ಜೀವವೈವಿಧ್ಯತೆಯ ಕೊಂಡಿ ಕಳಚದಂತೆ ಸಂರಕ್ಷಿಸಿಕೊಳ್ಳಬೇಕಾದ ಹೊಣೆ, ಜವಾಬ್ದಾರಿ ಎಲ್ಲರದ್ದಾಗಿರುತ್ತದೆ ಎಂದು ಶಿರಸಿಯ ಸಮಗ್ರ ವಿಕಾಸ ಟ್ರಸ್ಟ್ ಅಧ್ಯಕ್ಷ ಉಮಾಪತಿ ಭಟ್ ಹೇಳಿದರು.
ಕನ್ನಡಪ್ರಭ ವಾರ್ತೆ ಸೊರಬ
ಜೀವವೈವಿಧ್ಯತೆಯ ಕೊಂಡಿ ಕಳಚದಂತೆ ಸಂರಕ್ಷಿಸಿಕೊಳ್ಳಬೇಕಾದ ಹೊಣೆ, ಜವಾಬ್ದಾರಿ ಎಲ್ಲರದ್ದಾಗಿರುತ್ತದೆ ಎಂದು ಶಿರಸಿಯ ಸಮಗ್ರ ವಿಕಾಸ ಟ್ರಸ್ಟ್ ಅಧ್ಯಕ್ಷ ಉಮಾಪತಿ ಭಟ್ ಹೇಳಿದರು.ಗುರುವಾರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಪರಿಸರ ಜಾಗೃತಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ನಮ್ಮ ಭೂಮಿ-ನಮ್ಮ ಅರಿವು ಪರಿಸರ ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
ಪ್ರತಿಯೊಂದು ಜೀವಿಯೂ ತಮ್ಮ ಮೂಲ ಪ್ರವೃತ್ತಿಯನ್ನು ಉಳಿಸಿಕೊಂಡಿದ್ದು, ಪ್ರಕೃತಿಯ ನಿಯಂತ್ರಣದಲ್ಲಿನ ತಮ್ಮ ಪಾಲಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿವೆ. ಆದರೆ, ನಾಗರೀಕ ಪ್ರಭಾವ ಬೀರಿರುವ ಮನುಷ್ಯ ಪ್ರಾಣಿ ಭೂಮಿಯ ಉಳಿವಿಗೆ ಅಗತ್ಯವಿರುವ ಇನ್ನಿತರ ಜೀವರಾಶಿಗಳನ್ನು ಹೊಸಕಿ ಹಾಕುತ್ತಿರುವುದು ಆತಂಕಕಾರಿ ಸಂಗತಿ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್. ಪಾಟೀಲ್ ಮಾತನಾಡಿ, ಬೆಳೆಯುವ ವಯಸ್ಸಿನಲ್ಲಿ ಮಕ್ಕಳಿಗೆ ಪರಿಸರ ಪ್ರಜ್ಞೆ, ಮನುಷ್ಯನ ಬದುಕಿನಲ್ಲಿ ಪರಿಸರದ ಪಾತ್ರ ಏನು ಎಂಬುದರ ಅರಿವು ನೀಡಬೇಕು. ಮಲೆನಾಡು ಕಾಡನ್ನು ಕಳೆದುಕೊಳ್ಳುತ್ತಿರುವ ಭೀತಿಯಲ್ಲಿರುವ ನಾವು ಉಳಿಸಿ, ಬೆಳೆಸುವುದರ ಜತೆಗೆ ಮಕ್ಕಳಿಗೆ ಮರ-ಗಿಡಗಳ ಪರಿಚಯ ಮತ್ತು ಅವುಗಳ ಹೆಸರನ್ನು ತಿಳಿಹೇಳಬೇಕಿದೆ ಎಂದರು.
ಈ ವೇಳೆ ಶಿರಸಿಯ ಉಮಾಪತಿ ಭಟ್ ಅವರ ಕೃತಿ ಸಸ್ಯಲೋಕ ಪುಸ್ತಕ ಬಿಡುಗಡೆ ಮಾಡಲಾಯಿತು. ಕೃತಿಯ ಕುರಿತು ಶ್ರೀಪಾದ ಬಿಚ್ಚುಗತ್ತಿ ಮಾತನಾಡಿದರು.ನಂತರ ವಿದ್ಯಾರ್ಥಿಗಳಿಗೆ ಪರಿಸರ ರಸಪ್ರಶ್ನೆ, ಸಸ್ಯ ಗುರುತಿಸುವಿಕೆಯ ಸ್ಪರ್ಧೆ ಏರ್ಪಡಿಸಲಾಗಿತ್ತು. ಆರ್.ಸುಮಂತ್, ಹರ್ಷಿತಾ ಪಿ. ಆಚಾರಿ, ಧನ್ಯಶ್ರೀ, ಕೆ. ಸ್ಪೂರ್ತಿ, ಎಂ. ಮನೋಜ್ ಬಹುಮಾನ ಪಡೆದರು. ಕಾಲೇಜು ಪ್ರಾಚಾರ್ಯ ಎಂ. ಸುರೇಶಪ್ಪ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ನಾಗರಾಜ ಜೈನ್, ಪುಷ್ಪಾ, ಸರ್ವೋದಯ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಹೆಚ್.ಎಂ. ಪ್ರಶಾಂತ್, ಹೆಲ್ಪಿಂಗ್ ಹ್ಯಾಂಡ್ ಮಧುರಾಮ್, ರಾ.ಸೇ. ಯೋಜನಾಧಿಕಾರಿ ಡಾ. ಉಮೇಶ್ ಭದ್ರಾಪುರ, ರೇವಣಪ್ಪ ಮೊದಲಾದವರು ಹಾಜರಿದ್ದರು. ಜಿ. ನಿತಿನ್, ನಿರೂಪಿಸಿ, ತೇಜಸ್ವಿನಿ ನಾಯರ್ ಪ್ರಾರ್ಥಿಸಿದರು, ಅಪ್ಸಾನ ಸ್ವಾಗತಿಸಿ, ಜ್ಯೋತಿ ವಂದಿಸಿದರು.