ನೀರು ಉಳಿಸಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ

| Published : Nov 12 2024, 12:48 AM IST

ಸಾರಾಂಶ

ಶಿವಮೊಗ್ಗ: ಮನುಷ್ಯನ ನಾಗರಿಕತೆ ಹುಟ್ಟಿರುವುದೇ ನದಿ ಪಾತ್ರದಲ್ಲಿ ಹಾಗಾಗಿ ಪ್ರಕೃತಿ ದತ್ತವಾಗಿ ಬಂದಂತಹ ಗಾಳಿ, ಬೆಳಕು ಹಾಗೂ ನೀರನ್ನು ಮುಂದಿನ ಪೀಳಿಗೆಗೆ ಜಾಗೃತಿಯಾಗಿ ಸಾಗಿಸುವ ಜವಾಬ್ದಾರಿ ನೆಮ್ಮಲ್ಲರ ಮೇಲಿದೆ ಎಂದು ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಶಿವಮೊಗ್ಗ: ಮನುಷ್ಯನ ನಾಗರಿಕತೆ ಹುಟ್ಟಿರುವುದೇ ನದಿ ಪಾತ್ರದಲ್ಲಿ ಹಾಗಾಗಿ ಪ್ರಕೃತಿ ದತ್ತವಾಗಿ ಬಂದಂತಹ ಗಾಳಿ, ಬೆಳಕು ಹಾಗೂ ನೀರನ್ನು ಮುಂದಿನ ಪೀಳಿಗೆಗೆ ಜಾಗೃತಿಯಾಗಿ ಸಾಗಿಸುವ ಜವಾಬ್ದಾರಿ ನೆಮ್ಮಲ್ಲರ ಮೇಲಿದೆ ಎಂದು ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ನಿರ್ಮಲ ತುಂಗಾಭದ್ರಾ ಅಭಿಯಾನದ ಅಂಗವಾಗಿ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ, ಪರ್ಯಾವರಣ ಟ್ರಸ್ಟ್ ಸಹಯೋಗದಲ್ಲಿ ಸೋಮವಾರ ಕುವೆಂಪು ರಂಗಮಂದಿರದ ಆವರಣದಲ್ಲಿ ಆಯೋಜಿಸಿದ್ದ ಯುವ ಜಾಗೃತಿ ಕಾರ್ಯಕ್ರಮ ಮತ್ತು ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.ನೀರು ಸಂಸ್ಕೃತಿಯ ಪ್ರತೀಕವೇ ಆಗಿದೆ. ಅದರಲ್ಲೂ ತುಂಗಾ, ಭದ್ರಾ, ಸಿಂಧೂ, ಕಾವೇರಿ ಮುಂತಾದ ಎಲ್ಲಾ ನದಿಗಳು ಭಾರತೀಯ ಸಂಸ್ಕೃತಿಯ ಅಂಗವಾಗಿವೆ. ನಾಗರಿಕತೆಗಳು ಕೂಡ ಇಲ್ಲಿ ಹುಟ್ಟಿಕೊಂಡಿವೆ. ನೀರು ಜೀವಜಲ. ಅದನ್ನು ಉಳಿಸಬೇಕಾದ ಹೊಣೆ ಕೂಡ ನಮ್ಮದೇ ಆಗಿದೆ. ಇಂದು ನದಿಗಳೆಲ್ಲವೂ ಕಲುಷಿತಗೊಂಡಿವೆ. ಇವುಗಳನ್ನು ಕಾಪಾಡುವ ಹಿನ್ನಲೆಯಲ್ಲಿ ಎಲ್ಲರೂ ಪ್ರಯತ್ನಿಸಬೇಕು. ಮುಖ್ಯವಾಗಿ ಯುವಕರು ಇದರಲ್ಲಿ ಮುಖ್ಯಪಾತ್ರ ವಹಿಸಬೇಕು ಎಂದರು.ನಮ್ಮ ಪರಿಸರ ದೇವರು ಕೊಟ್ಟ ವರ. ಅದನ್ನು ನಮ್ಮ ಹಿರಿಯರು ಕಾಪಾಡಿಕೊಂಡು ಬಂದಿದ್ದಾರೆ. ಹಿರಿಯರು ಕೊಟ್ಟಿದ್ದನ್ನೇ ನಾವು ಅನುಭವಿಸುತ್ತಾ ಬಂದಿದ್ದೇವೆ. ಅದನ್ನು ಮುಂದಿನ ಪೀಳಿಗೆಗೂ ವರ್ಗಾವಣೆ ಮಾಡಬೇಕಾದುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ 400 ಕಿ.ಮೀ. ಉದ್ದದ ಈ ಜಾಗೃತಿಯ ಪಾದಯಾತ್ರೆ ಅರ್ಥಗರ್ಭಿತವಾಗಿದೆ ಎಂದರು.ಈ ಸಂದರ್ಭದಲ್ಲಿ ಸಾವಿರಾರು ಯುವಕರು ನದಿಗಳ ಸಂರಕ್ಷಣೆಗಾಗಿ ಘೋಷಣೆಯ ಮೂಲಕ ಕುವೆಂಪು ರಂಗಮಂದಿರದಿಂದ ಹೊನ್ನಾಳಿ ರಸ್ತೆಯ ಚಟ್ನಳ್ಳಿಯವರೆಗೆ ಪಾದಯಾತ್ರೆ ನಡೆಸಿದರು.

