₹351 ಕೋಟಿ ವೆಚ್ಚದ ನೀರು ಪೂರೈಕೆ ಯೋಜನೆಗೆ ಅಸ್ತು: ಸಚಿವ ಶಿವಾನಂದ ಪಾಟೀಲ

| Published : Sep 12 2025, 12:06 AM IST

₹351 ಕೋಟಿ ವೆಚ್ಚದ ನೀರು ಪೂರೈಕೆ ಯೋಜನೆಗೆ ಅಸ್ತು: ಸಚಿವ ಶಿವಾನಂದ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ವರದಾ ನದಿ ಬತ್ತಿ ಬೇಸಿಗೆ ದಿನಗಳಲ್ಲಿ ಉದ್ಭವಿಸುವ ಕುಡಿಯುವ ನೀರಿನ ಸಮಸ್ಯೆಗೆ ಈ ಯೋಜನೆಗಳ ಅನುಷ್ಠಾನದಿಂದ ಶಾಶ್ವತ ಪರಿಹಾರ ಸಿಗಲಿದೆ. ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಪರಿಹಾರ ದೃಷ್ಟಿಯಲ್ಲಿ ಇದು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.

ಹಾವೇರಿ: ಸವಣೂರು, ಶಿಗ್ಗಾಂವಿ ಮತ್ತು ಬಂಕಾಪುರ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆಯ ₹351.23 ಕೋಟಿ ಅಂದಾಜು ವೆಚ್ಚದ ಕೆರೆ ಅಭಿವೃದ್ಧಿಯ ಮೂರು ಯೋಜನೆಗಳಿಗೆ ಸಚಿವ ಸಂಪುಟ ಅಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು, ಸವಣೂರು ಪಟ್ಟಣಕ್ಕೆ ನೀರು ಪೂರೈಕೆ ಮಾಡಲು ₹153.20 ಕೋಟಿ ವೆಚ್ಚದಲ್ಲಿ ಮೋತಿ ತಲಾಬ ಕೆರೆ ಸುಧಾರಣಾ ಕಾಮಗಾರಿ, ಶಿಗ್ಗಾಂವಿಗೆ ನೀರು ಪೂರೈಕೆ ಮಾಡಲು ₹105.19 ಕೋಟಿ ವೆಚ್ಚದಲ್ಲಿ ನಾಗನೂರು ಕೆರೆ ಅಭಿವೃದ್ಧಿ ಹಾಗೂ ಬಂಕಾಪುರ ಪಟ್ಟಣಕ್ಕೆ ನೀರು ಪೂರೈಕೆ ಮಾಡಲು ₹92.84 ಕೋಟಿ ವೆಚ್ಚದಲ್ಲಿ ತೆವರಮಳ್ಳಿಹಳ್ಳಿ ಕೆರೆ ಸುಧಾರಣಾ ಯೋಜನೆಗಳಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ವರದಾ ನದಿ ಬತ್ತಿ ಬೇಸಿಗೆ ದಿನಗಳಲ್ಲಿ ಉದ್ಭವಿಸುವ ಕುಡಿಯುವ ನೀರಿನ ಸಮಸ್ಯೆಗೆ ಈ ಯೋಜನೆಗಳ ಅನುಷ್ಠಾನದಿಂದ ಶಾಶ್ವತ ಪರಿಹಾರ ಸಿಗಲಿದೆ. ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಪರಿಹಾರ ದೃಷ್ಟಿಯಲ್ಲಿ ಇದು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.ಸವಣೂರು ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ₹71.15 ಕೋಟಿ ವೆಚ್ಚದ ಪರಿಷ್ಕೃತ ಅಂದಾಜಿಗೆ 2014ರ ಜೂ. 10ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಬೇಸಿಗೆ ದಿನಗಳಲ್ಲಿ ವರದಾ ನದಿ ಬತ್ತಿ ಹೋಗುವುದರಿಂದ ಈ ಅವಧಿಯ ಐದು ತಿಂಗಳು ಉದ್ಭವಿಸುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮೋತಿ ತಲಾಬ್ ಕೆರೆಯಲ್ಲಿ ವರದಾ ನದಿಯಿಂದ ನೀರು ಸಂಗ್ರಹ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ ನೀರಾವರಿ ಇಲಾಖೆಯಿಂದ ಜಾಗ ಹಸ್ತಾಂತರವಾಗದ ಕಾರಣ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.ಅಮೃತ 2.0 ಯೋಜನೆಯಲ್ಲಿ ಸವಣೂರು ಪಟ್ಟಣದಲ್ಲಿ ₹47.43 ಕೋಟಿ ವೆಚ್ಚದಲ್ಲಿ ವಿತರಣಾ ಜಾಲ ಮತ್ತು ಗೃಹ ಸಂಪರ್ಕ ಜೋಡಣೆ, ಮೇಲ್ಮಟ್ಟದ ಜಲಸಂಗ್ರಹಾಗಾರಗಳು, ಶುದ್ಧೀಕರಣ ಘಟಕದ ನವೀಕರಣ, ಮೋತಿ ತಲಾಬ್ ಕೆರೆಯಲ್ಲಿ ಜಾಕ್‌ವೆಲ್ ಮತ್ತು ಪಂಪಿಂಗ್ ಮಿಷನರಿ ಕಾಮಗಾರಿ ಕೈಗೊಳ್ಳಲಾಗಿದ್ದು, ಪ್ರಗತಿಯಲ್ಲಿದೆ. ಪ್ರಸ್ತುತ 2025- 26ನೇ ಏಕರೂಪದ ದರಪಟ್ಟಿಯಂತೆ ತಲಾಬ ಕೆರೆ ಅಭಿವೃದ್ಧಿಗೆ ₹159.50 ಕೋಟಿ ಅಂದಾಜು ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ತಿಳಿಸಿದ್ದಾರೆ. ಯುಐಡಿಎಸ್‌ಎಸ್ ಎಂಟಿ ಅನುದಾನದಲ್ಲಿ ಶಿಗ್ಗಾಂವಿ ಪಟ್ಟಣಕ್ಕೆ ವರದಾ ನದಿಯಿಂದ ನೀರು ಪೂರೈಕೆ ಮಾಡಲು ಈ ಹಿಂದೆ ₹39.75 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿತ್ತು. ಪ್ರಸ್ತುತ ಯುಐಡಿಎಸ್‌ಎಸ್ ಎಂಟಿ ಯೋಜನೆಯಲ್ಲಿ ಅನುದಾನ ಲಭ್ಯ ಇರುವುದಿಲ್ಲ. ಅಮೃತ 2.0 ಯೋಜನೆಯಲ್ಲಿ ಶಿಗ್ಗಾಂವಿಗೆ ನೀರು ಪೂರೈಕೆ ವಿತರಣಾ ಜಾಲ ಅಳವಡಿಸಲು ₹65.31 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 2025- 26ನೇ ಸಾಲಿನ ಏಕರೂಪ ದರಪಟ್ಟಿಯಂತೆ ಶಿಗ್ಗಾವಿಗೆ ನೀರು ಪೂರೈಕೆ ಮಾಡಲು ನಾಗನೂರು ಕೆರೆ ಅಭಿವೃದ್ಧಿಗೆ ₹109.50 ಕೋಟಿ ಅಂದಾಜು ವೆಚ್ಚದ ಯೋಜನೆ ರೂಪಿಸಲಾಗಿದ್ದು, ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ.

