ಸಾರಾಂಶ
ಭಾಗಮಂಡಲದ ಕಾವೇರಿ ತ್ರಿವೇಣಿ ಸಂಗಮದಲ್ಲಿ ಜಲಕ್ರೀಡೆಗೆ ಯಾವ ಕಾರಣಕ್ಕೂ ಅವಕಾಶ ನೀಡಬೇಡಿ ಎಂದು ಪೊಲೀಸರು ಮತ್ತು ಭಗಂಡೇಶ್ವರ ದೇವಾಲಯ ಸಿಬ್ಬಂದಿಗೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಸೂಚಿಸಿದ್ದಾರೆ. ಮೇಲ್ಸೇತುವೆ ವೀಕ್ಷಣೆ ಸಂದರ್ಭ ಅವರು ಈ ಸೂಚನೆ ನೀಡಿದ್ದಾರೆ.
ಕನ್ನಡಭ ವಾರ್ತೆ ಮಡಿಕೇರಿ
ದಕ್ಷಿಣ ಭಾರತದ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರವಾದ ಕಾವೇರಿ ತ್ರಿವೇಣಿ ಸಂಗಮದಲ್ಲಿ ಜಲಕ್ರೀಡೆಗೆ ಯಾವ ಕಾರಣಕ್ಕೂ ಅವಕಾಶ ನೀಡಬೇಡಿ ಎಂದು ಪೊಲೀಸರು ಮತ್ತು ಭಗಂಡೇಶ್ವರ ದೇವಾಲಯ ಸಿಬ್ಬಂದಿಗೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಸೂಚಿಸಿದ್ದಾರೆ.ಭಾಗಮಂಡಲ ಮೇಲ್ಸೇತುವೆ ವೀಕ್ಷಣೆಯ ಸಂದರ್ಭ ಪ್ರವಾಸಿಗರು ತ್ರಿವೇಣಿ ಸಂಗಮದಲ್ಲಿ ಈಜಾಡುತ್ತಿದ್ದ ಪ್ರವಾಸಿಗರನ್ನು ಕಂಡು ಗರಂ ಆಗಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ತ್ರಿವೇಣಿ ಸಂಗಮದಲ್ಲಿ ಧಾರ್ಮಿಕ ಜಲಕ್ರಿಡೆ ನಡೆಸುತ್ತಿದ್ದ ಪ್ರವಾಸಿಗರಿಗೆ ಕ್ಷೇತ್ರದ ಪಾವಿತ್ರ‍್ಯತೆ ಬಗ್ಗೆ ತಿಳಿಸಿ ಮನವರಿಕೆ ಮಾಡಿದರು.ತ್ರಿವೇಣಿ ಸಂಗಮದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯಲ್ಲಿ ವಾತಾವರಣ ನಿರ್ಮಾಣವಾಗಬಾರದು ಎಂದರು.
ಸಿಬ್ಬಂದಿ ಕಾವಲು ಕಾಯುವಂತೆ ನಿರ್ದೇಶನ ನೀಡಿದ ಪೊನ್ನಣ್ಣ ಹೆಚ್ಚಿನ ಸಿಬ್ಬಂದಿ ಅವಶ್ಯಕತೆ ಇದ್ದರೆ ಒದಗಿಸುವುದಾಗಿ ತಿಳಿಸಿದರು.ಪ್ರವಾಸಿಗರಿಗೆ ಈ ನಿಟ್ಟಿನಲ್ಲಿ ಮಾಹಿತಿ ನೀಡಲು ತಿಳುವಳಿಕೆ ಫಲಕ ಅಳವಡಿಸುವಂತೆ ಸಬ್ ಇನ್‌ಸ್ಪೆಕ್ಟರ್ ಗೆ ಸೂಚನೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಪೊನ್ನಣ್ಣ, ಭಾಗಮಂಡಲ ಮತ್ತು ತಲಕಾವೇರಿ ಪೌರಾಣಿಕ ಹಿನ್ನಲೆ ಉಳ್ಳ ಪುಣ್ಯ ಕ್ಷೇತ್ರವಾಗಿದ್ದು, ಇಲ್ಲಿ ಧಾರ್ಮಿಕ ವಿಧಿವಿಧಾನಗಳಿಗೆ ವಿರುದ್ದವಾಗಿ ಯಾವುದೇ ನಡವಳಿಕೆ ಸಹಿಸಲು ಸಾಧ್ಯವಿಲ್ಲ ಎಂದರು.ಮಾಹಿತಿ ಕೊರತೆಯಿಂದ ಕೆಲ ಪ್ರವಾಸಿಗರಿಂದ ಅಪಚಾರವಾಗುತ್ತಿರುವ ವಿವರಗಳು ತಮ್ಮ ಗಮನಕ್ಕೆ ಬಂದಿದ್ದು, ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ತಾವು ಬದ್ಧರಿದ್ದೇವೆ ಎಂದು ತಿಳಿಸಿದರು.
ಮುಖಂಡರಾದ ತೆನ್ನಿರಮೈನಾ, ರಮಾನಾಥ್, ಸೂರಜ್ ಹೊಸೂರು, ಸುನಿಲ್ ಪತ್ರಾವೋ, ನೆರವಂಡ ಉಮೇಶ್, ದೇವಂಗೋಡಿ ಹರ್ಷ, ಕುದುಪಜೆ ಪ್ರಕಾಶ್ ಸೇರಿದಂತೆ ಪ್ರಮುಖರು ಇದ್ದರು.