ಜೂ. 1ರಿಂದ ಆ. 31, 2026ರ ವರೆಗೆ ಎಲ್ಲ ರೀತಿಯ ಜಲಸಾಹಸ ಕ್ರೀಡೆ ಹಾಗೂ ನೀರು ಆಧಾರಿತ ಮನರಂಜನಾ ಚಟುವಟಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಲಕ್ಷ್ಮೀಪ್ರಿಯಾ ಕೆ. ಆದೇಶ ಹೊರಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರವಾರ

ಮುಂಬರುವ ನೈಋತ್ಯ ಮುಂಗಾರು ಮಳೆಗಾಲದ ಹಿನ್ನೆಲೆ ಪ್ರವಾಸಿಗರು ಹಾಗೂ ಸಾರ್ವಜನಿಕರ ಜೀವ ರಕ್ಷಣೆಯ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲಾದ್ಯಂತ ಜೂ. 1ರಿಂದ ಆ. 31, 2026ರ ವರೆಗೆ ಎಲ್ಲ ರೀತಿಯ ಜಲಸಾಹಸ ಕ್ರೀಡೆ ಹಾಗೂ ನೀರು ಆಧಾರಿತ ಮನರಂಜನಾ ಚಟುವಟಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಲಕ್ಷ್ಮೀಪ್ರಿಯಾ ಕೆ. ಆದೇಶ ಹೊರಡಿಸಿದ್ದಾರೆ.

ಮಳೆಗಾಲದ ಅವಧಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ನದಿಗಳಲ್ಲಿ ನೀರಿನ ಹರಿವು ದಿಢೀರನೆ ಹೆಚ್ಚಾಗುತ್ತದೆ. ಹಠಾತ್ ಪ್ರವಾಹ ಹಾಗೂ ಸಮುದ್ರದಲ್ಲಿ ಬಲವಾದ ಅಲೆಗಳು ಏಳುವುದರಿಂದ, ಪ್ರವಾಸಿಗರು ನೀರಿಗಿಳಿದರೆ ಪ್ರಾಣಹಾನಿ ಸಂಭವಿಸುವ ತೀವ್ರ ಅಪಾಯವಿರುತ್ತದೆ. ಈ ಹಿನ್ನೆಲೆ ಮೇ 13ರಂದು ನಡೆದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ, ಯಾವುದೇ ಅನಾಹುತಗಳನ್ನು ತಪ್ಪಿಸುವ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 33 ಮತ್ತು 34ರ ಅನ್ವಯ ಕಾಳಿ ಸೇರಿದಂತೆ ಜಿಲ್ಲೆಯ ನದಿಗಳಲ್ಲಿ ನಡೆಯುವ ರಿವರ್‌ರ್‍ಯಾಫ್ಟಿಂಗ್, ನದಿ, ಜಲಾಶಯ, ಹಿನ್ನೀರು, ಅಳಿವೆ ಹಾಗೂ ಇತರ ಒಳನಾಡು ಜಲಮೂಲಗಳಲ್ಲಿ ಬೋಟಿಂಗ್, ಸಮುದ್ರದಲ್ಲಿ ನಡೆಯುವ ಜೆಟ್ ಸ್ಕೀಯಿಂಗ್, ಕಯಾಕಿಂಗ್, ಬನಾನಾ ರೈಡ್, ಪ್ಯಾರಾಸೈಲಿಂಗ್, ಸ್ಪೀಡ್ ಬೋಟ್ ರೈಡ್‌ನಂತಹ ಕ್ರೀಡೆಗಳು, ಸ್ಕೂಬಾ ಡೈವಿಂಗ್ ಮತ್ತು ಅದಕ್ಕೆ ಸಂಬಂಧಿಸಿದ ನೀರಿನೊಳಗಿನ ಸಾಹಸ ಚಟುವಟಿಕೆ ಹಾಗೂ ಕರಾವಳಿ ಪ್ರದೇಶಗಳಲ್ಲಿ ನಡೆಯುವ ಎಲ್ಲ ಸಮುದ್ರಾಧಾರಿತ ಪ್ರವಾಸೋದ್ಯಮ ಮತ್ತು ಮನರಂಜನಾ ಆಟಗಳನ್ನು ಮುಂದಿನ ಮೂರು ತಿಂಗಳ ಕಾಲ ನಿರ್ಬಂಧಿಸಲಾಗಿದೆ.

ಜಿಲ್ಲಾಡಳಿತದ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲೆಯ ಎಲ್ಲ ಸಹಾಯಕ ಆಯುಕ್ತರು, ತಹಸೀಲ್ದಾರ್‌ಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಪ್ರವಾಸೋದ್ಯಮ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಿಗೆ ಖಡಕ್ ಸೂಚನೆ ನೀಡಲಾಗಿದೆ.

ಒಂದು ವೇಳೆ ಆದೇಶವನ್ನು ಉಲ್ಲಂಘಿಸಿ ಪ್ರವಾಸಿಗರನ್ನು ನೀರಿಗಿಳಿಸುವ ಪ್ರವಾಸೋದ್ಯಮ ಸೇವಾ ಪೂರೈಕೆದಾರರು, ಏಜೆನ್ಸಿಗಳು ಅಥವಾ ಯಾವುದೇ ವ್ಯಕ್ತಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51ರಿಂದ 60ರ ಅಡಿಯಲ್ಲಿ ಹಾಗೂ ಇತರ ಕಾನೂನುಗಳನ್ವಯ ನಿರ್ದಾಕ್ಷಿಣ್ಯ ಹಾಗೂ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.