ಬಂಕಾಪುರಕ್ಕೆ ಯುಐಡಿಎಸ್‌ಎಸ್ ಎಂಟಿ ಅನುದಾನದಲ್ಲಿ ವರದಾ ನದಿಯಿಂದ ನೀರು ಪೂರೈಕೆ ಮಾಡಲು ರೂಪಿಸಲಾಗಿದ್ದ ಯೋಜನೆಯನ್ನು 2014ರಲ್ಲಿ ₹71.15 ಕೋಟಿ ಅಂದಾಜು ವೆಚ್ಚಕ್ಕೆ ಪರಿಷ್ಕರಿಸಲಾಗಿದ್ದು, ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿತ್ತು. ಬೇಸಿಗೆ ದಿನಗಳಲ್ಲಿ ನದಿ ನೀರು ಬತ್ತಿ ಹೋಗುವುದರಿಂದ ಈ ದಿನಗಳಲ್ಲಿನ ನೀರಿನ ಸಮಸ್ಯೆ ಪರಿಹಾರಕ್ಕೆ ತೆವರಮಳ್ಳಿಹಳ್ಳಿ ಕೆರೆಯಲ್ಲಿ ನೀರು ಸಂಗ್ರಹಿಸಲು ಯೋಜನೆಯನ್ನು ವಿನ್ಯಾಸಗೊಳಿಸಲಾಗಿತ್ತು. ಈ ಕಾಮಗಾರಿಗೆ ₹11.68 ಕೋಟಿ ಅವಕಾಶ ಕಲ್ಪಿಸಲಾಗಿತ್ತು. ಈ ಯೋಜನೆಗೂ ನೀರಾವರಿ ಇಲಾಖೆ ಜಾಗ ಹಸ್ತಾಂತರ ಮಾಡದೆ ಕೆರೆ ಅಭಿವೃದ್ಧಿ ಸಾಧ್ಯವಾಗಿರಲಿಲ್ಲ.ಅಮೃತ 2.0 ಯೋಜನೆಯಲ್ಲಿ ₹44.53 ಕೋಟಿ ವೆಚ್ಚದಲ್ಲಿ ಬಂಕಾಪುರ ಪಟ್ಟಣದಲ್ಲಿ ವಿತರಣಾ ಜಾಲ ಮತ್ತುಗೃಹ ಸಂಪರ್ಕ ಜೋಡಣೆ, ಮೇಲ್ಮಟ್ಟದ ಜಲಸಂಗ್ರಹಾಗಾರ, ಶುದ್ಧೀಕರಣ ಘಟಕದ ನವೀಕರಣ, ತೆವರಮೆಳ್ಳಿಹಳ್ಳಿ ಕೆರೆಯಲ್ಲಿ ಹೌಸಿಂಗ್ ಚೇಂಬರ್ ಹಾಗೂ ಪಂಪಿಂಗ್ ಮಶಿನರಿ ಅಳವಡಿಸುವ ಕಾಮಗಾರಿ ಕೈಗೊಂಡಿದ್ದು, ಪ್ರಗತಿಯಲ್ಲಿವೆ. ಈಗ ತೆವರಮಳ್ಳಿಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಗೆ ₹96.75 ಕೋಟಿ ಅಂದಾಜು ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ಸಚಿವರು ತಿಳಿಸಿದ್ದಾರೆ.