ಸಾರಾಂಶ
ತುಂಗಭದ್ರಾ ಜಲಾಯಶಯದಲ್ಲಿ ಪ್ರಸ್ತುತ 53 ಟಿಎಂಸಿ ನೀರಿನ ಲಭ್ಯತೆ ಇದೆ. ಮಿತ ಬಳಕೆ, ಕೆಲವೊಂದು ಕಾಲುವೆಗಳಿಗೆ ಕಡಿಮೆ ನೀರು ಪೂರೈಕೆ ಮಾಡುವ ಮೂಲಕ ಎಡದಂಡೆ ಮುಖ್ಯ ಕಾಲುವೆಗೆ 4100 ಕ್ಯೂಸೆಕ್‌ನಂತೆ ನ.30ರ ವರೆಗೆ ಅಥವಾ ನೀರಿನ ಲಭ್ಯತೆ ಆಧಾರದ ಮೇಲೆ ನೀರು ಹರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕನ್ನಡ-ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರೂ ಆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಕೊಪ್ಪಳ:
ತುಂಗಭದ್ರಾ ಜಲಾಯಶಯದಲ್ಲಿ ಪ್ರಸ್ತುತ 53 ಟಿಎಂಸಿ ನೀರಿನ ಲಭ್ಯತೆ ಇದೆ. ಮಿತ ಬಳಕೆ, ಕೆಲವೊಂದು ಕಾಲುವೆಗಳಿಗೆ ಕಡಿಮೆ ನೀರು ಪೂರೈಕೆ ಮಾಡುವ ಮೂಲಕ ಎಡದಂಡೆ ಮುಖ್ಯ ಕಾಲುವೆಗೆ 4100 ಕ್ಯೂಸೆಕ್‌ನಂತೆ ನ.30ರ ವರೆಗೆ ಅಥವಾ ನೀರಿನ ಲಭ್ಯತೆ ಆಧಾರದ ಮೇಲೆ ನೀರು ಹರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕನ್ನಡ-ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರೂ ಆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಹೇಳಿದ್ದಾರೆ.ಬೆಂಗಳೂರಿನ ವಿಕಾಸಸೌಧದಲ್ಲಿ ಗುರುವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ತುಂಗಭದ್ರಾ ಯೋಜನೆಯ ತುರ್ತು ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಮಾಹಿತಿ ನೀಡಿದರು.
ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ನ.10ರವರೆಗೆ 1000 ಕ್ಯೂಸೆಕ್ಸ್ ನಂತೆ ಜಲಾಶಯದ ನೀರಿನ ಮಟ್ಟ 1600 ಅಡಿ ತಲುಪುವವರೆಗೆ ಲಭ್ಯತೆ ಅನುಸಾರ ಮುಂಬರುವ ಒಳಹರಿವಿನ ಪರಿಗಣಿಸಿ ಮುಂದುವರೆಸಲಾಗುವುದು ಎಂದು ಹೇಳಿದರು.ಬಲದಂಡೆ ಕೆಳಮಟ್ಟದ ಕಾಲುವೆಗೆ ನ.30ರವರೆಗೆ 850 ಕ್ಯೂಸೆಕ್ ಬದಲಾಗಿ 750 ಕ್ಯೂಸೆಕ್‌ನಂತೆ ತುಂಗಭದ್ರಾ ಎಡದಂತೆ ಮೇಲ್ಮಟ್ಟದ ಕಾಲುವೆಗೆ ನ.30ವರೆಗೆ 23 ಕ್ಯೂಸೆಕ್‌ನಂತೆ ನೀರು ಹರಿಸಲಾಗುವುದು. ಉಳಿದಂತೆ ಇನ್ನು ರಾಯ ಬಸವಣ್ಣ ಕಾಲುವೆಗೆ ನ.30ರವರೆಗೆ ಒಟ್ಟು ಕೊರತೆ ಬೀಳುವ ನೀರು 0.109 ಟಿಎಂಸಿ ಆಗಲಿದೆ. ಪ್ರಸ್ತುತ ಕಾಲುವೆಯಲ್ಲಿ ಕಾಮಗಾರಿ ಕೈಗೊಳ್ಳುವುದರಿಂದ ಡಿ.10ರಿಂದ ಫೆ.10ರತನಕ ನೀರು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದರು.