ಬಬಲೇಶ್ವರ ತಾಲೂಕಿನ ಮುಳವಾಡ ಏತನೀರಾವರಿ ಯೋಜನೆಯಡಿಯ ಮಲಘಾಣ ಪಶ್ಚಿಮ ಕಾಲುವೆ ಕೆಳಭಾಗದಲ್ಲಿ ರಂಧ್ರ ಕೊರೆದು (ಸೈಫನ್ ಹೊಡೆದು) ನೀರು ಕಳ್ಳತನ ಮಾಡುತ್ತಿದ್ದ 30 ಪ್ರಕರಣಗಳನ್ನು ಕೆಬಿಜೆಎನ್ಎಲ್ ಅಧಿಕಾರಿಗಳು ಭೇದಿಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮದ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಬಬಲೇಶ್ವರ ತಾಲೂಕಿನ ಮುಳವಾಡ ಏತನೀರಾವರಿ ಯೋಜನೆಯಡಿಯ ಮಲಘಾಣ ಪಶ್ಚಿಮ ಕಾಲುವೆ ಕೆಳಭಾಗದಲ್ಲಿ ರಂಧ್ರ ಕೊರೆದು (ಸೈಫನ್ ಹೊಡೆದು) ನೀರು ಕಳ್ಳತನ ಮಾಡುತ್ತಿದ್ದ 30 ಪ್ರಕರಣಗಳನ್ನು ಕೆಬಿಜೆಎನ್ಎಲ್ ಅಧಿಕಾರಿಗಳು ಭೇದಿಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮದ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಮಲಘಾಣ ಪಶ್ಚಿಮ ಕಾಲುವೆ ಒಟ್ಟು 118.60 ಕಿ.ಮೀ. ಉದ್ದವಿದ್ದು, ಈ ಕಾಲುವೆಯ 100 ಕಿ.ಮೀ.ವರೆಗೆ ಮಾತ್ರ ನೀರು ಬರುತ್ತಿತ್ತು. ಆದರೆ ಕಾಲುವೆ ಕೊನೆಯವರೆಗೆ ನೀರು ತಲುಪುತ್ತಿರಲಿಲ್ಲ. ಈ ಕುರಿತು ಕೆಬಿಜೆಎನ್ಎಲ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಬಬಲೇಶ್ವರ ತಾಲೂಕಿನ ಯಕ್ಕುಂಡಿ, ಹೊಕ್ಕುಂಡಿ, ಅರ್ಜುಣಗಿ, ಹೆಬ್ಬಾಳಟ್ಟಿ ವ್ಯಾಪ್ತಿಯಲ್ಲಿ ಸುಮಾರು 30 ಕಡೆಗಳಲ್ಲಿ ಕಾಲುವೆ ಬುಡದಲ್ಲಿ ರಂದ್ರ ಕೊರೆದು ಪೈಪ್‌ಗಳನ್ನು ಅಳವಡಿಸಿ ಅಕ್ರಮವಾಗಿ ನೀರು ಪಡೆಯುತ್ತಿರುವುದು ಪತ್ತೆಯಾಗಿದೆ. ಇತ್ತೀಚೆಗೆ ಕಾಲುವೆ ಕೊನೆಯ ಭಾಗಕ್ಕೆ ನೀರು ಹರಿಸುವಂತೆ ರೈತರು ಅರ್ಜುಣಗಿಯಲ್ಲಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಧರಣಿಯಲ್ಲಿದ್ದವರೇ ಕೆಲವರು ಇದೇ ಕಾಲುವೆಯಲ್ಲಿ ಸೈಫನ್ ಹೊಡೆದು ನೀರು ಕಳ್ಳತನ ಮಾಡಿರುವುದು ಅಧಿಕಾರಿಗಳ ತನಿಖೆಯಲ್ಲಿ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ನೀರು ಕಳ್ಳತನ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೆಬಿಜೆಎನ್ಎಲ್ ಬಬಲೇಶ್ವರ ವಿಭಾಗದ ಎಕ್ಸಿಕ್ಯೂಟಿವ್ ಎಂಜಿನಿಯರ್ ರಾಜೇಂದ್ರ ರೂಡಗಿ ಮಾಹಿತಿ ನೀಡಿದ್ದಾರೆ.