ಗಂಗಾ ಸ್ನಾನ- ತುಂಗಾ ಪಾನ, ಶುದ್ಧ ನೀರು ನಮ್ಮೆಲ್ಲರ ಹಕ್ಕು, ಶುದ್ಧ ನೀರು ಕುಡಿಯದ ದೇಹ ಬದುಕುವುದೇ ಸಂದೇಹ, ಶುದ್ಧ ನೀರು ಸ್ವಚ್ಛತೆಯ ಸಂಕೇತ, ನದಿಗಳನ್ನು ಕಾಪಾಡಿ ಎಂಬ ಘೋಷಣೆಯ ಭಿತ್ತಿಪತ್ರ ಹಿಡಿದು ಪಾದಯಾತ್ರೆಯಲ್ಲಿ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಪರಿಸರವಾದಿ ಬಿ.ಎಂ.ಕುಮಾರಸ್ವಾಮಿ, ಆರ್.ಎಸ್.ಎಸ್. ಮುಖಂಡ ಪಟ್ಟಾಭಿರಾಮ್, ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ಕಾರ್ಯಕಾರಿ ಸಮಿತಿ ಸದಸ್ಯ ವಿವೇಕ್ ತ್ಯಾಗಿ ಇದ್ದರು.ರಾಜ್ಯ ಸರ್ಕಾರ ನದಿಗಳ ರಕ್ಷಣೆಗೆ ಕಾನೂನಿನ ಬಲ ನೀಡಬೇಕು

ಶಿವಮೊಗ್ಗ: ತುಂಗಭದ್ರಾ ನದಿಗಳ ರಕ್ಷಣೆಗೆ ಹಮ್ಮಿಕೊಂಡಿರುವ ಅಭಿಯಾನ ಶ್ಲಾಘನೀಯ. ಆದರೆ, ಇದಕ್ಕೆ ಪೂರಕವಾಗಿ ರಾಜ್ಯ ಸರಕಾರ ಕಾನೂನಿನ ಬಲ ನೀಡಬೇಕಿದೆ ಎಂದು ಕೂಡ್ಲಿ ಶೃಂಗೇರಿ ಮಠದ ಶ್ರೀ ಅಭಿನವ ಶಂಕರ ಭಾರತಿ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ನಗರದ ಕೋರ್ಪಲಯ್ಯನ ಛತ್ರ ಮಂಟಪದಲ್ಲಿ ಹೊಸದಿಲ್ಲಿಯ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಹಾಗೂ ಪರ್ಯಾವರಣ ಟ್ರಸ್ಟ್ ವತಿಯಿಂದ ನಿರ್ಮಲ ತುಂಗಭದ್ರಾ ಅಭಿಯಾನ ಅಂಗವಾಗಿ ಭಾನುವಾರ ಸಂಜೆ ಆಯೋಜಿಸಿದ್ದ ‘ತುಂಗಾ ಆರತಿ’ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.ನದಿ ಮಲೀನಗೊಳ್ಳುವುದನ್ನು ತಡೆಯಬೇಕಾದರೆ, ಅದಕ್ಕೆ ಕೃಷಿಯ ಮೂಲಕ ಸೇರುತ್ತಿರುವ ರಾಸಾಯನಿಕವನ್ನೂ ನಿಯಂತ್ರಿಸಬೇಕು. ನದಿ ಪಾತ್ರದಲ್ಲಿ ಮರಗಳ ರಕ್ಷಣೆ ಆಗಬೇಕು. ಭೂಮಿಗೆ ನೀರು ಇಂಗಿಸುವ ಮರಗಳನ್ನು ನೆಟ್ಟು ಕಾಪಾಡಬೇಕು ಎಂದು ಸಲಹೆ ನೀಡಿದರು.ನೀರಿನ ಸೆಲೆಗಳನ್ನು ರಕ್ಷಿಸಬೇಕಾದರೆ ಪೂರಕ ಕಾನೂನುಗಳನ್ನು ಮಾಡಬೇಕು. ಅದು ಸರಕಾರದಿಂದ ಮಾತ್ರ ಸಾಧ್ಯ. ಜನರ ಮನಸ್ಥಿತಿಯೂ ಬದಲಾಗಬೇಕಿದೆ. ಸರಕಾರವನ್ನೇ ಮೋಸ ಮಾಡುವ ಮನಸ್ಥಿತಿ ಜನರಲ್ಲಿದ್ದು, ಅದೂ ಬದಲಾಗಬೇಕು ಎಂದರು.ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪ್ರಮುಖರಾದ ಶಂಕರ್, ವಿವೇಕ್ ತ್ಯಾಗಿ, ಪುಷ್ಪಾವತಿ, ಆರ್.ಕೆ.ಸಿದ್ದರಾಮಣ್ಣ, ಎಚ್.ಸಿ.ಯೋಗೇಶ್ ಇತರರಿದ್ದರು.

ರಾಮಪ್ರಸಾದ್ ಅರ್ಚಕರ ತಂಡದಿಂದ ತುಂಗಾರತಿ ನೆರವೇರಿತು. ಶಾಸಕ ಚನ್ನಬಸಪ್ಪ ಸ್ವಾಗತಿಸಿದರು. ತ್ಯಾಗರಾಜ ಮಿತ್ಯಾಂತ ನಿರೂಪಿಸಿದರು. ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು. ತುಂಗಾ ಆರತಿ ವೇಳೆ ಬಾಣಬಿರಿಸುಗಳನ್ನು ಹಾರಿಸಲಾಯಿತು.