ಕನ್ನಡಪ್ರಭ ವಾರ್ತೆ ಹಿರಿಯೂರು

ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ಜಲಸಾಹಸ ಕ್ರೀಡೆಗಳು ತುಂಬಾ ಸಹಕಾರಿ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್.ಸಿಂಧ್ಯಾ ಹೇಳಿದರು.

ಜನರಲ್ ತಿಮ್ಮಯ್ಯ ಸಾಹಸ ಅಕಾಡಮಿ ಮತ್ತು ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದೊಂದಿಗೆ ತಾಲೂಕಿನ ವಾಣಿ ವಿಲಾಸ ಸಾಗರದಲ್ಲಿ ರೋವರ್ಸ್ ಮತ್ತು ರೇಂಜರ್ಸ್‍ಗಳಿಗೆ ಏರ್ಪಡಿಸಲಾಗಿದ್ದ ಜಲ ಸಾಹಸ ಕ್ರೀಡಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಕೃತಿ ಸೌಂದರ್ಯವನ್ನು ಅನುಭವಿಸುತ್ತ ಧೈರ್ಯ, ಆತ್ಮ ವಿಶ್ವಾಸವನ್ನು ವಿದ್ಯಾರ್ಥಿಗಳು ಹೆಚ್ಚಿಸಿಕೊಳ್ಳಬೇಕು. ನೀರು ಕೇವಲ ಜೀವನದ ಮೂಲಾಧಾರವಲ್ಲ. ಅದು ಒಂದು ಬಗೆಯ ಸಾಹಸ ಮತ್ತು ಉತ್ಸಾಹ. ಯುವ ಜನಾಂಗದಲ್ಲಿ ಅತ್ಯಂತ ಜನಪ್ರಿಯತೆ ಗಳಿಸುತ್ತಿರುವ ಜಲಸಾಹಸ ಕ್ರೀಡೆ ಇಂದಿನ ದಿನಗಳಲ್ಲಿ ಅತ್ಯಗತ್ಯವಾದುದು ಎಂದರು.

ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ, ಡಿಡಿಪಿಐ ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳು ಜಲಸಾಹಸದಲ್ಲಿ ತೊಡಗುವಾಗ ಸುರಕ್ಷತೆ ಕಡೆ ಹೆಚ್ಚಿನ ಗಮನ ಕೊಡಬೇಕು. ಶಾಲೆಯ ಪಠ್ಯಗಳಲ್ಲಿ ಸಿಗದಂತ ಅನುಭವ ಪಠ್ಯೇತರ ಚಟುವಟಿಕೆಗಳಲ್ಲಿ ದೊರಕುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರೂ ನೀಟ್ ಪರೀಕ್ಷೆಗೆ ಓದುತ್ತಾರೆ. ಆದರೆ ನೀಟಾಗಿ ಬದುಕುವ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಯುವ ಪೀಳಿಗೆಗೆ ಇಂತಹ ಕ್ರೀಡೆಗಳು ಅತಿ ಮುಖ್ಯ ಎಂದರು.


ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಪ್ರತಿಯೊಬ್ಬರು ಧೈರ್ಯವನ್ನು ಹೆಚ್ಚಿಸಿಕೊಂಡಾಗ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಈಜು ತಜ್ಞರ ಮಾರ್ಗದರ್ಶನದಲ್ಲಿ ಜಲ ಸಾಹಸ ಕ್ರೀಡೆಯ ತರಬೇತಿ ಪಡೆದಾಗ ಅತ್ಯುತ್ತಮ ಅನುಭವವಾಗುತ್ತದೆ. ಜಿಲ್ಲೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಲ ಸಾಹಸ ಕ್ರೀಡಾ ತರಬೇತಿಯಲ್ಲಿ ಪಾಲ್ಗೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಹಿರಿಯೂರು ಮಹಮದ್ ಮೊಹಸಿನ್, ದೀಪಿಕ, ಯೋಗರಾಜ್, ಪಿ.ವೈ.ದೇವರಾಜ್‍ಪ್ರಸಾದ್, ಕೆ.ಬಿ.ಮಲ್ಲೇಶಪ್ಪ ಮುಂತಾದವರು ಹಾಜರಿದ್ದರು.