ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯ ಮೂಲಕ ತಿಕೋಟಾ ತಾಲೂಕಿನ ಕೆರೆ ಮತ್ತು ಬಾಂದಾರುಗಳಿಗೆ ನೀರು ಬಿಡುಗಡೆ ಮಾಡಲಾಗಿದ್ದು, ಪೋಲಾಗದಂತೆ ಮತ್ತು ಕುಡಿಯಲು ಮಾತ್ರ ಬಳಸುವಂತೆ ಸಚಿವ ಎಂ.ಬಿ.ಪಾಟೀಲ ರೈತರಿಗೆ ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯ ಮೂಲಕ ತಿಕೋಟಾ ತಾಲೂಕಿನ ಕೆರೆ ಮತ್ತು ಬಾಂದಾರುಗಳಿಗೆ ನೀರು ಬಿಡುಗಡೆ ಮಾಡಲಾಗಿದ್ದು, ಪೋಲಾಗದಂತೆ ಮತ್ತು ಕುಡಿಯಲು ಮಾತ್ರ ಬಳಸುವಂತೆ ಸಚಿವ ಎಂ.ಬಿ.ಪಾಟೀಲ ರೈತರಿಗೆ ಮನವಿ ಮಾಡಿದ್ದಾರೆ.ತಿಕೋಟಾ ತಾಲೂಕಿನಲ್ಲಿ ಪ್ರಸಕ್ತ ವರ್ಷದಲ್ಲಿ ಜನ- ಜಾನುವಾರುಗಳಿಗೆ ಕುಡಿಯಲು ನೀರು ಪೂರೈಸುವ ಸಲುವಾಗಿ ಕೆರೆಗಳಿಗೆ ನೀರು ತುಂಬಿಸಲು 2025 ನ.14ರಂದು ನಡೆದ ನೀರಾವರಿ ಸಲಹಾ ಸಮತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆ ಈ ಭಾಗಕ್ಕೆ ಹಂಚಿಕೆಯಾದ 0.75 ಟಿಎಂಸಿ ನೀರನ್ನು ಯೋಜನೆಯ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ಕೂಡಲೇ ಬಿಡುಗಡೆ ಮಾಡುವಂತೆ ಡಿ.24ರಂದು ಬೆಳಗಾವಿ ಉತ್ತರ ವಲಯದ ಕರ್ನಾಟಕ ನೀರಾವರಿ ನಿಗಮ ನಿಯಮಿತ ಮುಖ್ಯ ಅಭಿಯಂತರರಿಗೆ ಪತ್ರ ಬರೆಯಲಾಗಿತ್ತು. ಸದ್ಯ ಪಂಪ್‌ಗಳನ್ನು ಪ್ರಾರಂಭ ಮಾಡುವ ಮೂಲಕ ಅಧಿಕಾರಿಗಳು ನೀರು ಬಿಡುಗಡೆ ಮಾಡಿದ್ದಾರೆ. ಇದರಿಂದ ತಿಕೋಟಾ ತಾಲೂಕಿನ ಸುಮಾರು 25 ಕೆರೆ ಮತ್ತು 60 ಬಾಂದಾರುಗಳಿಗೆ ನೀರು ಬರಲಿದ್ದು, 21 ಗ್ರಾಮಗಳ ನೀರಿನ ಸಮಸ್ಯೆ ನೀಗಲಿದೆ. ನೀರು ಕಾಲುವೆಯಲ್ಲಿ ಸರಾಗವಾಗಿ ಹರಿಯಲು ರೈತರು ಸಹಕರಿಸಬೇಕು. ಜನ ಮತ್ತು ಜಾನುವಾರಗಳಿಗೆ ಕುಡಿಯಲು ಮಾತ್ರ ಬಳಸಬೇಕು. ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ಈಗ ನೀರು ಬಿಡುಗಡೆ ಮಾಡಿರುವುದರಿಂದ ಈ ಯೋಜನೆಯ ವ್ಯಾಪ್ತಿಯ ಜಮಖಂಡಿ ತಾಲೂಕಿನ ಮೂರು ಮತ್ತು ಅಥಣಿ ತಾಲೂಕಿನ ನಾಲ್ಕು ಗ್ರಾಮಗಳಿಗೂ ನೀರು ಸಿಗಲಿದೆ ಎಂದು ಸಚಿವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
