟಿ.ಕೆ.ರಾಧಾ ಹೇಳಿದರು‌.

ತಾಲೂಕಿನ ಮಾಣಿಕ್ಯನಹಳ್ಳಿ ಗ್ರಾಪಂ ಆವರಣದಲ್ಲಿ ಸ್ಥಳೀಯ ಗ್ರಾಪಂ ಹಾಗೂ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರು ಮತ್ತು ಪಂಚಾಯ್ತಿ ವ್ಯಾಪ್ತಿಯ ಸ್ವ-ಸಹಾಯ ಸಂಘಗಳ ಸಹಯೋಗದೊಂದಿಗೆ ಆಯೋಜಿಸಿದ್ದ‌ ರಾಷ್ಟ್ರೀಯ ಸಮತೋಲನ ಗೊಬ್ಬರ ಬಳಕೆ ವಿಶೇಷ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ತರಕಾರಿ, ಹಣ್ಣು ಹಾಗೂ ತೆಂಗು, ಅಡಕೆ ಸೇರಿದಂತೆ ಯಾವುದೇ ಬೆಳೆಯಲು ಮಣ್ಣಿನ ಪರೀಕ್ಷೆಯ ಮಹತ್ವ, ಹಸಿರು ಎಲೆ ಗೊಬ್ಬರದ ಬಳಕೆ ಹಾಗೂ ರಾಸಾಯನಿಕ ಗೊಬ್ಬರಗಳಿಗೆ ಪರ್ಯಾಯ ವಿಧಾನಗಳ ಕುರಿತು ವಿವರಿಸಿದರು.ಮಕ್ಕಳಿಗೆ ಅನ್ನದ ಜೊತೆಗೆ ಪೋಷಕಾಂಶವುಳ್ಳ ಆಹಾರ ನೀಡುವ ಮಾದರಿಯಲ್ಲಿಯೇ ಹಣ್ಣು ಹಾಗೂ ತರಕಾರಿ ಗಿಡಗಳಿಗೂ ಪೋಷಕಾಂಶಗಳನ್ನು ನೀಡಬೇಕಿದೆ. ಮಣ್ಣಿನ ಫಲವತ್ತತೆ ಮತ್ತು ಸುಸ್ಥಿರ ಕೃಷಿಗಾಗಿ ಸಮತೋಲನ ಪೋಷಕಾಂಶ ನಿರ್ವಹಣೆಯ ಅಗತ್ಯತೆಯನ್ನು ವಿವರಿಸಿದರು.

ಜೈವಿಕ ಗೊಬ್ಬರಗಳ ಬಳಕೆ, ಮಣ್ಣಿನ ಆರೋಗ್ಯ ನಿರ್ವಹಣೆ ಹಾಗೂ ಪ್ರದರ್ಶನಗಳ ಕುರಿತು ಡಾ.ಸಿ.ವಾಸುಗಿ ತಾಂತ್ರಿಕ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಮತೋಲನ ಗೊಬ್ಬರ ಬಳಕೆ ಕುರಿತು ವಿಜ್ಞಾನಿ ಡಾ.ಎಂ.ಸಿ.ಕೀರ್ತಿ ಉಪನ್ಯಾಸ ನೀಡಿದರು.

ಕೀಟನಾಶಕಗಳ ಸುರಕ್ಷಿತ ಬಳಕೆ ಮತ್ತು ಸಸ್ಯ ಸಂರಕ್ಷಣಾ ಕಿಟ್ ಬಳಕೆಯ ಕುರಿತು ಬಿಎಸ್ ಎಫ್ ಇಂಡಿಯಾ ಲಿಮಿಟೆಡ್ ನ‌ ಕೆ.ದೀಪಕ್ ಗೌಡ ಸಂಸ್ಥೆ ಪರವಾಗಿ ಮಾಹಿತಿ ನೀಡಿದರು.

ಪಿಡಿಒ ಕೆ‌.ಎನ್.ಕುಮಾರ್ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಕುಮಾರ್ ಮಾತನಾಡಿದರು. ನಂತರ ವಿಜ್ಞಾನಿಗಳು ಹಾಗೂ ರೈತರ ನಡುವೆ ಸಂವಾದ ನಡೆಯಿತು. ಪರಿಸರ ಸ್ನೇಹಿ ಕೃಷಿ ಪದ್ಧತಿಗಳ ಕುರಿತು ರೈತರಿಗೆ ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಒಟ್ಟು 164 ಮಹಿಳಾ, ಪುರುಷ ರೈತರು ಭಾಗವಹಿಸಿದ್ದರು. ಇದೇ ವೇಳೆ ಅರ್ಕಾ ಬೀಜ ಕಿಟ್, ಅರ್ಕಾ ಪೂರ್ಣ (ಸೀಬೆ ಸಸಿ) ಹಾಗೂ ಎಎಂಸಿಯನ್ನು ರೈತರಿಗೆ ವಿತರಿಸಲಾಯಿತು.

ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಕುಮಾರ್, ಪಿಡಿಒ ಕೆ.ಎನ್.ಕುಮಾರ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಎಂ.ಎನ್.ನಟರಾಜು, ನಿವೃತ್ತ ಶಿಕ್ಷಕ ಬೋರೇಗೌಡ, ಪಂಚಾಯ್ತಿ ವ್ಯಾಪ್ತಿಯ ಸ್ವ-ಸಹಾಯ ಸಂಘಗಳ ಅಧ್ಯಕ್ಷರು, ಸದಸ್ಯರು, ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರು ಹಾಜರಿದ್ದರು.