ಶುದ್ಧ ಕುಡಿಯುವ ನೀರನ್ನು ಜನಸಾಮಾನ್ಯರಿಗೆ ಪೂರೈಸುವುದು ನಮ್ಮ ಜವಾಬ್ದಾರಿ ಹಾಗೂ ಕರ್ತವ್ಯವೂ ಆಗಿದೆ. ಅದಕ್ಕಾಗಿ ಗ್ರಾಮಾಂತರ ಭಾಗದಲ್ಲಿ ನೀರು ಪೂರೈಸುವ ಜವಾಬ್ದಾರಿ ಹೊಂದಿರುವವವರು ಗಂಭೀರತೆಯಿಂದ ಸೇವೆ ಸಲ್ಲಿಸುವ ಅವಶ್ಯಕತೆಯಿದೆ.

ಕನ್ನಡಪ್ರಭ ವಾರ್ತೆ ಹಳಿಯಾಳ

ಶುದ್ಧ ಕುಡಿಯುವ ನೀರನ್ನು ಜನಸಾಮಾನ್ಯರಿಗೆ ಪೂರೈಸುವುದು ನಮ್ಮ ಜವಾಬ್ದಾರಿ ಹಾಗೂ ಕರ್ತವ್ಯವೂ ಆಗಿದೆ. ಅದಕ್ಕಾಗಿ ಗ್ರಾಮಾಂತರ ಭಾಗದಲ್ಲಿ ನೀರು ಪೂರೈಸುವ ಜವಾಬ್ದಾರಿ ಹೊಂದಿರುವವವರು ಗಂಭೀರತೆಯಿಂದ ಸೇವೆ ಸಲ್ಲಿಸುವ ಅವಶ್ಯಕತೆಯಿದೆ. ನಮ್ಮ ಜವಾಬ್ದಾರಿಯ ಮೇಲೆ ನಾವು ತೋರುವ ನಿಷ್ಕಾಳಜಿ ನಾಳೇ ಹಲವರ ಬದುಕಿಗೆ ಕುತ್ತು ತರಬಹುದು ಎಂಬುವುದನ್ನು ಮರೆಯಬಾರದು ಎಂದು ಹಳಿಯಾಳ ತಾಪಂ ಇಒ ವಿಲಾಸರಾಜ್ ಪ್ರಸನ್ನ್ ಎಚ್ಚರಿಸಿದರು.

ಗುರುವಾರ ಹಳಿಯಾಳ ತಾಪಂ ಸಭಾಂಗಣದಲ್ಲಿ ಜಿಪಂ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮತ್ತು ಜಿಲ್ಲಾ ಪ್ರಯೋಗಾಲಯ ಸಹಯೋಗದಲ್ಲಿ ನಡೆದ ನೀರಿನ ಫೀಲ್ಡ್ ಟೆಸ್ಟ್ ಕಿಟ್(ಎಫ್.ಟಿ.ಕೆ) ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಿಬ್ಬಂದಿ ತಮಗೆ ಒದಗಿಸಿದ ಕಿಟ್‌ಗಳ ಮೂಲಕ ನೀರಿನ ಗುಣಮಟ್ಟ ಪರಿಶೀಲನೆ ಮಾಡಬೇಕು. ಈ ಪರಿಶೀಲನೆಯ ಸಮಯದಲ್ಲಿ ಯಾವುದೇ ಅಸಮಾನ್ಯತೆ ಅಥವಾ ಬದಲಾವಣೆಗಳು ಕಂಡು ಬಂದಲ್ಲಿ ತಕ್ಷಣ ಆ ನೀರಿನ ಮಾದರಿಯನ್ನು ಗ್ರಾಪಂ ಮುಖಾಂತರ ತಾಲೂಕು ಪ್ರಯೋಗಾಲಯಕ್ಕೆ ಕಳಿಸಿ ಹೆಚ್ಚಿನ ಪರಿಶೀಲನೆ ನಡೆಸಬೇಕೆಂದರು. ನೀರಿನಲ್ಲಿ ಖನಿಜಾಂಶಗಳ ಕೊರತೆಯಾಗಲಿ ಅಥವಾ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿದ್ದರೂ ಅಂತಹ ನೀರಿನ ಸೇವನೆಯಿಂದ ಸಾರ್ವಜನಿಕರ ಆರೋಗ್ಯ ಮೇಲೆ ದುಷ್ಪರಿಣಾಮ ಬೀರವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಎಂಜಿನಿಯರ್ ಸಂಜೀವಕುಮಾರ ಬಿರಾದಾರ್ ಮಾತನಾಡಿ, ಕೊಳಚೆ ಹೊಂಡಗಳ ನೀರು ಬಾವಿಯನ್ನು ಸೇರಿ ಕುಲುಷಿತಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮನೆ ಭೇಟಿಯ ಸಂದರ್ಭದಲ್ಲೂ ಖಾಸಗಿ ಬಾವಿ, ಕೆರೆಗಳ ನೀರನ್ನು ಪರಿಶೀಲನೆ ನಡೆಸಲು ಹೇಳಬೇಕೆಂದರು.

ಕಾರ್ಯಾಗಾರದಲ್ಲಿ ತಾಲೂಕಿನ ಗ್ರಾಮೀಣ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ತಾಪಂ ಅಧಿಕಾರಿಗಳು, ಸಿಬ್ಬಂದಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯ ಸದಸ್ಯರು, ಡಾಟಾ ಎಂಟ್ರಿ ಆಪರೇಟರ್‌ಗಳು, ವಾಟರ್‌ಮನ್‌ ಹಾಗೂ ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.