ವೇತನ ಪಾವತಿಗೆ ಆಗ್ರಹಿಸಿ ನೀರುಗಂಟಿಗಳ ಪ್ರತಿಭಟನೆ

| Published : Oct 31 2025, 02:30 AM IST

ವೇತನ ಪಾವತಿಗೆ ಆಗ್ರಹಿಸಿ ನೀರುಗಂಟಿಗಳ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಾಲ್ಕು ತಿಂಗಳಿಂದ ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ನಗರದ ನೀರುಗಂಟಿಗಳು ನಗರಸಭೆ ಕಾರ್ಯಾಲಯದ ಎದುರು ಗುರುವಾರ ಪ್ರತಿಭಟನೆ ನಡೆಸಿ, ವಿಷ ಸೇವಿಸಲು ಯತ್ನಿಸಿದ ಘಟನೆ ನಡೆಯಿತು.

ಹಾವೇರಿ: ನಾಲ್ಕು ತಿಂಗಳಿಂದ ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ನಗರದ ನೀರುಗಂಟಿಗಳು ನಗರಸಭೆ ಕಾರ್ಯಾಲಯದ ಎದುರು ಗುರುವಾರ ಪ್ರತಿಭಟನೆ ನಡೆಸಿ, ವಿಷ ಸೇವಿಸಲು ಯತ್ನಿಸಿದ ಘಟನೆ ನಡೆಯಿತು.ನಗರದಲ್ಲಿ 35 ನೀರುಗಂಟಿಗಳು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಅವರಿಗೆ ಸಂಬಳ ನೀಡಿಲ್ಲ. ಶಿರಸಿ ಮೂಲದ ಪ್ರಕಾಶ ಎಂಬುವರು ನೀರುಗಂಟಿಗಳ ವೇತನ ಪಾವತಿಸುವ ಗುತ್ತಿಗೆ ಪಡೆದಿದ್ದು, ಸಮಯಕ್ಕೆ ಸರಿಯಾಗಿ ವೇತನ ನೀಡದೇ ಸತಾಯಿಸುತ್ತಿದ್ದಾರೆ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಸಾಲಗಾರರು ಮನೆಗೆ ಬಂದು ಕೂರುತ್ತಿದ್ದಾರೆ. ಹೀಗಾದರೆ ನಾವು ಹೇಗೆ ಜೀವನ ಮಾಡಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಶಿರಸಿ ಮೂಲದ ಗುತ್ತಿಗೆದಾರ ಪ್ರಕಾಶ ಅವರಿಗೆ ಒಂದು ತಿಂಗಳ ಹಿಂದೆಯೇ ಚೆಕ್ ಕೊಟ್ಟಿದ್ದೇವೆ. ಆದರೂ ಈವರೆಗೆ ವೇತನ ಪಾವತಿಸಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಕೇಳಿದರೆ ಯಾರೂ ಸೂಕ್ತವಾಗಿ ಸ್ಪಂದಿಸಲಿಲ್ಲ. ಹೀಗಾಗಿ, ಮನನೊಂದು ವಿಷ ಸೇವಿಸಲು ಮುಂದಾಗಿದ್ದೇವೆ. ಸಾಲಗಾರರು ಮನೆ ಮುಂದೆ ಬಂದು ಗಲಾಟೆ ಮಾಡುತ್ತಿದ್ದಾರೆ. ಗುತ್ತಿಗೆದಾರರು ನೀರುಗಂಟಿಗಳಿಗೆ ತಲಾ 16 ಸಾವಿರ ರು., ವೇತನ ನೀಡುತ್ತಿದ್ದಾರೆ. ಪಿಎಫ್, ಇಎಸ್‌ಐ ಎಲ್ಲ ಕೊಡುತ್ತಾರೆ. ಚೆಕ್ ಕೊಟ್ಟು 15-20 ದಿನ ಆದರೂ ವೇತನ ಪಾವತಿಸುವುದಿಲ್ಲ. ಈ ಬಗ್ಗೆ ಕೇಳಲು ಕರೆ ಮಾಡಿದರೆ ಗುತ್ತಿಗೆದಾರರು ಕರೆ ಸ್ವೀಕರಿಸುವುದಿಲ್ಲ ಎಂದು ನೀರುಗಂಟಿಗಳು ಆರೋಪಿಸಿದರು.ಪೌರಾಯುಕ್ತ ಎಚ್.ಕಾಂತರಾಜು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು. ದೀಪಾವಳಿಗೂ ಮೊದಲೇ ನಗರಸಭೆಯಿಂದ ಎರಡು ತಿಂಗಳ ವೇತನ ಬಿಡುಗಡೆ ಮಾಡಲಾಗಿದೆ. ಬ್ಯಾಂಕ್ ಖಾತೆ ಬದಲಾವಣೆಯ ತಾಂತ್ರಿಕ ಕಾರಣದಿಂದ ವೇತನ ಬಿಡುಗಡೆ ತಡವಾಗಿದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಶೀಘ್ರವೇ ವೇತನ ಪಾವತಿಸಲು ಕ್ರಮ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ ಎಂದು ಭರವಸೆ ನೀಡಿದರು.