ಹೇಮಾವತಿ ಬಲಮೇಲ್ದಂಡೆ ನಾಲೆಗೆ ನೀರು

| Published : Jul 20 2025, 01:15 AM IST

ಸಾರಾಂಶ

ಹೇಮಾವತಿ ಬಲಮೇಲ್ದಂಡೆ ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು ನಾಲಾ ಅಚ್ಚುಕಟ್ಟು ಪ್ರದೇಶದ ರೈತರು ನೀರನ್ನು ಬಳಸಿಕೊಂಡು ಉತ್ತಮ ಬೆಳೆ ಬೆಳೆದು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳುವಂತೆ ಶಾಸಕ ಎ.ಮಂಜು ತಿಳಿಸಿದರು. ನಾಲಾ ವ್ಯಾಪ್ತಿಯಲ್ಲಿ 210 ಕೆರೆಗಳನ್ನು ಭರ್ತಿಮಾಡಲಾಗುತ್ತಿದೆ. ಹೇಮಾವತಿ ಜಲಾಶಯ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲ್ ಅವರ ಶ್ರಮ ಕಾರಣವಾಗಿದ್ದು ಜಲಾಶಯದ ಮುಂಭಾಗ ಇವರ ಪುತ್ಥಳಿ ಸ್ಥಾಪಿಸಬೇಕು ಎಂಬುದು ತಮ್ಮ ಬಹುದಿನಗಳ ಆಶಯವಾಗಿದೆ. ತಾವು ಸಚಿವನಾಗಿದ್ದಾಗ ಈ ಪ್ರಯತ್ನ ನಡೆಸಿದ್ದೆ, ಆದರೆ ಕೆಲವರು ಇದಕ್ಕೆ ತಡೆಯೊಡ್ಡಿದರು, ನಂಜೇಗೌಡರ ಪ್ರಯತ್ನದ ಫಲವಾಗಿ ಬಲಮೇಲ್ದಂಡೆ ನಾಲೆ ರೂಪುಗೊಂಡಿದೆ ಎಂದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಹೇಮಾವತಿ ಬಲಮೇಲ್ದಂಡೆ ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು ನಾಲಾ ಅಚ್ಚುಕಟ್ಟು ಪ್ರದೇಶದ ರೈತರು ನೀರನ್ನು ಬಳಸಿಕೊಂಡು ಉತ್ತಮ ಬೆಳೆ ಬೆಳೆದು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳುವಂತೆ ಶಾಸಕ ಎ.ಮಂಜು ತಿಳಿಸಿದರು.

ತಾಲೂಕಿನ ಅರೇಮಾದನಹಳ್ಳಿ ಗ್ರಾಮದ ಬಳಿ ಶನಿವಾರ ನೀರು ಹರಿಸುವ ಕಾರ್ಯಕ್ಕೆ ಚಾಲನೆ ಮಾಡಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿ, ಎರಡು ದಿನಗಳ ಹಿಂದೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರು ಹರಿಸಲು ನಿರ್ಣಯ ಕೈಗೊಳ್ಳಲಾಗಿದೆ. ಬಲಮೇಲ್ದಂಡೆ ನಾಲೆ 56 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ತಾಲೂಕಿನಲ್ಲಿ 12430 ಎಕರೆ, ಹೊಳೆನರಸೀಪುರ 28200 ಎಕರೆ, ಕೆ.ಆರ್‌. ನಗರ 10700 ಎಕರೆ, ಕೆ.ಆರ್‌.ಪೇಟೆ ತಾಲೂಕಲ್ಲಿ 4670 ಎಕರೆ ಪ್ರದೇಶಗಳಿಗೆ ನೀರು ಹರಿಸಲಾಗುತ್ತಿದ್ದು ಇದರಲ್ಲಿ 6 ಸಾವಿರ ಎಕರೆಭತ್ತ ಹಾಗೂ 50 ಸಾವಿರ ಎಕರೆ ಪ್ರದೇಶದ ಅರೇ ನೀರಾವರಿ ಬೆಳೆಗಳಿಗೆ ನೀರನ್ನು ಒದಗಿಸಲಾಗುತ್ತಿದೆ ಎಂದರು.

ನಾಲಾ ವ್ಯಾಪ್ತಿಯಲ್ಲಿ 210 ಕೆರೆಗಳನ್ನು ಭರ್ತಿಮಾಡಲಾಗುತ್ತಿದೆ. ಹೇಮಾವತಿ ಜಲಾಶಯ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲ್ ಅವರ ಶ್ರಮ ಕಾರಣವಾಗಿದ್ದು ಜಲಾಶಯದ ಮುಂಭಾಗ ಇವರ ಪುತ್ಥಳಿ ಸ್ಥಾಪಿಸಬೇಕು ಎಂಬುದು ತಮ್ಮ ಬಹುದಿನಗಳ ಆಶಯವಾಗಿದೆ. ತಾವು ಸಚಿವನಾಗಿದ್ದಾಗ ಈ ಪ್ರಯತ್ನ ನಡೆಸಿದ್ದೆ, ಆದರೆ ಕೆಲವರು ಇದಕ್ಕೆ ತಡೆಯೊಡ್ಡಿದರು, ನಂಜೇಗೌಡರ ಪ್ರಯತ್ನದ ಫಲವಾಗಿ ಬಲಮೇಲ್ದಂಡೆ ನಾಲೆ ರೂಪುಗೊಂಡಿದೆ ಎಂದರು. ಎಂಜಿನಿಯರ್‌ಗಳಾದ ಸಿದ್ದರಾಜು, ಮಹೇಂದ್ರ, ರಾಜೇಶ್, ರವಿಕುಮಾರ್ ಸಂದರ್ಶ್, ಮುಖಂಡರಾದ ನರಸೇಗೌಡ, ವೆಂಕಟೇಶ್, ಗಾಂಧಿನಗರ ದಿವಾಕರ್, ಕೃಷ್ಣೇಗೌಡ, ಕುಮಾರಸ್ವಾಮಿ ಉಪಸ್ಥಿತರಿದ್ದರು.