ಜಲಾಶಯದಲ್ಲಿ ನೀರಿನ ಸಂಗ್ರಹ ಲಭ್ಯತೆ ಹಾಗೂ ರೈತರಿಗೆ ಈ ಹಿಂದೆ ತಾವು ನೀಡಿದ್ದ ಭರವಸೆಯಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಸ್ತುತ ಡ್ಯಾಂನಲ್ಲಿ ಐದು ಟಿಎಂಸಿ ನೀರು ಕೊರತೆ ಇದ್ದು, ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದರು.ಆಂಧ್ರಕೋಟಾದಲ್ಲಿ ನೀಡಲಾಗುವ ನೀರನ್ನು ನಮಗೆ ಬಿಡುವಂತೆ ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು. ಈ ಹಿಂದೆ 2018ರಲ್ಲಿ ನೀರಿಗೆ ಸಮಸ್ಯೆಯಾದಾಗ ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿಕೊಂಡಾಗ ಅಲ್ಲಿನ ಸರ್ಕಾರ ಅವರ ಪಾಲಿನ ಒಂದು ಟಿಎಂಸಿ ನೀರು ನೀಡಿತ್ತು. ಪ್ರಸ್ತುತ ಅಲ್ಲಿನ ಸರ್ಕಾರಕ್ಕೆ ಇಲ್ಲಿನ ವಾಸ್ತವ ಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ವಿವರಿಸಿದರು.ರೈತರ ಹಿತ ಕಾಪಾಡಲು ಸರ್ಕಾರ ಬದ್ಧ: ಈ ಹಿಂದೆ ಆಗಸ್ಟ್‌ನಲ್ಲಿ ಸಲಹಾ ಸಮಿತಿ ಸಭೆ ನಡೆಸಿದ ನಮಗೆ 11 ಟಿಎಂಸಿ ನೀರಿನ ಲಭ್ಯತೆ ಕೊರತೆ ಇತ್ತು. ಮಲೆನಾಡು ಭಾಗದಲ್ಲಿ ಮಳೆಯಾಗಲಿದೆ ಎಂದು ಭಾವಿಸಿದ್ದೆವು. ಸೂಕ್ತ ಮಳೆಯಾಗದ ಕಾರಣ ಇದೀಗ ನೀರಿಗೆ ಸಮಸ್ಯೆ ಎದುರಾಗಿದೆ. ತುಂಗಭದ್ರಾ ಎಡದಂಡೆಯ ರೈತರು ಪ್ರಸ್ತುತ ಐದು ಲಕ್ಷಕ್ಕಿಂತ ಹೆಚ್ಚು ಎಕರೆ ಪ್ರದೇಶದಲ್ಲಿ ಭತ್ತ ಬೆಳೆದಿದ್ದಾರೆ. ₹2,300 ಕೋಟಿ ಮೌಲ್ಯದ ಬೆಳೆ ಇದೆ. ಬೆಳೆ ಉಳಿಸುವ ಕೆಲಸ ಮಾಡಬೇಕಿದೆ. ರೈತರ ಹಿತ ಕಾಪಾಡಲಾಗುವುದು ಎಂದರು.ಸಭೆಯಲ್ಲಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಎನ್.ಎಸ್. ಬೋಸರಾಜ್, ಬಿ.ನಾಗೇಂದ್ರ, ಸಂಸದ ಕರಡಿ ಸಂಗಣ್ಣ, ಶಾಸಕರಾದ ಬಸನಗೌಡ ತುರುವಿಹಾಳ್, ಎಚ್.ಆರ್. ಗವಿಯಪ್ಪ, ಹಂಪನಗೌಡ ಬಾದರ್ಲಿ, ಗಣೇಶ್, ರೈತ ಮುಖಂಡರು, ಇನ್ನಿತರರು ಉಪಸ್ಥಿತರಿದ್ದರು.11ಕ್ಕೆ ಮತ್ತೊಂದು ಸಭೆ: ಆಂಧ್ರ ಕೋಟಾದ ಒಂದು ಟಿಎಂಸಿ ನೀರನ್ನು ಹೊಂದಾಣಿಕೆ ಆಧಾರದಲ್ಲಿ ಪಡೆಯಲು ಅ.11ರಂದು ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಸಭೆಯಲ್ಲಿ ನಾಲ್ಕು ಜಿಲ್ಲೆಯ ಜನಪ್ರತಿನಿಧಿಗಳು, ನೀರಾವರಿ ಇಲಾಖೆ ಕಾರ್ಯದರ್ಶಿ ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಇದೇ ವೇಳೆ ಮಾಹಿತಿ ನೀಡಿದರು.